ಇರಾನ್ (Iran) ವಶಪಡಿಸಿಕೊಂಡಿದ್ದ ಇಸ್ರೇಲ್ಗೆ ಸಂಬಂಧಿಸಿದ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿಗಳಿದ್ದರು, ಅವರನ್ನು ಇರಾನ್ ಬಂಧಿಸಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಇರಾನ್ ನಾವು ಭಾರತೀಯರನ್ನು ಬಂಧಿಸಿಲ್ಲ. ಇಲ್ಲಿ ಹವಾಮಾನ ಸರಿ ಇಲ್ಲ ಅದಕ್ಕಾಗಿ ಅವರನ್ನು ಇಲ್ಲಿ ಇರಿಸಲಾಗಿದೆ. ಖಂಡಿತ ಅವರು ಬಯಸಿದಾಗ ಭಾರತಕ್ಕೆ ಹೋಗಬಹುದು ಎಂದು ಇರಾನ್ ರಾಯಭಾರಿ ಇರಾಜ್ ಇಲಾಹಿ ಹೇಳಿದ್ದಾರೆ. ಇದೀಗ ಈ ಹೇಳಿಕೆ ಭಾರತ ರಾಜತಾಂತ್ರಿಕತೆಗೆ ಮತ್ತೊಂದು ವಿಜಯ ಎಂದು ಹೇಳಲಾಗಿದೆ.
ಇರಾನ್ ರಾಯಭಾರಿ ಪ್ರಕಾರ, ಪರ್ಷಿಯನ್ ಕೊಲ್ಲಿಯಲ್ಲಿ ಹವಾಮಾನ ಪರಿಸ್ಥಿತಿ ಉತ್ತಮವಾಗಿಲ್ಲ, ಆ ಕಾರಣದಿಂದ ಆ 17 ಭಾರತೀಯ ಸಿಬ್ಬಂದಿಗಳು ಇಲ್ಲಿದ್ದಾರೆ. ಹವಾಮಾನ ಸುಧಾರಿಸಿದ ನಂತರ ಅವರು ಭಾರತಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. ಭಾರತಕ್ಕೆ ಹೋಗಲು ಅವರು ಹಡಗನ್ನು ಬಳಸಬಹುದು ಎಂದು ಹೇಳಿದ್ದಾರೆ. ಹಡಗಿನಲ್ಲಿರುವ ರಷ್ಯಾ, ಪಾಕಿಸ್ತಾನ ಮತ್ತು ಫಿಲಿಪೈನ್ಸ್ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಇರಾನ್ ಹೇಳಿದೆ.
ಈ ಹಿಂದೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು 17 ಜನ ಭಾರತೀಯ ಸಿಬ್ಬಂದಿಗಳನ್ನು ಭಾರತ ಸರ್ಕಾರಿ ಅಧಿಕಾರಿಗಳು ಭೇಟಿಯಾಗಲು ಅವಕಾಶ ನೀಡಬೇಕು ಹಾಗೂ ಅವರನ್ನು ಬಿಡುಗಡೆ ಮಾಡಬೇಕು ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರಿಗೆ ಫೋನ್ ಕರೆ ಮೂಲಕ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್, ಖಂಡಿತವಾಗಿ ಜೈಶಂಕರ್ ನಿಮ್ಮ ಮನವಿಯನ್ನು ಗೌರವಿಸುತ್ತೇವೆ. ಈಗಾಗಗಲೇ ನಾವು ವಶಪಡಿಸಿಕೊಂಡಿರುವ ಹಡಗಿನ ಎಲ್ಲ ಮಾಹಿತಿಯನ್ನು ಪಡೆಯುತ್ತಿದ್ದೇವೆ. ನಿಮ್ಮ ಅಧಿಕಾರಿಗಳು ಹಡಗಿನಲ್ಲಿದ್ದ 17 ಭಾರತೀಯರನ್ನು ಭೇಟಿಯಾಗಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಅವರನ್ನು ಬಂಧಿಸಿಲ್ಲ, ಮರಳಿ ಭಾರತಕ್ಕೆ ಕಳುಹಿಸಲಾಗುವುದು ಎಂದು ಇರಾನ್ ಹೇಳಿದೆ.
ಇದನ್ನೂ ಓದಿ: ದುಬೈನಲ್ಲಿ ಭಾರಿ ಮಳೆ, ವಿಮಾನಗಳ ಹಾರಾಟ ಸ್ಥಗಿತ, ಒಮಾನ್ನಲ್ಲಿ 18 ಮಂದಿ ಸಾವು
ಇಸ್ರೇಲ್ ಮೇಲೆ ಇರಾನ್ ಏ.13ರಂದು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿತ್ತು. ಕಿಲ್ಲರ್ ಡ್ರೋನ್ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಕ್ರೂಸ್ ಕ್ಷಿಪಣಿಗಳು ಸೇರಿದಂತೆ ಇರಾನ್ 200ಕ್ಕೂ ಹೆಚ್ಚು ಬಗೆಯ ಡ್ರೋನ್ ದಾಳಿಗಳನ್ನು ನಡೆಸಿತ್ತು. ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿತ್ತು. ಇರಾನ್ ಸೇನೆಯು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಇರಾನ್ ಇಸ್ರೇಲ್ ಮೇಲೆ 100ಕ್ಕೂಹೆಚ್ಚು ಡ್ರೋನ್ಗಳನ್ನು ಹಾರಿಸಿತ್ತು. ಇರಾನ್ ದಾಳಿಯ ನಂತರ ಇಸ್ರೇಲ್ ರಕ್ಷಣಾ ಪಡೆ ತೀವ್ರ ಕಟ್ಟೆಚ್ಚರವಹಿಸಿದೆ. ಇಸ್ರೇಲಿ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲೇ ಡ್ರೋನ್ ಮತ್ತು ಕ್ಷಿಪಣಿದಾಳಿಗಳನ್ನು ತಡೆಹಿಡಿಯಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ