
ನವದೆಹಲಿ, ಅಕ್ಟೋಬರ್ 14: ಗಾಜಾ ಕದನ ವಿರಾಮ ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಮಾಡಿಕೊಂಡ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಸ್ವಾಗತಿಸಿದ್ದಾರೆ. ಅದರ ಬೆನ್ನಲ್ಲೇ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಭಾರತದ ಪ್ರಧಾನಿಯನ್ನು ಹೊಗಳಿದ್ದಾರೆ. ಭಾರತ ಅತ್ಯುತ್ತಮ ದೇಶ. ಅದನ್ನು ಮುನ್ನಡೆಸುತ್ತಿರುವವರು ನನ್ನ ಉತ್ತಮ ಸ್ನೇಹಿತ ಎಂದು ಟ್ರಂಪ್ ಹೇಳಿದ್ದಾರೆ. ವಿಶೇಷವೆಂದರೆ, ಟ್ರಂಪ್ ಈ ಹೇಳಿಕೆ ನೀಡುವಾಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಟ್ರಂಪ್ ಹಿಂದೆಯೇ ನಿಂತುಕೊಂಡಿದ್ದರು.
ಇಸ್ರೇಲ್-ಹಮಾಸ್ ಕದನ ವಿರಾಮ ಒಪ್ಪಂದದ ನಂತರ ಈಜಿಪ್ಟ್ ನಗರದಲ್ಲಿ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ಜತೆಯಾಗಿ ಚೆನ್ನಾಗಿ ಮುಂದುವರಿಯಲಿವೆ ಎಂಬುದು ನನ್ನ ಭಾವನೆ ಎಂದರು.
ಭಾರತ ಒಂದು ಅದ್ಭುತ ದೇಶವಾಗಿದ್ದು, ನನ್ನ ಒಬ್ಬ ಆತ್ಮೀಯ ಸ್ನೇಹಿತ ಉನ್ನತ ಸ್ಥಾನದಲ್ಲಿದ್ದು ಮುನ್ನಡೆಸುತ್ತಿದ್ದಾರೆ. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಒಟ್ಟಿಗೆ ತುಂಬಾ ಚೆನ್ನಾಗಿ ಬದುಕಲಿವೆ ಎಂದು ನಾನು ಭಾವಿಸುತ್ತೇನೆ’ ಎಂದ ಟ್ರಂಪ್ ಹಿಂದೆ ತಿರುಗಿ ಶೆಹಬಾಜ್ ಷರೀಫ್ ಮುಖ ನೋಡಿದರು. ಅಲ್ಲದೆ, ಪಾಕ್ ಪ್ರಧಾನಿಯ ಮುಖ ನೋಡಿ, ‘ಹೌದಲ್ಲವೇ’ ಎಂದು ಪ್ರಶ್ನಿಸಿದರ. ಆಗ ಪಾಕಿಸ್ತಾನ ಪ್ರಧಾನಿ ನಗೆಯಾಡುತ್ತಾ ಹೌದೆಂದು ತಲೆಯಾಡಿಸಿದರು.
ಟ್ರಂಪ್ ಮಾತಿನ ವಿಡಿಯೋ
#WATCH | Egypt | US President Donald Trump says, “India is a great country with a very good friend of mine at the top and he has done a fantastic job. I think that Pakistan and India are going to live very nicely together…”
(Video source: The White House/YouTube) pic.twitter.com/rROPW57GCO
— ANI (@ANI) October 13, 2025
ಇದಕ್ಕೂ ಮೊದಲು ಷರೀಫ್ ಮತ್ತು ಅವರ ನೆಚ್ಚಿನ ಫೀಲ್ಡ್ ಮಾರ್ಷಲ್ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಶ್ಲಾಘಿಸಿದ ಟ್ರಂಪ್, ಪಾಕಿಸ್ತಾನ ಪ್ರಧಾನಿಯನ್ನು ಸಭೆಯನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಿದರು.
ಇದನ್ನೂ ಓದಿ: ಹಮಾಸ್ನಿಂದ ಒತ್ತೆಯಾಳುಗಳ ಬಿಡುಗಡೆ ಗಾಜಾದಲ್ಲಿ ಶಾಂತಿಗೆ ದಾರಿ ಮಾಡಿಕೊಡಬಹುದು: ಮೋದಿ
ಬರೋಬ್ಬರಿ 2 ವರ್ಷಗಳ ನಂತರ 20 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಇದು ಇಸ್ರೇಲ್-ಗಾಜಾ ಕದನ ವಿರಾಮಕ್ಕೆ ಕಾರಣವಾಗಿದೆ. ಈ ಕದನವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು. ಅಂತರರಾಷ್ಟ್ರೀಯ ಮಟ್ಟದ ಈ ಮಹತ್ವದ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದರು ಹಾಗೂ ಟ್ರಂಪ್ ಅವರ ಶಾಂತಿ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಕೂಡ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತೆರಿಗೆ ಸಮರದ ನಂತರ ಭಾರತ-ಅಮೆರಿಕ ಬಾಂಧವ್ಯ ಹಿಂದಿನಂತಿಲ್ಲ. ಉಭಯ ದೇಶಗಳ ನಡುವೆ ಶೀತಲ ಸಮರದ ಸ್ಥಿತಿ ಇತ್ತು. ಇದೀಗ ಮತ್ತೆ ಟ್ರಂಪ್-ಮೋದಿ ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿರುವುದು ಕುತೂಹಲ ಮೂಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ