24 ಗಂಟೆಯಲ್ಲಿ ಭಾರತದ ಮೇಲಿನ ಸುಂಕ ಹೆಚ್ಚಿಸುವುದಾಗಿ ಟ್ರಂಪ್ ಬೆದರಿಕೆ

ಭಾರತ ದೇಶ ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂದು ಸೋಮವಾರ (ಆಗಸ್ಟ್ 4) ಆಕ್ರೋಶ ಹೊರಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ತಿರುಗೇಟು ನೀಡಿತ್ತು. ಅಮೆರಿಕ ಮಾತ್ರ ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಹೊಂದಬಹುದಾ? ಎಂದು ಭಾರತ ಪ್ರಶ್ನಿಸಿತ್ತು. ಆದರೆ, ಮತ್ತೆ ಅದೇ ರಾಗ ಹಾಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಿನ 24 ಗಂಟೆಯೊಳಗೆ ಭಾರತದ ಮೇಲಿನ ಸುಂಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

24 ಗಂಟೆಯಲ್ಲಿ ಭಾರತದ ಮೇಲಿನ ಸುಂಕ ಹೆಚ್ಚಿಸುವುದಾಗಿ ಟ್ರಂಪ್ ಬೆದರಿಕೆ
Us President Donald Trump

Updated on: Aug 05, 2025 | 7:53 PM

ನವದೆಹಲಿ, ಆಗಸ್ಟ್ 5: ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಭಾರತದ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈ ಮೂಲಕ ಭಾರತ ಮತ್ತು ಅಮೆರಿಕದ ನಡುವಿನ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದೆ. ಭಾರತ ಕೂಡ ಅಮೆರಿಕದ (United States) ವಿರುದ್ಧ ನಿನ್ನೆ ತೀವ್ರ ಆಕ್ರೋಶ ಹೊರಹಾಕಿತ್ತು. ರಷ್ಯಾದ ಜೊತೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರೂ ಭಾರತಕ್ಕೆ ಮಾತ್ರ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ ಎಂದು ಭಾರತ ತಿರುಗೇಟು ನೀಡಿತ್ತು.

“ಭಾರತ ಎಲ್ಲರಿಗಿಂತ ಹೆಚ್ಚಿನ ಸುಂಕವನ್ನು ಹೊಂದಿದ್ದಾರೆ. ನಾವು ಸುಂಕವನ್ನು ಶೇ. 25ಕ್ಕೆ ನಿರ್ಧರಿಸಿದ್ದೆವು. ಆದರೆ ಮುಂದಿನ 24 ಗಂಟೆಗಳಲ್ಲಿ ನಾನು ಭಾರತದ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಏಕೆಂದರೆ ಭಾರತ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಈ ಮೂಲಕ ಅವರು ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಹಣ ನೀಡುತ್ತಿದ್ದಾರೆ. ಇದು ನನಗೆ ಸರಿಯಲ್ಲ ಎನಿಸುತ್ತಿದೆ” ಎಂದು ಟ್ರಂಪ್ ನೀಡಿದ ಸಂದರ್ಶನವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಮತ್ತೆ ಸುಂಕದ ಅಸ್ತ್ರ ಪ್ರಯೋಗಿಸಿದ ಅಮೆರಿಕ; ರಷ್ಯಾದ ತೈಲ ಖರೀದಿಸಿದ್ದಕ್ಕೆ ಭಾರತಕ್ಕೆ ಟ್ರಂಪ್ ಬೆದರಿಕೆ

ಅಮೆರಿಕದ ಸರಕುಗಳ ಮೇಲಿನ ಭಾರತದ ಹೆಚ್ಚಿನ ಸುಂಕ ದರಗಳು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಲ್ಲಿ ಪ್ರಮುಖ ಅಂಶವಾಗಿ ಉಳಿದಿವೆ ಎಂದು ಅವರು ಹೇಳಿದ್ದಾರೆ. ಆದರೆ, ಟ್ರಂಪ್ ಭಾರತೀಯ ಆಮದುಗಳ ಮೇಲೆ ವಿಧಿಸಲು ಉದ್ದೇಶಿಸಿರುವ ಹೊಸ ಸುಂಕ ದರವನ್ನು ನಿರ್ದಿಷ್ಟವಾಗಿ ಘೋಷಿಸಿಲ್ಲ.

“ಭಾರತ ಉತ್ತಮ ವ್ಯಾಪಾರ ಪಾಲುದಾರನಲ್ಲ. ಅವರು ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡಿದ್ದಾರೆ, ಆದರೆ ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ಭಾರತದ ಮೇಲಿನ ಸುಂಕವನ್ನು ನಾವು ಶೇ. 25ಕ್ಕೆ ನಿರ್ಧರಿಸಿದ್ದೇವೆ. ಆದರೆ ಮುಂದಿನ 24 ಗಂಟೆಗಳಲ್ಲಿ ನಾನು ಅದನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಭಾರತ ರಷ್ಯಾದ ಯುದ್ಧ ಯಂತ್ರಕ್ಕೆ ಇಂಧನ ತುಂಬುತ್ತಿದೆ” ಎಂದು ಟ್ರಂಪ್ ಟೀಕಿಸಿದ್ದಾರೆ.

ಇದನ್ನೂ ಓದಿ: ಸುಮ್ಮನೆ ನಮ್ಮನ್ನು ಟಾರ್ಗೆಟ್ ಮಾಡಬೇಡಿ; ಟ್ರಂಪ್ ಸುಂಕ ಬೆದರಿಕೆಗೆ ಭಾರತ ತಿರುಗೇಟು

ಕಳೆದ ವಾರ ಭಾರತ ಮತ್ತು ರಷ್ಯಾ ಎರಡನ್ನೂ “ಸತ್ತ ಆರ್ಥಿಕತೆಗಳು” ಎಂದು ಕರೆದ ನಂತರ ಟ್ರಂಪ್ ಭಾರತದ ವಿರುದ್ಧ ತಮ್ಮ ದಾಳಿಯನ್ನು ಹೆಚ್ಚಿಸಿದ್ದಾರೆ. ಭಾರತೀಯ ಸರಕುಗಳ ಮೇಲೆ 25% ಸುಂಕವನ್ನು ವಿಧಿಸಿದ ನಂತರ ಈ ವಾರ ಭಾರತ ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ ಎಂದು ಉಲ್ಲೇಖಿಸಿ ಹೆಚ್ಚುವರಿ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಿನ್ನೆ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಭಾರತದ ವಿದೇಶಾಂಗ ಇಲಾಖೆ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವನ್ನು ತರಾಟೆಗೆ ತೆಗೆದುಕೊಂಡಿತ್ತು. “ಭಾರತವನ್ನು ಟೀಕಿಸುವ ರಾಷ್ಟ್ರಗಳೇ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ ಎಂದು ಬಹಿರಂಗವಾಗಿದೆ” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:52 pm, Tue, 5 August 25