ಸೌಥ್ ಕೆರೊಲೀನಾದ ಪ್ರಾಥಮಿಕ ಶಾಲೆಯ ಪ್ರಿನ್ಸಿಪಾಲರೊಬ್ಬರನ್ನು ಅವರ ಕಾರಿನಲ್ಲೇ ಗುಂಡಿಟ್ಟು ಕೊಲ್ಲಲಾಗಿದ್ದು ಅದೇ ಕಾರಲ್ಲಿದ್ದ ಶಂಕಿತನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಡಿಲ್ಲಾನ್ ಕೌಂಟಿ ಶರೀಫ್ ಡಗ್ಲಾಸ್ ಪರ್ನೆಲ್ (Douglas Pernell) ನೀಡಿರುವ ಹೇಳಿಕೆಯ ಪ್ರಕಾರ 54-ವರ್ಷ ವಯಸ್ಸಿನ ವೆಂಡಿ ಕುಕ್ (Wendy Cook) ಅವರನ್ನು ರವಿವಾರ ಗುಂಡಿಟ್ಟು ಕೊಲ್ಲಲಾಗಿದೆ. ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ಮೆಡಿಕಲ್ ಆಫೀಸರ್ ಡಾನ್ನೀ ಗ್ರಿಮ್ಸ್ ಲೀ (Danley Grimsley) ಅವರು ಕುಕ್ ಅವರನ್ನು ಕೊಲೆ ಮಾಡಲಾಗಿದೆ ಅಂತ ಹೇಳಿರುವರೆಂದು ಡಬ್ಲ್ಯೂಬಿಟಿಡಬ್ಲ್ಯೂ-ಟಿವಿ ವರದಿ ಮಾಡಿದೆ.
ರವಿವಾರ ಗುಂಡು ಹಾರಿಸಿದ ಶಬ್ದ ಕೇಳಿದ ಬಗ್ಗೆ ಕರೆಗಳು ಬಂದ ಬಳಿಕ ಬೆಳಗಿನ 3:15 ಕ್ಕೆ 31-ವರ್ಷ ವಯಸ್ಸಿನ ಕೈಲ್ ಚರ್ಚ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಡಿಲ್ಲಾನ್ ಹೊರವಲಯದಲ್ಲಿ ಬಂಧಿಸಿದರೆಂದು ಪರ್ನೆಲ್ ಹೇಳಿದ್ದಾರೆ. ಪೊಲೀಸರು ಅಪರಾಧ ನಡೆದ ಸ್ಥಳ ತಲುಪಿದಾಗ ಕಾರಿನೊಳಗೆ ಅವರು ಕುಕ್ ಮತ್ತು ಚರ್ಚ್ ಇಬ್ಬರನ್ನು ಕಂಡಿದ್ದಾರೆ ಆದರೆ ಅಷ್ಟರಲ್ಲಾಗಲೇ ಕುಕ್ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪರ್ನೆಲ್ ಹೇಳಿದ್ದಾರೆ. ಪೊಲೀಸರು ಗನ್ನೊಂದನ್ನು ಸಹ ವಶಪಡಿಸಿಕೊಂಡಿದ್ದಾರೆ.
ಡಿಲ್ಲಾನ್ ಕೌಂಟಿ ಸೆರೆಮನೆಯಲ್ಲಿ ಚರ್ಚ್ ನನ್ನು ಇರಿಸಲಾಗಿದ್ದು ಅವನ ವಿರುದ್ಧ ಕೊಲೆ, ಮತ್ತು ಹಿಂಸಾತ್ಮಕ ಕೃತ್ಯ ಜರುಗಿದಾಗ ಆಯುಧವನ್ನು ಹೊಂದಿದ್ದ ಆರೋಪಗಳನ್ನು ಹೊರಿಸಲಾಗಿದೆ. ತನ್ನ ಪರ ವಾದಿಸಲು ಅವನು ವಕೀಲರನ್ನು ಗೊತ್ತು ಮಾಡಿಕೊಂಡಿದ್ದಾನೆಯೋ ಇಲ್ಲವೋ ಅಂತ ತಿಳಿದುಬಂದಿಲ್ಲ.
ಡಿಲ್ಲಾನ್ ಕೌಂಟಿ ಸ್ಕೂಲ್ ಡಿಸ್ಟ್ರಿಕ್ಟ್ 4 ರಲ್ಲಿರುವ ಸ್ಟೀವರ್ಟ್ ಹೈಟ್ ಎಲಿಮೆಂಟರಿ ಶಾಲೆಯಲ್ಲಿ ಕುಕ್ ಪ್ರಿನ್ಸಿಪಾಲರಾಗಿದ್ದರು. ಡಿಸ್ಟ್ರಿಕ್ಟ್ 4 ಅಧೀಕ್ಷಕ ರೇ ರೋಜರ್ಸ್ ಅವರು ನೀಡಿರುವ ಹೇಳಿಕೆಯ ಪ್ರಕಾರ ಕುಕ್ ಅವರು ಸದರಿ ಶಾಲೆಯಲ್ಲಿ 25 ವರ್ಷಗಳ ಕಾಲ ಕೆಲಸ ಮಾಡಿದ್ದರು.
ಕುಕ್ ಅವರ ದುರ್ಮರಣದಿಂದ ಬಹಳ ದುಃಖವಾಗಿದೆ ಎಂದು ರಾಜ್ಯ ಶಿಕ್ಷಣ ಅಧೀಕ್ಷರಾದ ಮೊಲ್ಲಿ ಸ್ಪೀಯರ್ಮನ್ ಹೇಳಿದ್ದಾರೆ.
‘ಕುಕ್ ಸಹೋದ್ಯೋಗಿಗಳು ಮತ್ತು ಡಿಲ್ಲಾನ್ ಕೌಂಟಿ ಸ್ಕೂಲ್ ಡಿಸ್ಟ್ರಿಕ್ಟ್ 4 ನಲ್ಲಿರುವ ಅವರ ಸ್ನೇಹಿತರು ಆಕೆ ಶಾಲೆಗೆ ಒದಗಿಸಿದ ಸೇವೆ ಮತ್ತು ಒಬ್ಬ ಪ್ರಿನ್ಸಿಪಾಲಳಾಗಿ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿ ಮೇಲೆ ಬೀರಿದ ಪ್ರಭಾವನ್ನು ಮುಕ್ತಕಂಠದಿಂದ ಕೊಂಡಾಡುತ್ತಾರೆ,’ ಎಂದು ಸ್ಪೀಯರ್ಮನ್ ಹೇಳಿದ್ದಾರೆ. ‘ಅಕೆಯ ಅಕಾಲಿಕ ದುರ್ಮರಣದಿಂದ ಶೋಕತಪ್ತರಾಗಿರುವ ಡಿಲ್ಲಾನ್ ಶಾಲಾ ಸಮುದಾಯಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ,’ ಎಂದು ಅವರು ಹೇಳಿದ್ದಾರೆ.
ಆನ್ಲೈನಲ್ಲಿ ಕುಕ್ ಗೆ ಸಲ್ಲಿಸಲಾಗಿರುವ ಶ್ರದ್ಧಾಂಜಲಿಯ ಪ್ರಕಾರ ಅವರು ಒಬ್ಬ ಮಗಳು, ಒಬ್ಬ ಮಗ ಮತ್ತೊಬ್ಬ ಮೊಮ್ಮಗನನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರ ಇಂದು (ಬುಧವಾರ) ನಡೆಯಲಿದೆ.
ಪರ್ನೆಲ್ ನೀಡಿರುವ ಹೇಳಿಕೆಯಲ್ಲಿ ಕುಕ್ ಮತ್ತು ಚರ್ಚ್ ಸ್ನೇಹಿತರಾಗಿದ್ದರು ಆದರೆ ಆಕೆಯನ್ನು ಹತ್ಯೆಗೈಯುವ ಹಿಂದಿನ ಉದ್ದೇಶವೇನಾಗಿತ್ತು ಅನ್ನೋದು ಗೊತ್ತಾಗಿಲ್ಲ. ಕುಕ್ ಅವರ ಮಾಜಿ ವಿದ್ಯಾರ್ಥಿಗಳಲ್ಲಿ ಚರ್ಚ್ ಒಬ್ಬನಾಗಿದ್ದನೇ ಅನ್ನೋದು ಕೂಡ ಬೆಳಕಿಗೆ ಬಂದಿಲ್ಲ.
ಆನ್ಲೈನ್ ಮೂಲಕ ಲಭ್ಯವಾಗಿರುವ ಮಾಹಿತಿ ಪ್ರಕಾರ ಚರ್ಚ್ ನ ಮುಂದಿನ ವಿಚಾರಣೆ ಅಕ್ಟೋಬರ್ 5 ಕ್ಕೆ ನಿಗದಿ ಪಡಿಸಲಾಗಿದೆ.
ಡಬ್ಲ್ಯೂಬಿಟಿಡಬ್ಲ್ಯೂ-ಟಿವಿಯು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ, ಈಗ ವಿಚಾರಣೆಯಲ್ಲಿರುವ ಮತ್ತೊಂದು ಪ್ರಮಾದಿತ ಸಾವಿನ ಮೊಕದ್ದಮೆಯಲ್ಲಿ ಚರ್ಚ್ ಪಾತ್ರವನ್ನು ಉಲ್ಲೇಖಿಸಲಾಗಿದೆ ಎಂದು ವರದಿ ಮಾಡಿದೆ. ಅಧಿಕಾರಿಗಳ ಪ್ರಕಾರ, ಜೂನ್ 2020 ರಲ್ಲಿ ಕಾರೊಂದು ಎಟಿವಿ ಗೆ ಡಿಕ್ಕಿ ಹೊಡೆದ ನಂತರ ಟೆಡ್ಡಿ ಯಾರ್ಬರೋ ಹೆಸರಿನ ವ್ಯಕ್ತಿ ಸಾವನ್ನಪ್ಪಿದ್ದರು. ಕೋರ್ಟಿಗೆ ಸಲ್ಲಿಸಲಾಗಿರುವ ಅಫಿಡವಿಟ್ ನಲ್ಲಿ ಚರ್ಚ್ ಎಟಿವಿಯನ್ನು ಓಡಿಸುತ್ತಿದ್ದ ಎಂದು ಆರೋಪಿಸಿಲಾಗಿದೆ ಮತ್ತು ಯಾರ್ಬೋರೊ ಒಬ್ಬ ಪ್ರಯಾಣಿಕನಾಗಿದ್ದರು. ಕಾರ್‌ಗೆ ಹಾದುಹೋಗಲು ದಾರಿ ನೀಡಲು ಚರ್ಚ್ ವಿಫಲವಾದ ನಂತರ ಎಟಿವಿಗೆ ಕಾರು ಢಿಕ್ಕಿ ನ ಹೊಡೆದಿದೆ ಎಂದು ವರದಿಯಾಗಿದೆ.