AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಪೈರ್ ಸ್ಟೇಟ್ ಕಟ್ಟಡದ ತುದಿಯಲ್ಲಿ ಪ್ರಪೋಸ್ ಮಾಡಿದ ರಷ್ಯಾ ಜೋಡಿಗೆ ಗಡೀಪಾರು ಭೀತಿ

ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡದ ತುದಿಯಲ್ಲಿ ಪ್ರಪೋಸ್ ಮಾಡಿದ ರಷ್ಯಾ ಜೋಡಿ ಏಂಜೆಲಾ ನಿಕೊಲೌ ಮತ್ತು ಇವಾನ್ ಕುಜ್ನೆತ್ಸೊವ್ ಈಗ ಗಡೀಪಾರು ಭೀತಿ ಎದುರಿಸುತ್ತಿದ್ದಾರೆ. ಅನುಮತಿಯಿಲ್ಲದೆ ಕಟ್ಟಡ ಏರಿದ ಆರೋಪದಲ್ಲಿ ಅವರ ವಿರುದ್ಧ ಅಪಾಯಕಾರಿ ವರ್ತನೆ, ಆಸ್ತಿಗೆ ಹಾನಿ, ಅಕ್ರಮ ಪ್ರವೇಶದಂತಹ ಪ್ರಕರಣಗಳು ದಾಖಲಾಗಿವೆ. ಪ್ರೀತಿ ಮತ್ತು ಶಾಂತಿಯ ಸಂದೇಶ ಸಾರಲು ಹೀಗೆ ಮಾಡಿದ್ದಾಗಿ ಜೋಡಿ ಸಮರ್ಥಿಸಿಕೊಂಡಿದೆ, ಆದರೆ ಕಾನೂನು ಸಂಕಷ್ಟ ತಪ್ಪಿದಂತಿಲ್ಲ.

ಎಂಪೈರ್ ಸ್ಟೇಟ್ ಕಟ್ಟಡದ ತುದಿಯಲ್ಲಿ ಪ್ರಪೋಸ್ ಮಾಡಿದ ರಷ್ಯಾ ಜೋಡಿಗೆ ಗಡೀಪಾರು ಭೀತಿ
ಪ್ರೇಮನಿವೇದನೆ
ನಯನಾ ರಾಜೀವ್
|

Updated on: Nov 14, 2026 | 6:07 PM

Share

ನ್ಯೂಯಾರ್ಕ್​, ನವೆಂಬರ್ 14: ನ್ಯೂಯಾರ್ಕ್‌ನ ಪ್ರಸಿದ್ಧ ಎಂಪೈರ್ ಸ್ಟೇಟ್ ಕಟ್ಟಡದ ತುದಿಯನ್ನು ಏರಿ, ಪ್ರೀತಿಯ ಸಂದೇಶವಿರುವ ಧ್ವಜ ಪ್ರದರ್ಶಿಸಿ ಪ್ರೇಯಸಿಗೆ ಪ್ರಪೋಸ್ ಮಾಡಿದ್ದ ರಷ್ಯಾದ ಸಾಹಸಿ ಯುವಕನಿಗೆ ಸಂಕಷ್ಟ ಎದುರಾಗಿದೆ. 33 ವರ್ಷದ ಏಂಜೆಲಾ ನಿಕೊಲೌ ಮತ್ತು 32 ವರ್ಷದ ಇವಾನ್ ಕುಜ್ನೆತ್ಸೊವ್ ಅಮೆರಿಕದಿಂದ ಗಡೀಪಾರು ಆಗುವ ಭೀತಿ ಎದುರಿಸುತ್ತಿದ್ದಾರೆ.

2026ರ ಜುಲೈ 1ರಂದು ಈ ಜೋಡಿ ಕಟ್ಟಡದ ಸುಮಾರು 1,454 ಅಡಿ ಎತ್ತರದ ಆಂಟೆನಾ ಭಾಗವನ್ನು ಏರಿತ್ತು. ಅಲ್ಲಿ ಪ್ರೀತಿಯ ಶಕ್ತಿ ಅಧಿಕಾರದ ಪ್ರೀತಿಯನ್ನು ಮೀರಿದಾಗ ಜಗತ್ತಿಗೆ ಶಾಂತಿ ಸಿಗುತ್ತದೆ ಎಂಬ ಸಂದೇಶವಿರುವ ಧ್ವಜವನ್ನು ಪ್ರದರ್ಶಿಸಿದ್ದರು. ಬಳಿಕ ಇವಾನ್, ಏಂಜೆಲಾ ಅವರಿಗೆ ಮದುವೆಯ ಪ್ರಸ್ತಾಪ ಮಾಡಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಅನುಮತಿ ಇಲ್ಲದೆ ಕಟ್ಟಡ ಏರಿದ್ದ ಜೋಡಿ ಕಟ್ಟಡದ ನಿರ್ಬಂಧಿತ ಪ್ರದೇಶಕ್ಕೆ ಅನುಮತಿಯಿಲ್ಲದೆ ಪ್ರವೇಶಿಸಿ ಆಂಟೆನಾ ತುದಿಯನ್ನು ಏರಿದ್ದ ಆರೋಪ ಈ ಜೋಡಿಯ ಮೇಲಿದೆ. ಈ ಸಂಬಂಧ ಅವರ ವಿರುದ್ಧ ಗಂಭೀರ ಅಪರಾಧಗಳಾದ ಅಪಾಯಕಾರಿಯಾಗಿ ವರ್ತಿಸುವುದು, ಕಟ್ಟಡದ ಆಸ್ತಿಗೆ ಹಾನಿ ಮಾಡುವುದು ಮತ್ತು ಅಕ್ರಮವಾಗಿ ಪ್ರವೇಶಿಸುವುದು ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿದೆ.

ಪೊಲೀಸರ ದೂರಿನ ಪ್ರಕಾರ, ಕಟ್ಟಡದ 104ನೇ ಮಹಡಿಯಲ್ಲಿದ್ದ ಭದ್ರತಾ ಬಾಗಿಲಿನ ಬೀಗವನ್ನು ಮುರಿದು ಅವರು ಮೇಲ್ಭಾಗಕ್ಕೆ ತೆರಳಿದ್ದರು. ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲು ಪೊಲೀಸರು ಕಾರ್ಯಾಚರಣೆ ನಡೆಸಬೇಕಾಯಿತು.

ಇದನ್ನೂ ಓದಿ: Viral: ಮಗನ ಮದ್ವೆ ಬಗ್ಗೆ ಕೇಳಿದ ಸಂಬಂಧಿಗೆ ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದ ತಾಯಿ

ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ಏಂಜೆಲಾ ನವೆಂಬರ್ 12ರಂದು ಈ ಜೋಡಿ ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರಾಗಿತ್ತು. ವಿಚಾರಣೆಯ ಬಳಿಕ ಮಾತನಾಡಿದ ಏಂಜೆಲಾ, ಜಗತ್ತಿನಲ್ಲಿ ನೋವು ಮತ್ತು ಸಂಘರ್ಷಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರೀತಿ ಹಾಗೂ ಶಾಂತಿಯ ಸಂದೇಶ ಸಾರಲು ಈ ಪ್ರದರ್ಶನ ಮಾಡಿದ್ದಾಗಿ ಹೇಳಿದರು.

ಇವಾನ್ ಕೂಡ ಯಾವುದೇ ಆಸ್ತಿಗೆ ಹಾನಿ ಮಾಡುವ ಅಥವಾ ಯಾರನ್ನಾದರೂ ಅಪಾಯಕ್ಕೆ ಸಿಲುಕಿಸುವ ಉದ್ದೇಶ ತಮಗಿರಲಿಲ್ಲ ಎಂದು ಸಮರ್ಥಿಸಿಕೊಂಡರು. ಆದರೆ ಗಡೀಪಾರು ಭೀತಿ ಎದುರಾಗಿರುವುದರಿಂದ ಏಂಜೆಲಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.

ಒಪ್ಪಂದದ ವಿಚಾರದಲ್ಲಿ ವಕೀಲರು ಮತ್ತು ಪ್ರಾಸಿಕ್ಯೂಟರ್‌ಗಳ ನಡುವೆ ಭಿನ್ನಾಭಿಪ್ರಾಯ ಈ ಪ್ರಕರಣದಲ್ಲಿ ಸಣ್ಣ ಮಟ್ಟದ ಅಪರಾಧಗಳಿಗೆ ತಪ್ಪೊಪ್ಪಿಕೊಂಡು ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಒಪ್ಪಂದದ ಬಗ್ಗೆ ಚರ್ಚೆ ನಡೆದಿತ್ತು ಎಂದು ದಂಪತಿಯ ವಕೀಲ ನೋಮ್ ಬಿಯಾಲೆ ತಿಳಿಸಿದ್ದಾರೆ. ಈ ಒಪ್ಪಂದಕ್ಕೆ ಒಪ್ಪಿಕೊಂಡರೆ ಗಡೀಪಾರು ಸೇರಿದಂತೆ ಗಂಭೀರ ವಲಸೆ ಸಂಬಂಧಿತ ಸಮಸ್ಯೆಗಳಿಂದ ಪಾರಾಗಬಹುದಿತ್ತು ಎಂಬುದು ವಕೀಲರ ವಾದ.

ಆದರೆ ನವೆಂಬರ್ 12ರ ವಿಚಾರಣೆಗೆ ಮುನ್ನ ಈ ಒಪ್ಪಂದವನ್ನು ಹಿಂಪಡೆಯಲಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿ, ಯಾವುದೇ ಅಧಿಕೃತ ಒಪ್ಪಂದವನ್ನು ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಒಪ್ಪಂದದ ವಿಚಾರದಲ್ಲಿ ಎರಡೂ ಕಡೆಯವರ ಹೇಳಿಕೆಗಳು ಭಿನ್ನವಾಗಿವೆ.

ರಷ್ಯಾಕ್ಕೆ ವಾಪಸ್ ಹೋದರೆ ಏನಾಗಬಹುದು? ದಂಪತಿಯ ವಕೀಲರ ಪ್ರಕಾರ, ರಷ್ಯಾಕ್ಕೆ ಗಡೀಪಾರು ಆದರೆ ಇವಾನ್ ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಕಳುಹಿಸುವ ಸಾಧ್ಯತೆಯಿದೆ. ಏಂಜೆಲಾ ಅವರ ಕಲಾತ್ಮಕ ಅಭಿವ್ಯಕ್ತಿಗಳ ಕಾರಣಕ್ಕೆ ರಷ್ಯಾದಲ್ಲಿ ಜೈಲು ಶಿಕ್ಷೆ ಎದುರಾಗಬಹುದು ಎಂದು ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇದು ವಕೀಲರು ವ್ಯಕ್ತಪಡಿಸಿರುವ ಆತಂಕ ಮಾತ್ರ. ಸದ್ಯಕ್ಕೆ ಈ ಜೋಡಿಯನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ ಎಂದರ್ಥವಲ್ಲ. ಪ್ರಕರಣದ ಕಾನೂನು ಪ್ರಕ್ರಿಯೆ ಮುಂದುವರಿದಿದ್ದು, ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರದಿಂದಲೂ ಪ್ರಸಿದ್ಧರಾಗಿದ್ದ ಜೋಡಿ ಏಂಜೆಲಾ ಮತ್ತು ಇವಾನ್ ಸಾಮಾನ್ಯ ಪ್ರವಾಸಿಗರಲ್ಲ. ಎತ್ತರದ ಕಟ್ಟಡಗಳು ಮತ್ತು ಅಪಾಯಕಾರಿ ಸ್ಥಳಗಳನ್ನು ಏರಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸುವುದು ಇವರ ಹವ್ಯಾಸ. ಇವರ ಪ್ರೀತಿ ಮತ್ತು ಸಾಹಸಮಯ ಜೀವನದ ಕಥೆಯೇ 2024ರಲ್ಲಿ ಬಿಡುಗಡೆಯಾದ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ‘Skywalkers: A Love Story’ ವಿಷಯವಾಗಿತ್ತು. ಈ ಸಾಕ್ಷ್ಯಚಿತ್ರ 2024ರ ಜನವರಿಯಲ್ಲಿ ಸನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More