ಉಕ್ರೇನ್-ರಷ್ಯಾ ಗಡಿಯಲ್ಲಿ (Ukraine-Russia)ದಿನೇದಿನೆ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಭಾರತ ಇಂದು ತೀವ್ರ ಆತಂಕ ವ್ಯಕ್ತಪಡಿಸಿದೆ. ಪೂರ್ವ ಯುರೋಪ್ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಬೇಕು ಮತ್ತು ಸಮಸ್ಯೆಗೆ ಪರಸ್ಪರ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳಲು ರಾಜತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. ಪೂರ್ವ ಉಕ್ರೇನ್ನಲ್ಲಿ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ (Donetsk and Luhansk) ಪ್ರದೇಶಗಳ ಸ್ವಾತಂತ್ರ್ಯವನ್ನು ರಷ್ಯಾ ಮಾನ್ಯ ಮಾಡುವುದಾಗಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಬಹಿರಂಗವಾಗಿ ಘೋಷಿಸಿದ ಬಳಿಕ, ಉಕ್ರೇನ್, ಯುಎಸ್ ಮತ್ತು ಯುಕೆ ಜತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಅಧಿವೇಶನ ನಡೆಸಿತು. ಈ ಅಧಿವೇಶನದಲ್ಲಿ ಭಾಗಿಯಾದ ಭಾರತದ ಟಿ.ಎಸ್.ತಿರುಮೂರ್ತಿ (ವಿಶ್ವಸಂಸ್ಥೆಯ ಭಾರತದ ಪರ ಶಾಶ್ವತ ಪ್ರತಿನಿಧಿ), ನಾವು ಉಕ್ರೇನ್-ರಷ್ಯಾ ಗಡಿಯಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ, ತುಂಬ ಹತ್ತಿರದಿಂದ ಗಮನಿಸುತ್ತಿದ್ದೇವೆ. ಹಾಗೇ, ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಣೆಯೂ ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ರಷ್ಯಾ ಫೆಡರೇಶನ್ ಮತ್ತು ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆ ದಿನೇದಿನೇ ಹೆಚ್ಚುತ್ತಲೇ ಇದೆ. ಈ ಬೆಳವಣಿಗಗಳಿಂದ ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ದುರ್ಬಲಗೊಳ್ಳುತ್ತಿದೆ. ಸದ್ಯ ಎಲ್ಲ ಭಾಗಗಳಿಂದಲೂ ಸಂಯಮ ಬೇಕು. ಎಲ್ಲ ದೇಶಗಳ ಕಾನೂನುಬದ್ಧ ಭದ್ರತಾ ಹಿತಾಸಕ್ತಿಗಳನ್ನು ಪರಿಗಣಿಸಿ, ಪ್ರಾದೇಶಿಕವಾಗಿ ದೀರ್ಘಾವಧಿ ಶಾಂತಿ ಮತ್ತು ಸುಸ್ಥಿರತೆಯನ್ನು ಸಾಧಿಸುವ ನಿಟ್ಟಿನಲ್ಲಿ ವರ್ತಿಸಬೇಕು ಎಂದು ತಿರುಮೂರ್ತಿ ಹೇಳಿದ್ದಾರೆ. ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದ ಅವರು, ಇತ್ತೀಚೆಗೆ ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ನಾವು ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
3 ವಿಮಾನಗಳ ಸಂಚಾರ
ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆ ಪ್ರಾರಂಭವಾದಾಗಿನಿಂದ ಭಾರತ ಮೌನವಹಿಸಿತ್ತು. ಆದರೆ ಬಿಕ್ಕಟ್ಟು ಹೆಚ್ಚುತ್ತಿದ್ದಂತೆ, ಪರಸ್ಪರ ದೇಶಗಳು ಸೌಹಾರ್ದಯುತವಾಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಕರೆ ನೀಡಿತು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಸಾಧ್ಯತೆ ಹೆಚ್ಚುತ್ತಿದ್ದಂತೆ, ಉಕ್ರೇನ್ನಲ್ಲಿರುವ ಭಾರತೀಯರು ವಾಪಸ್ ದೇಶಕ್ಕೆ ತೆರಳಿ ಎಂಬ ಸೂಚನೆಯನ್ನು ಭಾರತ ನೀಡಿದೆ. ಇನ್ನೂ ಸಹ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತ ಉಕ್ರೇನ್ಗೆ ಮೂರು ಏರ್ ಇಂಡಿಯಾ ವಿಮಾನಗಳ ಸಂಚಾರ ಪ್ರಾರಂಭಿಸಲು ಮುಂದಾಗಿದೆ. ಉಕ್ರೇನ್ನಲ್ಲಿರುವ ಭಾರತೀಯರನ್ನು ವಾಪಸ್ ದೇಶಕ್ಕೆ ಕರೆತರಲು ಇಂದು ಒಂದು ವಿಮಾನ ಹೊರಡಲಿದ್ದು, ಮತ್ತೊಂದು ವಿಮಾನ ಗುರುವಾರ ಹಾಗೂ ಮೂರನೇ ವಿಮಾನ ಶನಿವಾರ ಹೊರಡಲಿದೆ ಎಂದು ಹೇಳಲಾಗಿದೆ. ಉಕ್ರೇನ್ನಲ್ಲಿ ಇರುವ ಭಾರತೀಯರಲ್ಲಿ ಹೆಚ್ಚಿನ ಜನ ವಿದ್ಯಾರ್ಥಿಗಳೇ ಆಗಿದ್ದು, ಅವರ ಸುರಕ್ಷತೆ ನಮ್ಮ ಆದ್ಯತೆ ಎಂದು ಭಾರತ ಹೇಳಿದೆ. ಈ ನಿಟ್ಟಿನಲ್ಲಿರುವ ಉಕ್ರೇನ್ನಲ್ಲಿರುವ ರಾಯಭಾರಿ ಕಚೇರಿಯೂ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: Shivamogga Violence: ಹರ್ಷ ಹತ್ಯೆ ಪ್ರಕರಣ, ಮುಸ್ಲಿಂ ಗೂಂಡಾಗಿರಿಯಿಂದ ಶಿವಮೊಗ್ಗದಲ್ಲಿ ಗಲಭೆ ಆಗಿದೆ: ಸಚಿವ ಅಶೋಕ್
Published On - 12:06 pm, Tue, 22 February 22