ಯೆಮೆನ್ನ ದಕ್ಷಿಣ ಬಂದರು ನಗರ ಅಡೆನ್ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಸ್ಫೋಟವುಂಟಾಗಿ ಆರು ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಇದು ಬಾಂಬ್ /ಇನ್ಯಾವುದೇ ಸ್ಫೋಟಕಗಳಿಂದ ದಾಳಿ ನಡೆಸಿದ್ದಾ? ಅಥವಾ ಸ್ಥಳೀಯವಾಗಿ ಯಾವುದಾದೂ ವಸ್ತು ಪ್ರಬಲ ಸ್ಫೋಟವಾಯಿತಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಏರ್ಪೋರ್ಟ್ ಗೇಟ್ ಬಳಿ ಒಂದು ಸಣ್ಣ ಟ್ರಕ್ ಪೆಟ್ರೋಲಿಯಂ ಉತ್ಪನ್ನಗಳನ್ನು ಒಯ್ಯುತ್ತಿತ್ತು. ಇದೇ ಟ್ರಕ್ನಲ್ಲಿ ಸ್ಫೋಟವುಂಟಾಗಿದೆ. ಸ್ಥಳದಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಅದೆಷ್ಟರ ಮಟ್ಟಿಗೆ ಪ್ರಬಲವಾಗಿತ್ತು ಎಂದರೆ ಆ ಶಬ್ದ ನಗರಾದ್ಯಂತ ಕೇಳಿದೆ. ಹತ್ತಿರದ ಮನೆಗಳ ಬಾಗಿಲು, ಕಿಟಕಿಗಳೆಲ್ಲ ಒಡೆದುಹೋಗಿವೆ. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಯೆಮೆನ್ ಸರ್ಕಾರದ ತಾತ್ಕಾಲಿಕ ನೆಲೆ ಇದೇ ಅಡೆನ್ ನಗರ. ಆದರೆ ಕಳೆದ 7 ವರ್ಷಗಳಿಂದಲೂ ಇಲ್ಲಿ ಹೌತಿ ಪ್ರತ್ಯೇಕತಾ ಗುಂಪಿನ ದಾಳಿ ನಡೆಯುತ್ತಲೇ ಇದೆ. ಅದರೊಂದಿಗೆ ಈಗ ಒಂದು ವರ್ಷದಿಂದ ಅಡೆನ್ನಲ್ಲಿಯೇ ಸರ್ಕಾರ ಮತ್ತು ದಕ್ಷಿಣ ಪ್ರತ್ಯೇಕತಾ ಗುಂಪಿನ ನಡುವೆ ಸಂಘರ್ಷ ಏರ್ಪಟ್ಟಿದೆ.
ಈ ತಿಂಗಳ ಪ್ರಾರಂಭದಲ್ಲಿ ಅಡೆನ್ ನಗರದಲ್ಲಿ ಇಲ್ಲಿನ ಗವರ್ನರ್ ಕಾರನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆದಿತ್ತು. ಆಗಲೂ ಕೂಡ ಆರು ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಅದೃಷ್ಟವಶಾತ್ ಗವರ್ನರ್ ಅಪಾಯದಿಂದ ಪಾರಾಗಿದ್ದರು. 2020ರ ಡಿಸೆಂಬರ್ನಲ್ಲಿ ಅಡೆನ್ ಏರ್ಪೋರ್ಟ್ನಲ್ಲಿ ನಡೆದ ಬಾಂಬ್ ದಾಳಿಯಿಂದ ಸುಮಾರು 22 ಮಂದಿ ಮೃತಪಟ್ಟಿದ್ದರು. ಆ ದಾಳಿಯ ಹೊಣೆಯನ್ನು ಹೌತಿ ಗುಂಪು ಹೊತ್ತುಕೊಂಡಿತ್ತು. ಹಾಗೇ ಕ್ಷಿಪಣಿ ಪ್ರಯೋಗಿಸಿ ದಾಳಿ ಮಾಡಿದ್ದಾಗಿಯೂ ಹೇಳಿತ್ತು.
ಇದನ್ನೂ ಓದಿ: ಬಿಜೆಪಿ ಸೇರಿ ದೊಡ್ಡ ದೊಡ್ಡ ತಪ್ಪು ಮಾಡಿದೆ ಎನ್ನುತ್ತ ಮರಳಿ ಟಿಎಂಸಿಗೆ ಬಂದ ರಾಜೀವ್ ಬ್ಯಾನರ್ಜಿ
ತಾಯಿ ಬಗ್ಗೆ ಮಹಾನ್ ಕನಸು ಕಂಡಿದ್ದ ಪುನೀತ್; ಕೊನೆಗೂ ಅದು ಈಡೇರಲೇ ಇಲ್ಲ