ಬಿಜೆಪಿ ಸೇರಿ ದೊಡ್ಡ ತಪ್ಪು ಮಾಡಿದೆ ಎನ್ನುತ್ತ ಮರಳಿ ಟಿಎಂಸಿಗೆ ಬಂದ ರಾಜೀವ್ ಬ್ಯಾನರ್ಜಿ
ಬಿಜೆಪಿ ಧಾರ್ಮಿಕ ರಾಜಕೀಯ ಮಾಡುತ್ತಿದೆ. ಈ ಮೂಲಕವೇ ಮತ ಗಳಿಸಬೇಕು ಎಂಬುದು ಅದರ ಧ್ಯೇಯ. ನನಗೆ ಕೃಷಿ ಕ್ಷೇತ್ರದ ಸಮಸ್ಯೆ, ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಮನಸಿತ್ತು. ನಾನು ಇದನ್ನೇ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೆ ಎಂದು ರಾಜೀವ್ ಬ್ಯಾನರ್ಜಿ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್(Trinamool Congress)ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ರಾಜೀವ್ ಬ್ಯಾನರ್ಜಿ ಇದೀಗ ಮತ್ತೆ ಟಿಎಂಸಿಗೆ ವಾಪಸ್ ಆಗಿದ್ದಾರೆ. ಈ ವರ್ಷ ಮಾರ್ಚ್ನಿಂದ ಏಪ್ರಿಲ್ ಮಧ್ಯದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ (West Bengal Assembly Election) ನಡೆದಿತ್ತು. ಈ ಚುನಾವಣೆ ವೇಳೆ ರಾಜೀವ್ ಬ್ಯಾನರ್ಜಿ (Rajib Banerjee) ಟಿಎಂಸಿ ತೊರೆದುಹೋಗಿದ್ದರು. ಆದರೆ ಈಗ ಟಿಎಂಸಿಗೆ ಮರಳಿದ ಅವರು, ತಾವು ಬಿಜೆಪಿ ಸೇರಿ ದೊಡ್ಡ ತಪ್ಪು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೇ, ನನಗೆ ಮತ್ತೆ ಟಿಎಂಸಿ ಸೇರಲು ಅನುಮತಿ ಕೊಟ್ಟ ಅಭಿಷೇಕ್ ಬ್ಯಾನರ್ಜಿ ಮತ್ತು ಮಮತಾ ಬ್ಯಾನರ್ಜಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.
ಇಂದು ತ್ರಿಪುರದಲ್ಲಿ ನಡೆದ ಟಿಎಂಸಿ ರ್ಯಾಲಿಯಲ್ಲಿ ಪಕ್ಷಕ್ಕೆ ಮರು ಸೇರ್ಪಡೆಯಾದ ರಾಜೀವ್ ಬ್ಯಾನರ್ಜಿ, ಬಳಿಕ ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಬಿಜೆಪಿ ಬಾಯಲ್ಲಷ್ಟೇ ದೊಡ್ಡದೊಡ್ಡ ಮಾತುಗಳನ್ನಾಡುತ್ತದೆ. ನಾನು ಬಿಜೆಪಿ ಸೇರ್ಪಡೆಯಾಗುವ ಮೊದಲು ನನಗೂ ಕೆಲವು ಭರವಸೆಗಳನ್ನು ನೀಡಿದ್ದರು. ಉದ್ಯೋಗ, ಕೃಷಿಗೆ ಸಂಬಂಧಪಟ್ಟಂತೆ ಒಂದೆರಡು ವಿಚಾರಗಳನ್ನು ನನ್ನ ಬಳಿ ಹೇಳಿದ್ದರು. ಆದರೆ ಅಲ್ಲಿಗೆ ಹೋದ ಮೇಲೆ ಯಾವುದೂ ಆಗುವಂಥದ್ದಲ್ಲ ಎಂಬುದು ಗೊತ್ತಾಯಿತು ಎಂದು ರಾಜೀವ್ ಬ್ಯಾನರ್ಜಿ ತಿಳಿಸಿದ್ದಾರೆ.
ಬಿಜೆಪಿ ಧಾರ್ಮಿಕ ರಾಜಕೀಯ ಮಾಡುತ್ತಿದೆ. ಈ ಮೂಲಕವೇ ಮತ ಗಳಿಸಬೇಕು ಎಂಬುದು ಅದರ ಧ್ಯೇಯ. ನನಗೆ ಕೃಷಿ ಕ್ಷೇತ್ರದ ಸಮಸ್ಯೆ, ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಮನಸಿತ್ತು. ನಾನು ಇದನ್ನೇ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೆ. ಆದರೆ ಬಿಜೆಪಿಗೆ ಮತ ಗಳಿಕೆ ಬಿಟ್ಟು ಬೇರೆನೂ ಗೊತ್ತಿಲ್ಲ ಎಂದು ಆರೋಪಿಸಿದರು. ನನಗೆ ದ್ವೇಷ ರಾಜಕಾರಣ ಮಾಡಲು ಸಾಧ್ಯವಿಲ್ಲ. ಬಿಜೆಪಿಯ ವಿಭಜನಾ ಸಿದ್ಧಾಂತ ಒಪ್ಪಿಕೊಳ್ಳಲು ಆಗುವುದಿಲ್ಲ. ಜನ ವಿರೋಧಿ ನೀತಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂಬುದು ನನಗೆ ಮನದಟ್ಟಾಯಿತು. ಹಾಗಾಗಿ ಮತ್ತೆ ಟಿಎಂಸಿಗೆ ಬಂದಿದ್ದೇನೆ. ನಾನಿನ್ನು ಮುಂದೆ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ನಾಯಕತ್ವದಡಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ರಾಜೀವ್ ಬ್ಯಾನರ್ಜಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ದೋಮುರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಟಿಎಂಸಿ ಅಭ್ಯರ್ಥಿ ವಿರುದ್ಧ ಸೋತಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ, ಅದಕ್ಕೂ ಪೂರ್ವ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಲವು ನಾಯಕರು ಮತ್ತೆ ಟಿಎಂಸಿಗೆ ಮರಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಬುಲ್ ಸುಪ್ರಿಯೋ ಬಿಜೆಪಿಯನ್ನು ಬಿಟ್ಟು ತೃಣಮೂಲ ಕಾಂಗ್ರೆಸ್ಗೆ ಬಂದಿದ್ದರು.
ಇದನ್ನೂ ಓದಿ: ತಾಯಿ ಬಗ್ಗೆ ಮಹಾನ್ ಕನಸು ಕಂಡಿದ್ದ ಪುನೀತ್; ಕೊನೆಗೂ ಅದು ಈಡೇರಲೇ ಇಲ್ಲ
Mi 11 Ultra: ಶವೋಮಿಯಿಂದ ಶಾಕಿಂಗ್ ನ್ಯೂಸ್: ಭಾರತದಲ್ಲಿ ಈ ಸ್ಮಾರ್ಟ್ಫೋನ್ ಸೇಲ್ ಬಂದ್ ಮಾಡಿದ ಕಂಪನಿ
Published On - 4:12 pm, Sun, 31 October 21