ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾಗಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸಿರುವ ಡೊನಾಲ್ಡ್ ಟ್ರಂಪ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಕೊವಿಡ್ ಸೋಂಕಿಗೆ ಸಂಬಂಧಿಸಿದಂತೆ ಮಕ್ಕಳ ರೋಗ ನಿರೋಧಕ ಶಕ್ತಿಯ ಬಗ್ಗೆ ಅವರು ನೀಡಿದ ತಪ್ಪು ಮಾಹಿತಿಯನ್ನು ಫೇಸ್ಬುಕ್ ಅಳಿಸಿ ಹಾಕಿದೆ.
ಫೇಸ್ಬುಕ್ನೊಂದಿಗೆ ಮತ್ತೊಂದು ಪ್ರಮುಖ ಜಾಲತಾಣವಾದ ಟ್ವಿಟ್ಟರ್ ಸಹ ಅಧ್ಯಕ್ಷ ಟ್ರಂಪ್ ಅವರ ಅಧಿಕೃತ ಮರು-ಆಯ್ಕೆ ಅಭಿಯಾನದ ವಿಡಿಯೋವನ್ನು ತಡೆಹಿಡಿದಿದೆ. ಆದರೆ, ಟ್ರಂಪ್ ಅವರ ಇತರ ಖಾತೆಗಳನ್ನು ಟ್ವಿಟ್ಟರ್ ತಡೆಹಿಡಿದಿಲ್ಲ.
ಫೇಸ್ಬುಕ್ ಮತ್ತು ಟ್ವಿಟ್ಟರ್ ತಾಣಗಳಲ್ಲಿ ಬಿಡುಗಡೆಯಾದ ವಿಡಿಯೋಗಳಲ್ಲಿ ಟ್ರಂಪ್, “ಕೊವಿಡ್ ಸೋಂಕು ಮಕ್ಕಳ ಮೇಲೆ ಪರಿಣಾಮ ಬೀರದು, ಅವರಲ್ಲಿ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುತ್ತದೆ, ಹಾಗಾಗಿ ಶಾಲೆಗಳನ್ನು ಪುನರಾರಂಭಿಸಬಹುದು,” ಎಂದು ಹೇಳಿದ್ದರು.
ಸದರಿ ವಿಡಿಯೋಗೆ ಸಂಬಂಧಿಸಿದ ಒಂದು ಲಿಂಕ್, “ದಯವಿಟ್ಟು ಕ್ಷಮಿಸಿ, ಈ ಪೋಸ್ಟ್ ಈಗ ಲಭ್ಯವಿಲ್ಲ,” ಎಂದು ಸೂಚಿಸುತ್ತದೆ.
“ಈ ವಿಡಿಯೋನಲ್ಲಿ, ಒಂದು ನಿರ್ದಿಷ್ಟ ಗುಂಪಿಗೆ ಸೇರಿದವರು ಕೊವಿಡ್ ಸೋಂಕಿನ ವಿರುದ್ಧ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ ಎಂಬ ತಪ್ಪು ಮಾಹಿತಿ ನೀಡಲಾಗಿದೆ. ಅಪಾಯಕಾರಿ ಕೊವಿಡ್ ಬಗ್ಗೆ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುವುದು ನಮ್ಮ ಪಾಲಿಸಿಗಳ ಉಲ್ಲಂಘನೆಯಾಗಿದೆ,” ಎಂದು ಫೇಸ್ಬುಕ್ ಬಾತ್ಮೀದಾರನರೊಬ್ಬರು ಹೇಳಿದ್ದಾರೆ.
ಆಧ್ಯಕ್ಷ ಟ್ರಂಪ್ ಅವರ ಪೋಸ್ಟ್ಗಳನ್ನು ಫೇಸ್ಬುಕ್ ತೆಗೆದುಹಾಕುತ್ತಿರುವುದು ಇದೇ ಮೊದಲೇನಲ್ಲ.