Fact Check 1999ರಲ್ಲಿ ಒಮಿಕ್ರಾನ್ ವಿಡಿಯೊ ಗೇಮ್ ತಯಾರಿಸಿದ್ದರೇ ಬಿಲ್ ಗೇಟ್ಸ್?
ಈ ವಿಡಿಯೊ ಗೇಮ್ ಅನ್ನು 1999 ರಲ್ಲಿ ಕ್ವಾಂಟಿಕ್ ಡ್ರೀಮ್ ತಯಾರಿಸಿದ್ದು ಈಡೋಸ್ ಇಂಟರಾಕ್ಟಿವ್ ಪ್ರಕಟಿಸಿದೆ. ಕ್ವಾಂಟಿಕ್ ಡ್ರೀಮ್ ಪ್ಯಾರಿಸ್ ಮತ್ತು ಮಾಂಟ್ರಿಯಲ್ ಮೂಲದ ಫ್ರೆಂಚ್ ವಿಡಿಯೋ ಗೇಮ್ಸ್ ಡೆವಲಪರ್ ಆಗಿದ್ದು, ಇದನ್ನು ಡೇವಿಡ್ ಕೇಜ್ 1997 ರಲ್ಲಿ ಸ್ಥಾಪಿಸಿದರು.
ಒಮಿಕ್ರಾನ್ (Omicron( ವಿಜ್ಞಾನಿಗಳನ್ನು ಗೊಂದಲಕ್ಕೀಡುಮಾಡುತ್ತಿರುವಾಗ ನೆಟಿಜನ್‌ಗಳ ಒಂದು ವಿಭಾಗವು ಕೊವಿಡ್ ಸಾಂಕ್ರಾಮಿಕವನ್ನು ಬಿಲ್ ಗೇಟ್ಸ್‌ನಂತಹ ದೊಡ್ಡ ಕೈಗಾರಿಕೋದ್ಯಮಿಗಳು ಮಾನವ ಜನಸಂಖ್ಯೆಯನ್ನು ನಿಯಂತ್ರಿಸಲು ಮತ್ತು ತಮ್ಮದೇ ಆದ ಲಸಿಕೆಗಳಿಂದ ಲಾಭ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮೊದಲೇ ಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತೀರಾ ಇತ್ತೀಚೆಗೆ ಬಿಲ್ ಗೇಟ್ಸ್ (Bill Gates) ನೇತೃತ್ವದ ಮೈಕ್ರೋಸಾಫ್ಟ್ ( Microsoft) ಅಭಿವೃದ್ಧಿಪಡಿಸಿದ 1999 ರ ವಿಡಿಯೊ ಗೇಮ್‌ನ ಹೆಸರು ಒಮಿಕ್ರಾನ್ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಆಟವು “ರಾಕ್ಷಸರು ಮನುಷ್ಯರಂತೆ ನಟಿಸುವುದು ಮತ್ತು ಅವರ ಆತ್ಮಗಳನ್ನು ಅದರಲ್ಲಿ ನೆಲೆಸುವಂತೆ ಮಾಡುವುದಾಗಿದೆ”.”ಇದು ಕಾಕತಾಳೀಯವೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಾರೆ. ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಇದು ಮತ್ತೊಂದು ಪಿತೂರಿ ಸಿದ್ಧಾಂತ ಎಂದು ಕಂಡುಹಿಡಿದಿದೆ. ಈ ವಿಡಿಯೊ ಗೇಮ್ ತಯಾರಿಸಿದ್ದು ಫ್ರೆಂಚ್ ಕಂಪನಿ, ಬಿಲ್ ಗೇಟ್ಸ್ ಅಥವಾ ಮೈಕ್ರೋಸಾಫ್ಟ್ ಅಲ್ಲ. ಫ್ಯಾಕ್ಟ್ ಚೆಕ್ ನೆಟಿಜನ್‌ಗಳು ಮಾತನಾಡುತ್ತಿರುವ ವಿಡಿಯೊ ಗೇಮ್‌ನ ನಿಜವಾದ ಹೆಸರು “ಒಮಿಕ್ರಾನ್: ದಿ ನೋಮಾಡ್ ಸೋಲ್” ಇಲ್ಲಿ, “Omikron” ನಲ್ಲಿ K ಇದೆ “C” ಅಲ್ಲ ಎಂದು ಗಮನಿಸಬೇಕು. ಈ ವಿಡಿಯೊ ಗೇಮ್ ಅನ್ನು 1999 ರಲ್ಲಿ ಕ್ವಾಂಟಿಕ್ ಡ್ರೀಮ್ ತಯಾರಿಸಿದ್ದು ಈಡೋಸ್ ಇಂಟರಾಕ್ಟಿವ್ ಪ್ರಕಟಿಸಿದೆ. ಕ್ವಾಂಟಿಕ್ ಡ್ರೀಮ್ ಪ್ಯಾರಿಸ್ ಮತ್ತು ಮಾಂಟ್ರಿಯಲ್ ಮೂಲದ ಫ್ರೆಂಚ್ ವಿಡಿಯೊ ಗೇಮ್ಸ್ ಡೆವಲಪರ್ ಆಗಿದ್ದು, ಇದನ್ನು ಡೇವಿಡ್ ಕೇಜ್ 1997 ರಲ್ಲಿ ಸ್ಥಾಪಿಸಿದರು.
1999 ರಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೊ ಗೇಮ್ ಅನ್ನು ಬಿಡುಗಡೆ ಮಾಡಲಾಯಿತು. ನಂತರ 2000 ರಲ್ಲಿ ಇದನ್ನು ಡ್ರೀಮ್‌ಕಾಸ್ಟ್ ಗೇಮ್ ಕನ್ಸೋಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಮೈಕ್ರೋಸಾಫ್ಟ್ ಅಥವಾ ಬಿಲ್ ಗೇಟ್ಸ್ “ಒಮಿಕ್ರಾನ್: ದಿ ನೋಮಾಡ್ ಸೋಲ್” (Omikron: The Nomad Soul)ಅನ್ನು ಮಾಡಿಲ್ಲ.
ವಿಡಿಯೊ ಗೇಮ್ ಅನ್ನು ಒಮಿಕ್ರಾನ್ ಎಂಬ ಫ್ಯೂಚರಿಸ್ಟಿಕ್ ನಗರದಲ್ಲಿ ನಡೆಯುವಂತೆ ತೋರಿಸಲಾಗಿದೆ. ಇದರಲ್ಲಿ ಜನರು ಪ್ರಾಚೀನ ಸೂಪರ್-ಕಂಪ್ಯೂಟರ್ ಮತ್ತು ಕಂಪ್ಯೂಟರ್‌ನ ಆದೇಶಗಳನ್ನು ನಿರ್ವಹಿಸುವ ಕಮ್ಯುನಿಸ್ಟ್ ಸರ್ವಾಧಿಕಾರಿಯಿಂದ ಆಳಲ್ಪಡುತ್ತಾರೆ. ನೊಮಾಡ್ ಸೋಲ್ ಭವಿಷ್ಯದ ಬಗ್ಗೆ ಮೊದಲೇ ತಿಳಿದುರುವ ನಾಯಕ, ತನ್ನ ಕಂಪ್ಯೂಟರ್ ಮೂಲಕ ಒಮಿಕ್ರಾನ್ ಅನ್ನು ಪ್ರವೇಶಿಸುತ್ತಾನೆ ಮತ್ತು ಈ ಪರ್ಯಾಯ ಕ್ಷೇತ್ರದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಆಟದಲ್ಲಿನ ಪಾತ್ರಗಳು ತಮ್ಮ ಆತ್ಮಗಳನ್ನು ರಾಕ್ಷಸರಿಂದ ಸಿಕ್ಕಿಬೀಳದಂತೆ ರಕ್ಷಿಸಲು ಹೋರಾಡುತ್ತವೆ.
ಸೌಂಡ್ ಟ್ರ್ಯಾಕ್ (ಹಿನ್ನೆಲೆ ಸಂಗೀತ) ಪ್ರಸಿದ್ಧ ಸಂಗೀತಗಾರ ಡೇವಿಡ್ ಬೋವೀ ಒದಗಿಸಿದ್ದಾರೆ. ಮೇ 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಗ್ರೀಕ್ ವರ್ಣಮಾಲೆಗಳನ್ನು ಬಳಸಿಕೊಂಡು ಕೊರೊನಾವೈರಸ್ ನ ಪ್ರಮುಖ ರೂಪಾಂತರಗಳನ್ನು ಹೆಸರಿಸಲು ನಿರ್ಧರಿಸಿದೆ. ಒಮಿಕ್ರಾನ್ ಗ್ರೀಕ್ ವರ್ಣಮಾಲೆಯ ಕ್ರಮದಲ್ಲಿ 15 ನೇ ಅಕ್ಷರವಾಗಿದೆ. ಆದ್ದರಿಂದ ಒಮಿಕ್ರಾನ್ ಅನ್ನು 1999 ರ ವಿಡಿಯೋ ಗೇಮ್ ಮತ್ತು ಬಿಲ್ ಗೇಟ್ಸ್‌ಗೆ ಲಿಂಕ್ ಮಾಡುವ ವೈರಲ್ ಪಿತೂರಿ ಸಿದ್ಧಾಂತವು ಆಧಾರರಹಿತವಾಗಿದೆ.
ಇದನ್ನೂ ಓದಿ: Delmicron ಒಮಿಕ್ರಾನ್ ನಂತರ ಬಂದಿದೆ ಹೊಸ ರೂಪಾಂತರಿ ಡೆಲ್ಮಿಕ್ರಾನ್; ರೋಗ ಲಕ್ಷಣಗಳೇನು? ಚಿಕಿತ್ಸೆ ಏನು?
Published On - 12:06 pm, Thu, 23 December 21