Burger King: ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಟ್ವೀಟ್ ಮಾಡಿದ್ದ ಬರ್ಗರ್​ಕಿಂಗ್: ನೆಟ್ಟಿಗರ ಒತ್ತಾಯಕ್ಕೆ ಮಣಿದು ಡಿಲೀಟ್

|

Updated on: Mar 09, 2021 | 3:34 PM

Burger King: ಬರ್ಗರ್​ ಕಿಂಗ್​ ಕ್ಷಮಾಪಣೆಯನ್ನು ಕೋರಿದ ನಂತರವೂ ಟ್ವೀಟಿಗರ ಆಕ್ರೋಶ ತಣಿದಿರಲಿಲ್ಲ. ‘ಇವರದು ಕೇವಲ ಬೂಟಾಟಿಕೆ ನಾಟಕ’ ಎಂದು ಹಲವರು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

Burger King: ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಟ್ವೀಟ್ ಮಾಡಿದ್ದ ಬರ್ಗರ್​ಕಿಂಗ್: ನೆಟ್ಟಿಗರ ಒತ್ತಾಯಕ್ಕೆ ಮಣಿದು ಡಿಲೀಟ್
ಫಾಸ್ಟ್​ಫುಡ್ ಕಂಪನಿ ಬರ್ಗರ್​ ಕಿಂಗ್ (ಒಳಚಿತ್ರದಲ್ಲಿ ಡಿಲೀಟ್ ಮಾಡಿದ್ದ ಟ್ವೀಟ್)
Follow us on

ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಶುಭಕೋರಿ ಇಂಗ್ಲೆಂಡ್​ನ ಬರ್ಗರ್​ ಕಿಂಗ್ ಮಾಡಿದ್ದ ಟ್ವೀಟ್ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಈ ಟ್ವೀಟ್ ಕೀಳು ಅಭಿರುಚಿಯದ್ದಾಗಿತ್ತು ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡ ನಂತರ ಸಂಸ್ಥೆಯು ಟ್ವೀಟ್ ಡಿಲೀಟ್ ಮಾಡಿ, ಕ್ಷಮೆ ಕೋರಿತ್ತು. ಸೆಕ್ಸಿಸ್ಟ್​ ಸಾಲುಗಳನ್ನು ಫಾಸ್ಟ್​ಫುಡ್ ದೈತ್ಯಸಂಸ್ಥೆಯು ಕ್ಲಿಕ್​ಬೈಟ್ (ಜನರ ಸೆಳೆಯುವ ತಂತ್ರ) ಆಗಿ ಬಳಸಿತ್ತು ಎಂದು ನೆಟ್ಟಿಗರು ಆಕ್ಷೇಪಿಸಿದ್ದರು.

ತಮ್ಮ ಶಿಷ್ಯವೇತನ ಯೋಜನೆಗೆ ಪ್ರಚಾರ ಸಿಗುವಂತೆ ಮಾಡಲು ‘ಮಹಿಳೆಯರು ಅಡುಗೆಮನೆಗೆ ಸೇರಿದವರಾಗಿದ್ದಾರೆ’ ಎಂದು ಸೋಮವಾರ ಬರ್ಗರ್​ ಕಿಂಗ್ ಟ್ವೀಟ್ ಮಾಡಿತ್ತು. ನೆಟ್ಟಿಗರಿಗೆ ಈ ಟ್ವೀಟ್​ನ ಭಾವ ಸರಿಕಂಡಿರಲಿಲ್ಲ. ಕಾಮೆಂಟ್ ಮಾಡುವ ಮೂಲಕ ಬಹುತೇಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಈ ಬೆಳವಣಿಗೆಯ ನಂತರ ಬರ್ಗರ್​ಕಿಂಗ್​ ಟ್ವೀಟ್​ಗಾಗಿ ಕ್ಷಮೆ ಕೋರಿ, ಟ್ವೀಟ್ ಡಿಲೀಟ್ ಮಾಡಿತ್ತು. ಪೋಸ್ಟ್​ಗೆ ಆಕ್ಷೇಪಾರ್ಹ ಕಾಮೆಂಟ್​ಗಳು ಬಂದ ಕಾರಣ ಡಿಲೀಟ್ ಮಾಡಿದ್ದೇವೆ ಎಂದು ಹೇಳಿತ್ತು.

ಜನರು ವ್ಯಾಪಕವಾಗಿ ಆಕ್ಷೇಪಿಸಿದ ನಂತರ ಪ್ರತಿಕ್ರಿಯಿಸಿದ್ದ ಬರ್ಗರ್​ಕಿಂಗ್, ‘ನಿಮ್ಮ ಅಭಿಪ್ರಾಯವನ್ನು ನಾವು ಕೇಳಿಸಿಕೊಳ್ಳುತ್ತೇವೆ. ಆರಂಭದಲ್ಲಿ ನಮ್ಮ ಟ್ವೀಟ್ ತಪ್ಪಾಗಿತ್ತು. ಅದಕ್ಕಾಗಿ ಕ್ಷಮೆ ಕೋರುತ್ತೇವೆ. ಬ್ರಿಟನ್​ನ ಅಡುಗೆಕೋಣೆಗಳಲ್ಲಿರುವ ಬಾಣಸಿಗರಲ್ಲಿ ಶೇ 20ರಷ್ಟು ಮಾತ್ರ ಮಹಿಳೆಯರು. ಈ ಸಂಖ್ಯೆ ಹೆಚ್ಚಿಸಬೇಕೆಂದು ನಾವು ಶಿಷ್ಯವೇತನ ಯೋಜನೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿತ್ತು.

‘ಕ್ಷಮೆಯಾಚನೆಯ ನಂತರ ಮೂಲ ಟ್ವೀಟ್ ಡಿಲೀಟ್ ಮಾಡಲು ನಾವು ನಿರ್ಧರಿಸಿದೆವು. ಆ ಟ್ವೀಟ್​ನ ಥ್ರೆಡ್​ನಲ್ಲಿದ್ದ ಕೆಲ ಕಾಮೆಂಟ್​ಗಳು ಆಕ್ಷೇಪಾರ್ಹ ಪದಗಳನ್ನು ಹೊಂದಿದ್ದವು ಎಂಬುದನ್ನು ನಮ್ಮ ಗಮನಕ್ಕೆ ತರಲಾಯಿತು. ಅಂಥದಕ್ಕೆ ಅವಕಾಶ ಮಾಡಿಕೊಡಲು ನಾವು ಇಷ್ಟಪಡುವುದಿಲ್ಲ’ ಎಂದು ಬರ್ಗರ್​ ಕಿಂಗ್ ಹೇಳಿತು.

ನೆಟ್ಟಿಗರ ಆಕ್ರೋಶ
ಬರ್ಗರ್​ ಕಿಂಗ್​ ಕ್ಷಮಾಪಣೆಯನ್ನು ಕೋರಿದ ನಂತರವೂ ಟ್ವೀಟಿಗರ ಆಕ್ರೋಶ ತಣಿದಿರಲಿಲ್ಲ. ‘ಇವರದು ಕೇವಲ ಬೂಟಾಟಿಕೆ ನಾಟಕ’ ಎಂದು ಹಲವರು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ‘ಮೊದಲು ಆ ಟ್ವೀಟ್ ಪೋಸ್ಟ್​ ಮಾಡಲು ಒಪ್ಪಿಗೆ ಸೂಚಿಸಿದ್ದು ಏಕೆ? ನಂತರ ಅಷ್ಟು ತಡವಾಗಿ ಅದನ್ನು ಡಿಲೀಟ್ ಮಾಡಿದ್ದು ಏಕೆ’ ಎಂದು ಹಲವರು ಪ್ರಶ್ನಿಸಿದರು.

ಟ್ವೀಟ್ ಮಾಡುವ ಜೊತೆಗೆ ನ್ಯೂಯಾರ್ಕ್​ ಟೈಮ್ಸ್​ನ ಮುದ್ರಣ ಆವೃತ್ತಿಯಲ್ಲಿ ಬರ್ಗರ್​ ಕಿಂಗ್​ ಪೂರ್ಣಪುಟ ಜಾಹೀರಾತನ್ನೂ ನೀಡಿತ್ತು. ಕೆಂಪು ಹಿನ್ನೆಲೆಯ ಮೇಲೆ ಬಿಳಿ ಬಣ್ಣದಲ್ಲಿ ಮುದ್ರಣಗೊಂಡಿರುವ ಅಕ್ಷರಗಳಲ್ಲಿ ‘ಮಹಿಳೆಯರು ಅಡುಗೆಮನೆಗೆ ತಕ್ಕವರು’ (Women belong in the kitchen) ಎಂಬ ಪದಗಳಿವೆ.

‘ಅತ್ಯುತ್ತಮ ಅಡುಗೆಮನೆಗಳು, ಟ್ರಕ್​ನಲ್ಲಿರುವ ಸಂಚಾರಿ ಅಡುಗೆಮನೆಗಳು, ಪ್ರಶಸ್ತಿ ಪಡೆದ ಅಡುಗೆಮನೆಗಳು, ಬರ್ಗರ್​ ಕಿಂಗ್ ಅಡುಗೆಮನೆಗಳು.. ಹೀಗೆ ಎಷ್ಟೋ ಥರದ ಅಡುಗೆಮನೆಗಳಿವೆ. ಆದರೆ ವೃತ್ತಿಪರ ಅಡುಗೆಮನೆಗಳಿದ್ದರೆ ಮಹಿಳೆಯರು ಅಲ್ಲಿಗೆ ಸೇರುತ್ತಿದ್ದರು. ಅಡುಗೆಮನೆಗಳನ್ನು ಈಗ ಯಾರು ಮುನ್ನಡೆಸುತ್ತಿದ್ದಾರೆ? ಅಮೆರಿಕದಲ್ಲಿ ಕೇವಲ ಶೇ 24ರಷ್ಟು ಬಾಣಸಿಗರು ಮಾತ್ರ ಮಹಿಳೆಯರು. ಮುಖ್ಯ ಬಾಣಸಿಗರ ಸ್ಥಾನದಲ್ಲಿರುವವರ ಸಂಖ್ಯೆ ಶೇ 7ಕ್ಕೂ ಕಡಿಮೆ’ ಎಂದು ಬರ್ಗರ್​ ಕಿಂಗ್​ ನೀಡಿದ್ದ ಜಾಹೀರಾತು ಉಲ್ಲೇಖಿಸಿತ್ತು.

ಇದನ್ನೂ ಓದಿ: ಅವಹೇಳನಕಾರಿ ಟ್ವೀಟ್ ಪ್ರಕರಣ​: ಕಂಗನಾ ರಣಾವತ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಹಿನ್ನಡೆ!

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ಪರೋಕ್ಷ ಪ್ರಚಾರದ ಪೋಸ್ಟ್ ಹಾಕುವ ಪ್ರಭಾವಶಾಲಿಗಳಿಗಾಗಿ ಹೊಸ ಮಾರ್ಗಸೂಚಿ..

Published On - 3:26 pm, Tue, 9 March 21