ಮಗನ ಕಣ್ಣಿಗೆ ಐ ಡ್ರಾಪ್​ ಬದಲು ಅಂಟು ಹಾಕಿದ ಅಪ್ಪ; ಬಾಲಕನ ದೃಷ್ಟಿ ಉಳಿಸಿಕೊಟ್ಟ ವೈದ್ಯರು

| Updated By: Lakshmi Hegde

Updated on: Nov 03, 2021 | 11:24 AM

ಇಂಥದ್ದೊಂದು ಅವಘಡ ಸೃಷ್ಟಿಸಿದ ತಂದೆಯ ಹೆಸರು ಕೆವಿನ್​ ಡೇ. ಇವರ ಪುತ್ರ ರುಪೆರ್ಟ್​. ಈತ ಕಣ್ಣಿಗೆ ಸಂಬಂಧಪಟ್ಟಂತೆ ತೊಂದರೆಗೆ ಒಳಗಾಗಿದ್ದ. ರುಪೆರ್ಟ್ ಕಣ್ಣು ತುಂಬ ತುರಿಕೆ ಬರುತ್ತಿತ್ತು.

ಮಗನ ಕಣ್ಣಿಗೆ ಐ ಡ್ರಾಪ್​ ಬದಲು ಅಂಟು ಹಾಕಿದ ಅಪ್ಪ; ಬಾಲಕನ ದೃಷ್ಟಿ ಉಳಿಸಿಕೊಟ್ಟ ವೈದ್ಯರು
ಪ್ರಾತಿನಿಧಿಕ ಚಿತ್ರ
Follow us on

ಇಲ್ಲೊಬ್ಬ ತಂದೆ ಮಾಡಿದ ಅವಾಂತರದಿಂದ 9 ವರ್ಷದ ಮಗ ಪರಿತಪಿಸುವಂತಾಗಿದೆ. ಆ ಅಪ್ಪ ತನ್ನ ಪುತ್ರನ ಕಣ್ಣಿಗೆ ವೈದ್ಯರು ಕೊಟ್ಟ ಕಣ್ಣಿನ ಡ್ರಾಪ್​ ಬಿಡುವ ಬದಲು ಅಕಸ್ಮಾತ್​ ಆಗಿ ಅಂಟೊಂದನ್ನು ಹಾಕಿದ್ದಾರೆ. ಯಾವಾಗ ಮಗನಿಗೆ ಕಣ್ಣು ತೆಗೆಯಲು ಬರಲಿಲ್ಲವೋ ಆಗಲೇ ಆ ತಂದೆಗೆ ತಮ್ಮ ಪ್ರಮಾದದ ಅರಿವಾಗಿದೆ. ಕೂಡಲೇ ಪುತ್ರನನ್ನು ಆಸ್ಪತ್ರೆಗೆ ಸೇರಿಸಿದರೂ ನಾಲ್ಕು ದಿನಗಳ ನಂತರವಷ್ಟೇ ಕಣ್ಣು ತೆರೆಯಲು ಸಾಧ್ಯವಾಗಿದೆ. ಅದೃಷ್ಟವಶಾತ್​ ಆ ಬಾಲಕನ ಕಣ್ಣುಗಳ ದೃಷ್ಟಿಗೇ ಏನೂ ತೊಂದರೆಯಾಗಿಲ್ಲ.

ಇಂಥದ್ದೊಂದು ಅವಘಡ ಸೃಷ್ಟಿಸಿದ ತಂದೆಯ ಹೆಸರು ಕೆವಿನ್​ ಡೇ. ಇವರ ಪುತ್ರ ರುಪೆರ್ಟ್​. ಈತ ಕಣ್ಣಿಗೆ ಸಂಬಂಧಪಟ್ಟಂತೆ ತೊಂದರೆಗೆ ಒಳಗಾಗಿದ್ದ. ರುಪೆರ್ಟ್ ಕಣ್ಣು ತುಂಬ ತುರಿಕೆ ಬರುತ್ತಿತ್ತು. ಆಗ ಕೆವಿನ್​ ತನ್ನ ಪುತ್ರನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ, ಟೆಸ್ಟ್​ ಮಾಡಿಸಿದ್ದರು. ಅದಾದ ಮೇಲೆ ಡಾಕ್ಟರ್ಸ್​ ಕೆಲವು ರೀತಿಯ ಡ್ರಾಪ್ಸ್​ಗಳನ್ನು ಬರೆದುಕೊಟ್ಟಿದ್ದರು. ಪ್ರತಿದಿನ ರುಪೆರ್ಟ್ ಕಣ್ಣಿಗೆ ಡ್ರಾಪ್ಸ್​​ ಬಿಡಬೇಕಿತ್ತು. ಆದರೆ ಕೆವಿನ್​ ಹೀಗೆ ಒಂದು ದಿನ ಕಣ್ತಪ್ಪಿನಿಂದ, ಲೇಬಲ್​ ಸರಿಯಾಗಿ ಗಮನಿಸದೆ ಐ ಡ್ರಾಪ್​ ಬದಲು ಅಂಟನ್ನು ತನ್ನ ಮಗನ ಕಣ್ಣಿಗೆ ಹಾಕಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆವಿನ್​ ಡೇ, ನಾನು ಅಂಟನ್ನು ಹಾಕಿದ ಮೇಲೆ ಗೊತ್ತಾಯಿತು ಅದು ಕಣ್ಣಿನ ಡ್ರಾಪ್ ಆಗಿರಲಿಲ್ಲ ಎಂದು. ಕೂಡಲೇ 999ಕ್ಕೆ ಫೋನ್​ ಮಾಡಿದೆ. ಅವರು ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಸಲಹೆ ನೀಡಿದರು ಮತ್ತು ಆಂಬುಲೆನ್ಸ್​ ಕಳಿಸುತ್ತಿದ್ದೇವೆ ಎಂದು ಹೇಳಿದರು. ಪುಣ್ಯಕ್ಕೆ ಏರ್​ ಆಂಬುಲೆನ್ಸ್ ಕಳಿಸಿದ್ದರು. ಇದರಲ್ಲಿ ಬಂದ ವೈದ್ಯಕೀಯ ತಂಡ ರುಪೆರ್ಟ್​ ಕಣ್ಣಿನ್ನು ತೊಳೆದು, ನೋವು ನಿವಾರಕ ನೀಡಿ, ಹ್ಯಾರೋಗೇಟ್​ ಆಸ್ಪತ್ರೆಗೆ ಕರೆದೊಯ್ದರು. ಆದರೆ ನನಗಂತೂ ತೀವ್ರ ಭಯವಾಗುತ್ತಿತ್ತು. ನಾನು ನನ್ನ ಮಗನ ಕಣ್ಣು ಹಾಳು ಮಾಡಿದೆ. ಅವನ ಜೀವನ ಹಾಳು ಮಾಡಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದೆ. ರುಪೆರ್ಟ್​​ನನ್ನು ಕೆಲವೇ ಹೊತ್ತುಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಲಾಯಿತು. ಆದರೆ ಮನೆಗೆ ಬಂದರೂ ಸರಿಯಾಗಿ ಕಣ್ಣು ತೆರೆಯಲು ಆಗುತ್ತಿರಲಿಲ್ಲ. ನಾಲ್ಕು ದಿನಗಳ ನಂತರವಷ್ಟೇ ಅವನು ಪೂರ್ತಿಯಾಗಿ ಕಣ್ಣು ತೆರೆದು, ಸರಿಯಾಗಿ ನೋಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊವಿಡ್‌ ಲಸಿಕೆ ನೀಡಿಕೆ ಕಡಿಮೆಯಿರುವ 11 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಮೋದಿ ಪರಿಶೀಲನಾ ಸಭೆ

KBC 13: ₹ 50 ಲಕ್ಷ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?