ಅಮೆರಿಕದಲ್ಲಿ ಬಿಷ್ಣೋಯ್ ನೆಟ್‌ವರ್ಕ್ ಬೇಟೆ, ಗ್ಯಾಂಗ್‌ಸ್ಟರ್ ಕಮಲ್ ಎಫ್‌ಬಿಐ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆ
ಅಮೆರಿಕದಲ್ಲಿ ಎಫ್‌ಬಿಐ ಬಿಷ್ಣೋಯ್ ನೆಟ್‌ವರ್ಕ್ ವಿರುದ್ಧ ತನಿಖೆ ತೀವ್ರಗೊಳಿಸಿದೆ. ಗ್ಯಾಂಗ್‌ಸ್ಟರ್ ಕಮಲ್ ಎಫ್‌ಬಿಐನ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿದ್ದಾನೆ. ಅಮೆರಿಕದ ವ್ಯಾಪಾರ ವಲಯದಲ್ಲಿ ಸುಲಿಗೆ, ಬೆದರಿಕೆ ಹಾಕಿದ ಆರೋಪ ಆತನ ಮೇಲಿದೆ. ಈ ಜಾಗತಿಕ ಜಾಲವನ್ನು ಮಟ್ಟಹಾಕಲು ಎಫ್‌ಬಿಐ ಭಾರತೀಯ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ.

ಲಾಸ್ ಏಂಜಲೀಸ್, ಆಗಸ್ಟ್ 21: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್(Lawrence Bishnoi) ಸಿಂಡಿಕೇಟ್ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಬಿಷ್ಣೋಯ್ ಸಂಘಟಿತ ಅಪರಾಧ ಜಾಲದ ಭಾಗವಾಗಿರುವ ಭಾರತೀಯ ಪ್ರಜೆ ‘ಕಮಲ್’ ಎಂಬಾತನನ್ನು ಎಫ್‌ಬಿಐ ತನ್ನ ಅಧಿಕೃತ ‘ಮೋಸ್ಟ್ ವಾಂಟೆಡ್’ ಪಟ್ಟಿಗೆ ಸೇರಿಸಿದೆ.
ಅಮೆರಿಕದ ವಾಣಿಜ್ಯ ವಲಯದಲ್ಲಿ ಸುಲಿಗೆ, ಬೆದರಿಕೆ ಹಾಗೂ ಸಂಘಟಿತ ಅಪರಾಧ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್ ಆತನ ವಿರುದ್ಧ ಫೆಡರಲ್ ಬಂಧನ ವಾರಂಟ್ ಹೊರಡಿಸಿದೆ.
ಯಾರು ಈ ಕಮಲ್? ಎಫ್‌ಬಿಐ ಆರೋಪಗಳೇನು? ಎಫ್‌ಬಿಐ ಬಿಡುಗಡೆ ಮಾಡಿರುವ ವಾಂಟೆಡ್ ನೋಟಿಸ್‌ನಲ್ಲಿ ಆತನ ಮೊದಲ ಹೆಸರು ‘ಕಮಲ್’ ಮತ್ತು ಭಾರತೀಯ ಪ್ರಜೆ ಎಂದು ಮಾತ್ರ ಉಲ್ಲೇಖಿಸಲಾಗಿದೆ. ಆತನ ಪೂರ್ಣ ಹೆಸರು ಅಥವಾ ಹೆಚ್ಚಿನ ವೈಯಕ್ತಿಕ ವಿವರಗಳನ್ನು ತನಿಖಾ ಹಿತದೃಷ್ಟಿಯಿಂದ ಇನ್ನೂ ಬಹಿರಂಗಪಡಿಸಿಲ್ಲ.
ಸುಲಿಗೆ ಪಿತೂರಿ: ಭಾರತದ ಪಂಜಾಬ್‌ನಲ್ಲಿ ಹುಟ್ಟಿಕೊಂಡ ಲಾರೆನ್ಸ್ ಬಿಷ್ಣೋಯ್ ಸಂಘಟಿತ ಅಪರಾಧ ಗುಂಪು, ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದ ವಿವಿಧ ಭಾಗಗಳಲ್ಲಿ ವ್ಯಾಪಾರಸ್ಥರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡುವ ಜಾಲವನ್ನು ನಡೆಸುತ್ತಿದ್ದು, ಅದರಲ್ಲಿ ಕಮಲ್ ಸಕ್ರಿಯವಾಗಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಫೆಡರಲ್ ವಾರಂಟ್ ಜಾರಿ: ಲಾಸ್ ಏಂಜಲೀಸ್ ನ್ಯಾಯಾಲಯವು ಜುಲೈ1, 2026 ರಂದು ಆತನ ವಿರುದ್ಧ ಫೆಡರಲ್ ಅರೆಸ್ಟ್ ವಾರಂಟ್ ಹೊರಡಿಸಿದ್ದು, ಆತನ ಸುಳಿವು ನೀಡುವಂತೆ ಸ್ಥಳೀಯ ರಾಯಭಾರ ಕಚೇರಿಗಳು ಮತ್ತು ಎಫ್‌ಬಿಐ ಪೋರ್ಟಲ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಮತ್ತಷ್ಟು ಓದಿ: ದೆಹಲಿ ನಿವಾಸದಲ್ಲಿ ಸುದ್ದಿಗೋಷ್ಠಿ ವೇಳೆ ಪಪ್ಪು ಯಾದವ್ ಮೇಲೆ ಚಾಕು ದಾಳಿ ಯತ್ನ
ಜಾಗತಿಕ ನೆಟ್‌ವರ್ಕ್ ಮೇಲೆ ಕಣ್ಣು: ಭಾರತದಲ್ಲಿ ಜೈಲಿನಲ್ಲಿದ್ದರೂ ವಿದೇಶಗಳಲ್ಲಿ ನೆಟ್‌ವರ್ಕ್ ವಿಸ್ತರಿಸಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಜಗ್ಗು ಭಗವಾನ್‌ಪುರಿಯಾ ಗ್ಯಾಂಗ್‌ಗಳ ಜೊತೆ ನಂಟು ಹೊಂದಿರುವ ಹಲವರನ್ನು ಎಫ್‌ಬಿಐ ಈಗಾಗಲೇ ಬಂಧಿಸಿದೆ.
ವ್ಯಾಪಾರಿಗಳಿಗೆ ಬೆದರಿಕೆ: ಅಮೆರಿಕ ಮತ್ತು ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಗಳು, ಆಮದು-ರಫ್ತುದಾರರು ಹಾಗೂ ಪ್ರಭಾವಿಗಳಿಗೆ ಕರೆ ಮಾಡಿ ಸುಲಿಗೆ ವಸೂಲಿ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಭದ್ರತಾ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಿವೆ.
ಕೆನಡಾ ಮತ್ತು ಅಮೆರಿಕ ತನಿಖೆ: ಭಾರತದ ಹೊರಗೆ ಕೆನಡಾ ಮತ್ತು ಅಮೆರಿಕದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್ ಶೂಟರ್‌ಗಳು ಹಾಗೂ ಆರ್ಥಿಕ ನೆಟ್‌ವರ್ಕ್‌ಗಳ ಮೇಲೆ ಉಭಯ ದೇಶಗಳ ಭದ್ರತಾ ಪಡೆಗಳು ಜಂಟಿ ನಿಗಾ ಇರಿಸಿವೆ.
ಭಾರತೀಯ ಭದ್ರತಾ ಪಡೆಗಳ ಸಹಯೋಗ: ಇಂಟರ್‌ಪೋಲ್ ಹಾಗೂ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜೊತೆಗೂಡಿ ಗಡಿಯಾಚೆಗಿನ ಸುಲಿಗೆ ಮತ್ತು ಗ್ಯಾಂಗ್‌ಸ್ಟರ್ ಸಿಂಡಿಕೇಟ್‌ಗಳನ್ನು ಮಟ್ಟಹಾಕಲು ಅಮೆರಿಕದ ಎಫ್‌ಬಿಐ ಸಮನ್ವಯ ಸಾಧಿಸುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




