ಬಾಂಗ್ಲಾದೇಶದ ಢಾಕಾ ನಗರದ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಈ ದುರಂತದಲ್ಲಿ ಸುಮಾರು 52 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ 6 ಅಂತಸ್ತಿನ ಫ್ಯಾಕ್ಟರಿಯ ಮೇಲಿನ ಮಹಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಆ ಮಹಡಿಯಲ್ಲಿದ್ದ ಹಲವರು ಕೆಳಗೆ ಹಾರಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರಲ್ಲಿ ಅನೇಕರಿಗೆ ಗಂಭೀರ ಗಾಯಗಳಾಗಿದ್ದು, ಬಿದ್ದ ರಭಸಕ್ಕೆ 2-3 ಜನರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಈಗಾಗಲೇ 52 ಜನರ ಸಾವನ್ನಪ್ಪಿದ ಬಗ್ಗೆ ವರದಿಯಾಗಿದ್ದು, ಸಾಕಷ್ಟು ಮಂದಿ ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದ ಒಳಗೆ ಇನ್ನೂ ಎಷ್ಟು ಮಂದಿ ಸಿಲುಕಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುವ ಮೊದಲೇ ಬೆಂಕಿ ಕೆನ್ನಾಲಿಗೆ ಫ್ಯಾಕ್ಟರಿಯ 6ನೇ ಮಹಡಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಡಾಕಾದ ಹೊರವಲಯದಲ್ಲಿರುವ ಇಂಡಸ್ಟ್ರಿಯಲ್ ಟೌನ್ನ ಹಶೇಮ್ ಫುಡ್ ಫ್ಯಾಕ್ಟರಿಯಲ್ಲಿ ಈ ಬೆಂಕಿ ದುರಂತ ಸಂಭವಿಸಿದೆ. ಇಂದು ಮುಂಜಾನೆಯವರೆಗೂ ಫ್ಯಾಕ್ಟರಿಯ ಮೇಲಿನ ಮಹಡಿ ಹೊತ್ತಿ ಉರಿದಿದೆ. ಇನ್ನೂ ಕೂಡ ಬೆಂಕಿಯನ್ನು ಆರಿಸುವ ಕಾರ್ಯಾಚರಣೆ ಮುಂದುವರೆದಿದೆ. ಕೆಳಗಿನ ಮಹಡಿಗಳ ಮೆಟ್ಟಿಲು ಮತ್ತು ಲಿಫ್ಟ್ ಅನ್ನು ಮುಚ್ಚಲಾಗಿದೆ. ಬೆಂಕಿ ಬೇರೆ ಮಹಡಿಗೆ ಹರಡದಂತೆ ಎಚ್ಚರ ವಹಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಫ್ಯಾಕ್ಟರಿಯಲ್ಲಿದ್ದ ಬೇರೆ ಮಹಡಿಗಳ ಜನರನ್ನು ಹೊರಗೆ ಕರೆತರಲಾಗಿದೆ.
ಅಂದಹಾಗೆ, ಬಾಂಗ್ಲಾದೇಶದಲ್ಲಿ ಬೆಂಕಿ ಅನಾಹುತಗಳು ಹೊಸತೇನಲ್ಲ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಡಾಕಾದ ಅಪಾರ್ಟ್ಮೆಂಟ್ ಒಂದರಲ್ಲಿ ಬೆಂಕಿ ಹೊತ್ತಿಕೊಂಡು 70 ಜನರು ಸಾವನ್ನಪ್ಪಿದ್ದರು. ಆ ಅಪಾರ್ಟ್ಮೆಂಟ್ನಲ್ಲಿ ಅಕ್ರಮವಾಗಿ ರಾಸಾಯನಿಕಗಳನ್ನು ಸಂಗ್ರಹಿಸಿಟ್ಟಿದ್ದರಿಂದ ಬೆಂಕಿ ಹೊತ್ತಿಕೊಂಡು, ಅಪಾರ್ಟ್ಮೆಂಟ್ನ ಒಂದು ಭಾಗವೇ ಸುಟ್ಟು ಭಸ್ಮವಾಗಿತ್ತು. ಇದೀಗ ಮತ್ತೊಮ್ಮೆ ಭಾರೀ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ:
World AIDS Vaccine Day 2021: ಹೆಚ್ಐವಿ ಸೋಂಕು ನಿವಾರಣೆಯ ಲಸಿಕೆ ನೀರಿಕ್ಷೆಗೆ ಈ ವರ್ಷ ಉತ್ತರ ಸಿಗುತ್ತದೆಯೇ?
(Fire Accident over 52 Killed 30 Injured In Bangladesh after Massive Fire Attack in Food Factory)