Omicron Variant: ಒಮಿಕ್ರಾನ್​ ಸೋಂಕಿಗೆ ಯುಎಸ್​​ನಲ್ಲಿ ಮೊದಲ ಸಾವು; ಲಸಿಕೆ ಪಡೆಯದ ವ್ಯಕ್ತಿ ಬಲಿ

| Updated By: Lakshmi Hegde

Updated on: Dec 21, 2021 | 8:23 AM

ಡಿಸೆಂಬರ್​ ಪ್ರಾರಂಭದಲ್ಲಿ ಬ್ರಿಟನ್​​ನಲ್ಲಿ ಒಮಿಕ್ರಾನ್​ನಿಂದ ಮೊದಲ ಸಾವು ಸಂಭವಿಸಿತ್ತು. ಇದು ವಿಶ್ವದಲ್ಲೇ ಮೊದಲ ಒಮಿಕ್ರಾನ್ ಸಾವಾಗಿದೆ. ಅದಾದ ಬಳಿಕ ಬ್ರಿಟನ್​ನಲ್ಲಿ ಮತ್ತೆ 12 ಜನರು ಮೃತಪಟ್ಟಿದ್ದಾರೆ.

Omicron Variant: ಒಮಿಕ್ರಾನ್​ ಸೋಂಕಿಗೆ ಯುಎಸ್​​ನಲ್ಲಿ ಮೊದಲ ಸಾವು; ಲಸಿಕೆ ಪಡೆಯದ ವ್ಯಕ್ತಿ ಬಲಿ
ಪ್ರಾತಿನಿಧಿಕ ಚಿತ್ರ
Follow us on

ಒಮಿಕ್ರಾನ್​ ವೈರಾಣು (Omicron Variant) ವಿಶ್ವಕ್ಕೇ ವ್ಯಾಪಿಸಿದ್ದರೂ ಇದುವರೆಗೆ ಈ ಸೋಂಕಿಗೆ ಯುಕೆಯಲ್ಲಿ 14 ಸಾವಾಗಿದೆ. ಆದರೆ ವಿಶ್ವದ 77ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸೋಂಕು ಹರಡಿದೆ. ಆದರೆ ಇದೀಗ ಯುಎಸ್​ನಲ್ಲಿ ಒಮಿಕ್ರಾನ್​ಗೆ ಮೊದಲ ಬಲಿಯಾಗಿದೆ ಎಂದು ರಾಯಿಟರ್ಸ್​ ವರದಿ ಮಾಡಿದೆ.   ಈಗ ಯುಎಸ್​​ನಲ್ಲಿ ಒಮಿಕ್ರಾನ್​​ನಿಂದ ಮೃತಪಟ್ಟ ವ್ಯಕ್ತಿಗೆ ಕೊವಿಡ್​ 19 ಲಸಿಕೆ (Covid 19 Vaccine)ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಈ ಸಾವಿನ ಬಗ್ಗೆ ಯುಎಸ್​ನ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (CDC) ಯಾವುದೇ ಹೇಳಿಕೆಯನ್ನೂ ನೀಡಿಲ್ಲ.

ಯುನೈಟೆಡ್​ ಸ್ಟೇಟ್​ನ ಟೆಕ್ಸಾಸ್​ ರಾಜ್ಯದಲ್ಲಿ ಹ್ಯಾರಿ ಕೌಂಟಿ ಎಂಬಲ್ಲಿ ಒಮಿಕ್ರಾನ್​ ನಿಂದ ವ್ಯಕ್ತಿ ಮೃತಪಟ್ಟಿದ್ದು, ಇವರಿಗೆ 50 ರಿಂದ 60ರೊಳಗೆ ವಯಸ್ಸಾಗಿರಬಹುದು ಎಂದು ಹೇಳಲಾಗಿದೆ. ಇವರು ಸ್ಥಳೀಯವಾಗಿ ಕೊವಿಡ್​ 19 ಹೊಸ ತಳಿ ಒಮಿಕ್ರಾನ್​ನಿಂದ ಮೃತಪಟ್ಟ ಮೊದಲ ವ್ಯಕ್ತಿ ಎಂದು ಕೌಂಟಿ ಜಡ್ಜ್​ ಲಿನಾ ಹಿಡಾಲ್ಗೋ ಟ್ವೀಟ್​ ಮಾಡಿ ತಿಳಿಸಿದ್ದಾರೆ.  ಹಾಗೇ, ದಯವಿಟ್ಟು ಎಲ್ಲರೂ ಲಸಿಕೆ ಪಡೆಯಿರಿ ಎಂದೂ ಮನವಿ ಮಾಡಿದ್ದಾರೆ. ಡಿ.18ರ ಡಾಟಾ ಅನ್ವಯ, ಯುಎಸ್​ನಲ್ಲಿ ಒಮಿಕ್ರಾನ್ ರೂಪಾಂತರ ಪ್ರಮಾಣ ಶೇ.73ರಷ್ಟಿದೆ ಎಂದು ಸಿಡಿಸಿ ತಿಳಿಸಿದೆ. ಅಮೆರಿಕದಲ್ಲಿ ಒಮಿಕ್ರಾನ್​ ಹೆಚ್ಚುತ್ತಿರುವ ಬೆನ್ನಲ್ಲೇ ಅಧ್ಯಕ್ಷ ಜೋ ಬೈಡನ್​ ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.  ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.  ಕೊವಿಡ್​ 19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರಿಗೆ, ಅವರ ತ್ಯಾಗಕ್ಕೆ ನಾನು ಕೃತಜ್ಞನಾಗಿರುತ್ತೇನೆ. ಈ ಎರಡು ವರ್ಷಗಳ ಕಠಿಣ ಸಮಯದಲ್ಲಿ ನಿಮ್ಮ ಶ್ರಮವನ್ನೆಂದೂ ಮರೆಯಲಾಗದು. ಆ ಋಣ ನಮ್ಮ ಮೇಲೆ ಇದೆ. ಇನ್ನೂ ಕೂಡ ಹೋರಾಟ ಮುಂದುವರಿಯಲಿದೆ. ಜನರೂ ಕೂಡ ಸರಿಯಾಗಿ ಮಾಸ್ಕ್​ ಧರಿಸಬೇಕು. ವ್ಯಾಕ್ಸಿನ್​ ಹಾಕಿಸಿಕೊಳ್ಳಬೇಕು. ಕೊರೊನಾ ಮತ್ತದರ ರೂಪಾಂತರಿಗಳ ವಿರುದ್ಧ ಹೋರಾಡಲು ಒಗ್ಗಟ್ಟಾಗಬೇಕು ಎಂದು ಬೈಡನ್​ ಹೇಳಿದ್ದಾರೆ.

ಡಿಸೆಂಬರ್​ ಪ್ರಾರಂಭದಲ್ಲಿ ಬ್ರಿಟನ್​​ನಲ್ಲಿ ಒಮಿಕ್ರಾನ್​ನಿಂದ ಮೊದಲ ಸಾವು ಸಂಭವಿಸಿತ್ತು. ಇದು ವಿಶ್ವದಲ್ಲೇ ಮೊದಲ ಒಮಿಕ್ರಾನ್ ಸಾವಾಗಿದೆ. ಅದಾದ ಬಳಿಕ ಬ್ರಿಟನ್​ನಲ್ಲಿ ಮತ್ತೆ 12 ಜನರು ಮೃತಪಟ್ಟಿದ್ದಾರೆ. 104 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಈ ಸೋಂಕು ಭಾರತಕ್ಕೂ ಕಾಲಿಟ್ಟಿದ್ದು, ಇಲ್ಲಿ 160ಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಒಮಿಕ್ರಾನ್​ ವೈರಾಣು ಹರಡುವಿಕೆ ವೇಗ ಅತ್ಯಂತ ಹೆಚ್ಚು ಎಂದು ಆರೋಗ್ಯ ತಜ್ಞರು ಈಗಾಗಲೇ ಹೇಳಿದ್ದು, ಭಾರತದಲ್ಲಿ ಮೂರನೇ ಅಲೆಯ ಆತಂಕ ಶುರುವಾಗಿದೆ.

ಇದನ್ನೂ ಓದಿ: ಕಾಲೇಜಿಗೆ ಹೋಗುವಾಗ, ಬರುವಾಗ ಪುಂಡರಿಂದ ಕಿರುಕುಳ: ಬೇಸತ್ತ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ