ಹಣ ಬೇಡ, ಹೆಬ್ಬಾವು ಕೊಡಿ, ಉಚಿತ ಪಿಜ್ಜಾ ಪಡೆಯಿರಿ! ಈ ರೆಸ್ಟೋರೆಂಟ್‌ನ ವಿಚಿತ್ರ ಆಫರ್

ಅಮೆರಿಕದ ಫ್ಲೋರಿಡಾದ ಒಂದು ರೆಸ್ಟೋರೆಂಟ್ ಹೆಬ್ಬಾವುಗಳನ್ನು ತಂದವರಿಗೆ ಉಚಿತ ಪಿಜ್ಜಾ ನೀಡುವ ವಿಶಿಷ್ಟ ಕೊಡುಗೆಯನ್ನು ನೀಡಿದೆ. ‘ಫ್ಲೋರಿಡಾ ಪೈಥಾನ್ ಚಾಲೆಂಜ್’ ಭಾಗವಾಗಿ, ಪರಿಸರಕ್ಕೆ ಮಾರಕವಾಗಿರುವ ವಿದೇಶಿ ಹೆಬ್ಬಾವುಗಳನ್ನು ನಿಯಂತ್ರಿಸುವುದು ಇದರ ಉದ್ದೇಶ. ಹೆಬ್ಬಾವಿನ ಮಾಂಸವನ್ನು ಮಾರಾಟ ಮಾಡುವಂತಿಲ್ಲ, ಆದರೆ ಚರ್ಮ ಮತ್ತು ಇತರ ಭಾಗಗಳನ್ನು ಉಪಯುಕ್ತ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಪರಿಸರ ಸಂರಕ್ಷಣೆಯ ಈ ವಿಶಿಷ್ಟ ಉಪಕ್ರಮ ಜಾಗತಿಕ ಗಮನ ಸೆಳೆದಿದೆ.

ಹಣ ಬೇಡ, ಹೆಬ್ಬಾವು ಕೊಡಿ, ಉಚಿತ ಪಿಜ್ಜಾ ಪಡೆಯಿರಿ! ಈ ರೆಸ್ಟೋರೆಂಟ್‌ನ ವಿಚಿತ್ರ ಆಫರ್
ಸಾಂದರ್ಭಿಕ ಚಿತ್ರ
Image Credit source: NDTV

Updated on: Jul 27, 2026 | 5:46 PM

ಅಮೆರಿಕ, ಜು.27: ಫ್ಲೋರಿಡಾದಲ್ಲಿರುವ ಒಂದು ಪ್ರಸಿದ್ಧ ರೆಸ್ಟೋರೆಂಟ್ ಗ್ರಾಹಕರಿಂದ ‘ಹೆಬ್ಬಾವು’ (Python) ಪಡೆದು ಅವರಿಗೆ ಉಚಿತವಾಗಿ ಬಿಸಿಬಿಸಿ ಪಿಜ್ಜಾ ನೀಡುವ ವಿಚಿತ್ರ ಹಾಗೂ ಆಕರ್ಷಕ ಆಫರ್ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದೆ. ಫ್ಲೋರಿಡಾದ ಎವರ್‌ಗ್ಲೇಡ್ಸ್ ಸಿಟಿಯಲ್ಲಿರುವ ‘ವೈಲ್ಡ್‌ಮ್ಯಾನ್ಸ್ ಪಿಜ್ಜಾ, ಪಾಸ್ಟಾ ಆಂಡ್ ಪೈಥಾನ್’ ಎಂಬ ರೆಸ್ಟೋರೆಂಟ್, 2026ರ ‘ಫ್ಲೋರಿಡಾ ಪೈಥಾನ್ ಚಾಲೆಂಜ್’ ಪ್ರಚಾರದ ಭಾಗವಾಗಿ ಈ ಕೊಡುಗೆಯನ್ನು ಆರಂಭಿಸಿದೆ. ಜುಲೈ 10 ರಿಂದ ಜುಲೈ 19 ರವರೆಗೆ 10 ದಿನಗಳ ಕಾಲ ನಡೆಯುವ ಈ ಪರಿಸರ ಸ್ನೇಹಿ ಅಭಿಯಾನದಲ್ಲಿ, ಹವ್ಯಾಸಿ ಮತ್ತು ವೃತ್ತಿಪರ ಬೇಟೆಗಾರರು ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಅತಿಕ್ರಮಣಕಾರಿಯಾಗಿ ಬೆಳೆದಿರುವ ಹೆಬ್ಬಾವುಗಳನ್ನು ಹಿಡಿಯುತ್ತಾರೆ. ಬೇಟೆಗಾರರು ದೊಡ್ಡ ಮೊತ್ತದ ನಗದು ಬಹುಮಾನಗಳಿಗೆ ಸ್ಪರ್ಧಿಸುವುದರ ಜೊತೆಗೆ, ತಾವು ಹಿಡಿದ ಹಾವನ್ನು ರೆಸ್ಟೋರೆಂಟ್‌ಗೆ ನೀಡಿ ಉಚಿತ ಪಿಜ್ಜಾ ಸವಿಯುತ್ತಿದ್ದಾರೆ.

ರೆಸ್ಟೋರೆಂಟ್ ಮಾಲೀಕ ಡಸ್ಟಿನ್ ಕ್ರಮ್ NBC ಮಿಯಾಮಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. “ಹೆಬ್ಬಾವನ್ನು ಹಣದ ರೀತಿಯಲ್ಲಿ ಸ್ವೀಕರಿಸುತ್ತಿರುವ ವಿಶ್ವದ ಮೊದಲ ಸ್ಥಳ ನಮ್ಮದು. ನೀವು ಇಲ್ಲಿಗೆ ಒಂದು ಹೆಬ್ಬಾವು ತಂದುಕೊಟ್ಟು ಉಚಿತವಾಗಿ ಪಿಜ್ಜಾ ಪಡೆದುಕೊಳ್ಳಬಹುದು. ನಾವು ಪಿಜ್ಜಾ ಮೇಲೆ ಹೆಬ್ಬಾವಿನ ಮಾಂಸದ ಟಾಪಿಂಗ್ಸ್, ಪೈಥಾನ್ ಪಿಜ್ಜಾ ಮತ್ತು ಇಗುವಾನಾ ಪಿಜ್ಜಾಗಳನ್ನು ತಯಾರಿಸುತ್ತೇವೆ.” ಎಂದು ಹೇಳಿದರು.

ರೆಸ್ಟೋರೆಂಟ್‌ಗೆ ತರುವ ಹಾವಿನ ಯಾವುದೇ ಭಾಗ ವ್ಯರ್ಥವಾಗುವುದಿಲ್ಲ. ಗ್ರಾಹಕರಿಗೆ ಹೆಬ್ಬಾವುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಚರ್ಮದ ರಕ್ಷಣೆ, ಕ್ರೀಮ್ ಮತ್ತು ಸಾಬೂನುಗಳಿಗೆ ಬಳಸುವ ‘ಸ್ನೇಕ್ ಆಯಿಲ್’ ತಯಾರಿಸಲು ಬಳಕೆ. ಸುಂದರವಾದ ಆಭರಣಗಳನ್ನು ತಯಾರಿಸಲು ಬಳಕೆ.

ಆರೋಗ್ಯ ಮತ್ತು ಆಹಾರ ನಿಯಮಾವಳಿಗಳ ಪ್ರಕಾರ ಹೆಬ್ಬಾವಿನ ಮಾಂಸದಿಂದ ಮಾಡಿದ ಪಿಜ್ಜಾವನ್ನು ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಡಸ್ಟಿನ್ ಕ್ರಮ್, “ನನಗೆ ಈ ಪಿಜ್ಜಾವನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಹಾಗಾಗಿ ಉಚಿತವಾಗಿ ನೀಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ವಾರ್ಷಿಕ ಚಾಲೆಂಜ್ ಅನ್ನು ಫ್ಲೋರಿಡಾ ಫಿಶ್ ಅಂಡ್ ವೈಲ್ಡ್‌ಲೈಫ್ ಕನ್ಸರ್ವೇಶನ್ ಕಮಿಷನ್ ಮತ್ತು ಸೌತ್ ಫ್ಲೋರಿಡಾ ವಾಟರ್ ಮ್ಯಾನೇಜ್‌ಮೆಂಟ್ ಡಿಸ್ಟ್ರಿಕ್ಟ್ ಜಂಟಿಯಾಗಿ ಆಯೋಜಿಸುತ್ತವೆ. ಫ್ಲೋರಿಡಾದಲ್ಲಿ ಬರ್ಮೀಸ್ ಹೆಬ್ಬಾವುಗಳು ಅಪಾಯಕಾರಿ ವಿದೇಶಿ ತಳಿಯಾಗಿದ್ದು, ಸ್ಥಳೀಯ ಜೀವವೈವಿಧ್ಯತೆಗೆ ದೊಡ್ಡ ಮಾರಕವಾಗಿವೆ.

ಇದನ್ನೂ ಓದಿ: ಮುಟ್ಟಿನ ನೋವಿನ ನಡುವೆಯೂ 42 ಕಿ.ಮೀ. ಮ್ಯಾರಥಾನ್ ಪೂರ್ಣಗೊಳಿಸಿ ಇತಿಹಾಸ ಬರೆದ ಅಥ್ಲೀಟ್ ಲೀ ಮೇಝೆನ್

ಈ ಬೃಹತ್ ಹೆಬ್ಬಾವುಗಳು ಅಪಾಯದಂಚಿನಲ್ಲಿರುವ ವುಡ್ ಸ್ಟಾರ್ಕ್ (ಹಕ್ಕಿ) ಮತ್ತು ಕೀ ಲಾರ್ಗೋ ವುಡ್ ರಾಟ್ (ಇಲಿ) ನಂತಹ ಸಂರಕ್ಷಿತ ಜೀವಿಗಳನ್ನು ಭಕ್ಷಿಸುತ್ತಿವೆ.ಫ್ಲೋರಿಡಾದ ಕಾನೂನಿನಡಿ ರಕ್ಷಣೆ ಪಡೆದಿರುವ ಮೊಸಳೆಗಳನ್ನು ಸಹ ಈ ಹಾವುಗಳು ನುಂಗಿರುವ ಉದಾಹರಣೆಗಳಿವೆ. ಇವು ಮಾನವರ ಭದ್ರತೆಗೆ ಬೆದರಿಕೆಯಾಗಿದ್ದು, ನಾಯಿ-ಬೆಕ್ಕುಗಳಂತಹ ಸಾಕುಪ್ರಾಣಿಗಳನ್ನು ಬೇಟೆಯಾಡುತ್ತವೆ.2000 ರಿಂದ ಏಪ್ರಿಲ್ 2025 ರ ನಡುವೆ ಫ್ಲೋರಿಡಾದ ಪ್ರಕೃತಿ ವಲಯಗಳಿಂದ 23,500ಕ್ಕೂ ಹೆಚ್ಚು ಹೆಬ್ಬಾವುಗಳನ್ನು ತೆರವುಗೊಳಿಸಲಾಗಿದೆ. 2017 ರಿಂದ ಈ ಕಾರ್ಯಕ್ಕೆ ಹಣ ಪಾವತಿಸುವ ಯೋಜನೆ ಜಾರಿಗೆ ಬಂದ ನಂತರ ಹೆಬ್ಬಾವುಗಳನ್ನು ಹಿಡಿಯುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us