ಫ್ಲೈದುಬೈ ಕಾಕ್‌ಪಿಟ್ ದಾಳಿ: ಓಮನ್​ನ ಕೋ-ಪೈಲಟ್‌ನ್ನು ಯುಎಇಗೆ ಹಸ್ತಾಂತರಿಸಿದ ಸೌದಿ

ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಮೇಲೆ ಒಮಾನಿ ಸಹ-ಪೈಲಟ್ ದಾಳಿ ಮಾಡಿದ ಕಾಕ್‌ಪಿಟ್ ಘಟನೆಯ ಹಲವು ಮಾಹಿತಿ ಇಲ್ಲಿದೆ. ಸೌದಿ ಅರೇಬಿಯಾದಲ್ಲಿ ತುರ್ತು ಲ್ಯಾಂಡಿಂಗ್ ನಂತರ, ಸಹ-ಪೈಲಟ್ ಯುಎಇ ಅಧಿಕಾರಿಗಳಿಗೆ ಹಸ್ತಾಂತರಗೊಂಡಿದ್ದಾನೆ. ವಿಮಾನದ ನಿಯಂತ್ರಣ ಸಾಧಿಸಲು ಅಥವಾ ಅಪಾಯಕ್ಕೆ ಸಿಲುಕಿಸುವ ಉದ್ದೇಶ ಇತ್ತೇ ಎಂದು ಯುಎಇ ತನಿಖೆ ನಡೆಸುತ್ತಿದೆ. ಭಾರತೀಯ ಕ್ಯಾಪ್ಟನ್ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ನಿಗೂಢವಾಗಿದೆ.

ಫ್ಲೈದುಬೈ ಕಾಕ್‌ಪಿಟ್ ದಾಳಿ: ಓಮನ್​ನ  ಕೋ-ಪೈಲಟ್‌ನ್ನು ಯುಎಇಗೆ ಹಸ್ತಾಂತರಿಸಿದ ಸೌದಿ
ಫ್ಲೈದುಬೈ ವಿಮಾನ
Image Credit source: PTI

Updated on: Oct 02, 2026 | 7:55 AM

ದುಬೈ, ಅಕ್ಟೋಬರ್ 02: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ ಆರೋಪ ಎದುರಿಸುತ್ತಿರುವ ಓಮನ್ ಸಹ-ಪೈಲಟ್‌ನನ್ನು ಸೌದಿ ಅರೇಬಿಯಾ ಯುಎಇ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಕಾಕ್‌ಪಿಟ್‌ನಲ್ಲಿ ನಡೆದ ಘಟನೆಗೆ ನಿಖರ ಕಾರಣವೇನು, ಸಹ-ಪೈಲಟ್ ವಿಮಾನದ ನಿಯಂತ್ರಣವನ್ನು ಕಸಿದುಕೊಳ್ಳಲು ಅಥವಾ ವಿಮಾನವನ್ನು ಅಪಾಯಕ್ಕೆ ಸಿಲುಕಿಸಲು ಉದ್ದೇಶಿಸಿದ್ದನೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಬಳಿಕ ಬಂಧನ

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದರು.ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ವಿಮಾನ ಇಳಿದ ಬಳಿಕ ಸೌದಿ ಅಧಿಕಾರಿಗಳು ಒಮಾನಿ ಸಹ-ಪೈಲಟ್‌ನನ್ನು ವಶಕ್ಕೆ ಪಡೆದರು.

ಸೌದಿ ತನಿಖೆಯಲ್ಲಿ ಗೊತ್ತಾಗಿದ್ದೇನು?

ಸೌದಿ ಅರೇಬಿಯಾದ ಆಂತರಿಕ ಸಚಿವಾಲಯದ ಪ್ರಾಥಮಿಕ ತನಿಖೆಯ ಪ್ರಕಾರ, ಹಾರಾಟದ ವೇಳೆ ಸಹ-ಪೈಲಟ್ ಕ್ಯಾಪ್ಟನ್ ಮಚ್ಚರ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬುದು ತಿಳಿದುಬಂದಿದೆ. ಘಟನೆಯ ನಂತರ ಇಬ್ಬರೂ ಪೈಲಟ್‌ಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವೈದ್ಯಕೀಯ ಅನುಮತಿ ಪಡೆದ ಬಳಿಕ ಸಹ-ಪೈಲಟ್‌ನನ್ನು ಯುಎಇಗೆ ಕಳುಹಿಸಲಾಯಿತು. ಸೌದಿ ಅಧಿಕಾರಿಗಳು ಯುಎಇ ಭದ್ರತಾ ತಂಡಗಳೊಂದಿಗೆ ಸಮನ್ವಯದಲ್ಲಿ ಆರಂಭಿಕ ತನಿಖೆ ನಡೆಸಿದ್ದಾರೆ.

ಯುಎಇಯಲ್ಲೂ ತನಿಖೆ ಆರಂಭ

ಇದೀಗ ಪ್ರಕರಣದ ಕುರಿತು ಯುಎಇ ಅಧಿಕಾರಿಗಳು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ. ಕಾಕ್‌ಪಿಟ್‌ನಲ್ಲಿ ನಿಖರವಾಗಿ ಏನಾಯಿತು, ದಾಳಿ ಹೇಗೆ ಆರಂಭವಾಯಿತು ಮತ್ತು ವಿಮಾನವನ್ನು ತಬೂಕ್‌ಗೆ ತಿರುಗಿಸುವ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತು ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಿಶೇಷವಾಗಿ, ಸಹ-ಪೈಲಟ್ ಉದ್ದೇಶಪೂರ್ವಕವಾಗಿ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಪ್ರಯತ್ನಿಸಿದ್ದನೇ ಅಥವಾ ವಿಮಾನವನ್ನು ಅಪಘಾತಕ್ಕೀಡುಮಾಡುವ ಉದ್ದೇಶ ಹೊಂದಿದ್ದನೇ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.

ಮತ್ತಷ್ಟು ಓದಿ: ‘ದಿನವಿಡೀ ಪ್ರಾರ್ಥನೆ, ಮಹಿಳೆಯರಿಗೆ ಶೇಕ್​ಹ್ಯಾಂಡ್​ ಕೊಡಲೂ ನಿರಾಕರಣೆ’; ಧಾರ್ಮಿಕ ಉಗ್ರಗಾಮಿಯಾಗಿದ್ದ ಫ್ಲೈದುಬೈ ದಾಳಿಕೋರ ಪೈಲಟ್

ಕ್ಯಾಪ್ಟನ್ ಮಚ್ಚರ್ ಆರೋಗ್ಯ ಹೇಗಿದೆ?

ಕಾಕ್‌ಪಿಟ್ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ತಬೂಕ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಅವರನ್ನು ಯುಎಇಗೆ ಸ್ಥಳಾಂತರಿಸಲಾಯಿತು. ಯುಎಇಯಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ಮಚ್ಚರ್ ಮತ್ತು ಅವರ ಕುಟುಂಬವನ್ನು ಆಸ್ಪತ್ರೆಗೆ ಭೇಟಿ ಮಾಡಿದ್ದಾರೆ. ಭಾರತೀಯ ರಾಯಭಾರ ಕಚೇರಿ ನೀಡಿರುವ ಮಾಹಿತಿಯಂತೆ, ಮಚ್ಚರ್ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ರಾಯಭಾರ ಕಚೇರಿಯು ಅವರ ನಿರಂತರ ವೈದ್ಯಕೀಯ ಆರೈಕೆಗಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.

ಕಾಕ್‌ಪಿಟ್‌ನಲ್ಲಿ ಗಲಾಟೆ ಉಂಟಾದ ನಂತರ ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿದ್ದರು ಎಂದು ವರದಿಯಾಗಿದೆ. ಹೆಚ್ಚುವರಿ ಪೈಲಟ್‌ಗಳ ಸಹಾಯದಿಂದ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲಾಯಿತು. ಬಳಿಕ ವಿಮಾನವನ್ನು ತಬೂಕ್‌ಗೆ ಸುರಕ್ಷಿತವಾಗಿ ಇಳಿಸಲಾಯಿತು.

ದಾಳಿಯ ಹಿಂದಿನ ಉದ್ದೇಶ ಇನ್ನೂ ನಿಗೂಢ

ಈ ಘಟನೆಯ ಹಿಂದೆ ಸಹ-ಪೈಲಟ್‌ನ ನಿಖರ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆತ ಒಬ್ಬನೇ ಈ ಕೃತ್ಯ ಎಸಗಿದ್ದನೇ, ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಸಂಪರ್ಕವಿತ್ತೇ, ಅಥವಾ ವಿಮಾನವನ್ನು ಉದ್ದೇಶಪೂರ್ವಕವಾಗಿ ಅಪಾಯಕ್ಕೆ ಸಿಲುಕಿಸಲು ಪ್ರಯತ್ನಿಸಿದ್ದನೇ ಎಂಬ ಪ್ರಶ್ನೆಗಳಿಗೆ ತನಿಖೆಯ ನಂತರವೇ ಉತ್ತರ ಸಿಗಲಿದೆ. ಸದ್ಯಕ್ಕೆ ಪ್ರಕರಣದ ತನಿಖೆ ಯುಎಇ ಅಧಿಕಾರಿಗಳ ಕೈಯಲ್ಲಿದ್ದು, ಕಾಕ್‌ಪಿಟ್‌ನಲ್ಲಿನ ಸಂಪೂರ್ಣ ಘಟನಾಕ್ರಮವನ್ನು ಮರುನಿರ್ಮಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:47 am, Fri, 2 October 26

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us