ಜಕಾರ್ತಾ: ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿ ದಾಂದಲೆ ನಡೆಸಿದ್ದರಿಂದ ಆರಂಭವಾದ ಹಿಂಸಾಚಾರದಲ್ಲಿ 127 ಜನರು ಮೃತಪಟ್ಟಿದ್ದಾರೆ. ಪೊಲೀಸರು ಮತ್ತು ಫುಟ್ಬಾಲ್ ಅಭಿಮಾನಿಗಳ ನಡುವೆ ಆರಂಭವಾದ ವಾಗ್ವಾದವು ಹಿಂಸಾಚಾರಕ್ಕೆ ತಿರುಗಿತು. ಈ ವೇಳೆ ಇಬ್ಬರು ಪೊಲೀಸರೂ ಸೇರಿದಂತೆ 127 ಜನರು ಸಾವನ್ನಪ್ಪಿದ್ದಾರೆ. ಕ್ರೀಡಾಂಗಣದಲ್ಲಿಯೇ ಇಬ್ಬರು ಪೊಲೀಸರು ಹಾಗೂ 36 ಅಭಿಮಾನಿಗಳು ಮೃತಪಟ್ಟರೆ, ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ಮಾಹಿತಿ ನೀಡಿದ್ದಾರೆ. 180ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರೆಮಾ ಎಫ್ಸಿ ಮತ್ತು ಪೆರ್ಸೆಬಯಾ ಸುರಬಯ ಫುಟ್ಬಾಲ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸೋತ ತಂಡದ ಬೆಂಬಲಿಗರು ಏಕಾಏಕಿ ಕ್ರೀಡಾಂಗಣಕ್ಕೆ ನುಗ್ಗಿದರು. ಮೈದಾನಕ್ಕೆ ನುಗ್ಗಿದ ಅಭಿಮಾನಿಗಳನ್ನು ಹಿಮ್ಮೆಟ್ಟಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು. ಇದರಿಂದ ಕಾಲ್ತುಳಿತ ಉಟಾಯಿತು. ಹಲವರು ಉಸಿರುಗಟ್ಟಿ ಮೃತಪಟ್ಟರು. ಸ್ಥಳೀಯ ಸುದ್ದಿಮಾಧ್ಯಮಗಳು ಪ್ರಸಾರ ಮಾಡಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ತುಣುಕುಗಳಲ್ಲಿ ಮಲಾಂಗ್ನಲ್ಲಿ ಜನರು ಮೈದಾನದತ್ತ ಓಡುವುದು ಮತ್ತು ಶವಗಳನ್ನು ಸುತ್ತಿಟ್ಟಿರುವ ಬ್ಯಾಗ್ಗಳ ದೃಶ್ಯಗಳು ಇವೆ.
ಪ್ರಕರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ. ಇಂಡೋನೇಷ್ಯಾದ ಜನಪ್ರಿಯ ಫುಟ್ಬಾಲ್ ಕ್ಲಬ್ ಆಗಿರುವ ‘ಬಿಆರ್ಐ ಲಿಗಾ-1’ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ಪಂದ್ಯದಲ್ಲಿ ಬಿಆರ್ಐ ಲಿಗಾ-1 ತಂಡವು ಪೆರ್ಸೆಬಾಯಾ ತಂಡದ ವಿರುದ್ಧ 3-2 ಅಂತರದಲ್ಲಿ ಸೋಲನುಭವಿಸಿತ್ತು. ಇಂಡೋನೇಷ್ಯಾದ ಫುಟ್ಬಾಲ್ ಒಕ್ಕೂಟವು ಸಹ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
ಇಂಡೋನೇಷ್ಯಾದಲ್ಲಿ ಈ ಹಿಂದೆಯೂ ಹಲವು ಬಾರಿ ಫುಟ್ಬಾಲ್ ಪಂದ್ಯಗಳ ವೇಳೆ ಹಿಂಸಾಚಾರ ನಡೆದಿತ್ತು. ಹಲವು ಕ್ಲಬ್ಗಳ ನಡುವೆ ವೈಷಮ್ಯ ಇರುವುದು ಸ್ಥಳೀಯ ಆಡಳಿತಕ್ಕೆ ತಲೆನೋವಾಗಿದೆ. ಜನಪ್ರಿಯ ತಂಡಗಳ ಅಭಿಮಾನಿಗಳು ಸೋಲು-ಗೆಲುವುಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿ, ಹಿಂಸಾಚಾರಕ್ಕೆ ಕಾರಣರಾಗುತ್ತಾರೆ.
Published On - 7:15 am, Sun, 2 October 22