ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ, ನೇಪಾಳ, ಪಾಕಿಸ್ತಾನದಲ್ಲಿ ವಿದೇಶಿ ಮೀಸಲು ನಿಧಿ ಕುಸಿತ: ಭಾರತದ ಸುತ್ತಲ ದೇಶಗಳಲ್ಲಿ ತಲ್ಲಣ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 08, 2022 | 1:13 PM

ಈ ಹಂತದಲ್ಲಿ ಆ ದೇಶಗಳ ಆರ್ಥಿಕತೆ ಸುಧಾರಣೆಗೆ ಭಾರತ ತಕ್ಷಣಕ್ಕೆ ಏನೂ ಮಾಡಲಾರದು.

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ, ನೇಪಾಳ, ಪಾಕಿಸ್ತಾನದಲ್ಲಿ ವಿದೇಶಿ ಮೀಸಲು ನಿಧಿ ಕುಸಿತ: ಭಾರತದ ಸುತ್ತಲ ದೇಶಗಳಲ್ಲಿ ತಲ್ಲಣ
ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಶ್ರೀಲಂಕಾ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
Follow us on

ದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಸಮಸ್ಯೆಗಳು ಸದ್ಯಕ್ಕೆ ಪರಿಹಾರವಾಗುವಂತಿಲ್ಲ. ಅಧ್ಯಕ್ಷ ಗೊಟಬಾಯ ರಾಜಪಕ್ಸೆ ವಿರುದ್ಧ ಜನರ ಅಸಹನೆ ಮತ್ತು ಪ್ರತಿಭಟನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅನಿರ್ದಿಷ್ಟಾವಾಧಿ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಹೇರಿದ್ದಾರೆ. ಶ್ರೀಲಂಕಾದ ಇಂದಿನ ದುಸ್ಥಿತಿಗೆ ರಾಜಪಕ್ಸೆ ಕುಟುಂಬದ ದುರಾಡಳಿತವೇ ಕಾರಣ. ಅವರು ಮೊದಲು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಈ ನಡುವೆ ಪ್ರಧಾನಿ ಮಹಿಂದಾ ರಾಜಪಕ್ಸೆ ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿದ್ದು ಅಧ್ಯಕ್ಷರು ರಾಜೀನಾಮೆ ನೀಡಲು ಸೂಚಿಸಿಲ್ಲ ಎಂದಿದ್ದಾರೆ.

ಸುಮಾರು 2.2 ಕೋಟಿ ಜನಸಂಖ್ಯೆಯಿರುವ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಅಸಹನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರದ ಚುಕ್ಕಾಣಿ ಹಿಡಿದಿರುವ ರಾಜಪಕ್ಸೆ ಕುಟುಂಬಕ್ಕೆ ಜನರನ್ನು ಸಮಾಧಾನಪಡಿಸಲು ಸಾದ್ಯವಾಗುತ್ತಿಲ್ಲ. ಈ ಹಂತದಲ್ಲಿ ಪ್ರಧಾನಿಯನ್ನು ಬದಲಿಸಿದರೂ ಜನರಿಗೆ ತೃಪ್ತಿ ಸಿಗುತ್ತದೆ ಎಂದೇನಿಲ್ಲ. ಭಾರತವು ಈವರೆಗೆ 2.5 ಶತಕೋಟಿ ಅಮೆರಿಕ ಡಾಲರ್ ಮೊತ್ತದಷ್ಟು ಸಹಾಯಧನವನ್ನು ಶ್ರೀಲಂಕಾಕ್ಕೆ ಒದಗಿಸಿದೆ. ಚೀನಾ, ವಿಶ್ವ ಹಣಕಾಸು ನಿಧಿಯ ನೆರವನ್ನೂ ಶ್ರೀಲಂಕಾ ಕೋರಿದೆ. ಶ್ರೀಲಂಕಾ ಈಗಾಗಲೇ ಚೀನಾದಿಂದ ಗಮನಾರ್ಹ ಪ್ರಮಾಣದ ಸಾಲ ಪಡೆದಿದೆ. ಜಪಾನ್ ಮತ್ತು ವಿಶ್ವ ಹಣಕಾಸು ನಿಧಿಗೂ ಗಮನಾರ್ಹ ಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡಬೇಕಿದೆ. ಶ್ರೀಲಂಕಾ ಮಾಡಿಕೊಂಡಿರುವ ಒಟ್ಟು ಸಾಲದ ಮೊತ್ತವನ್ನು ವಿಶ್ಲೇಷಿಸಿದರೆ ಚೀನಾದಿಂದ ಶೇ 10 ಮತ್ತು ಭಾರತದಿಂದ ಶೇ 4ರಷ್ಟು ಸಾಲ ಪಡೆದಿರುವುದು ತಿಳಿದುಬರುತ್ತದೆ.

ಭಾರತದ ನೆರೆಹೊರೆಯಲ್ಲಿರುವ ಇತರ ಎರಡು ದೇಶಗಳಾದ ನೇಪಾಳ ಮತ್ತು ಪಾಕಿಸ್ತಾನಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಎರಡೂ ದೇಶಗಳು ಚೀನಾದೊಂದಿಗೆ ನಿಕಟ ಸಂಬಂಧ ಹೊಂಂದಿವೆ ಎನ್ನುವುದನ್ನು ಗಮನಿಸಬಹುದು. ಶ್ರೀಲಂಕಾದಂತೆ ಈ ದೇಶಗಳಲ್ಲಿಯೂ ಆರ್ಥಿಕ ಶಿಸ್ತಿನ ಉಲ್ಲಂಘನೆ, ಸಾಲ ಮರುಪಾವತಿ ವೈಫಲ್ಯ, ಕೆಟ್ಟ ಆಡಳಿತ, ಆಹಾರ ಮತ್ತು ಇಂಧನ ಮತ್ತು ಆಹಾರ ಪದಾರ್ಥಗಳ ದರಗಳಲ್ಲಿ ವಿಪರೀತ ಏರಿಕೆಯೇ ಆರ್ಥಿಕ ಬಿಕ್ಕಟ್ಟಿನ ಬಿಸಿ ಜನರನ್ನು ತೀವ್ರವಾಗಿ ತಟ್ಟಲು ಮುಖ್ಯ ಕಾರಣಗಳಾಗಿವೆ.

ಇದೀಗ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಎಲ್ಲ ಮೂರೂ ದೇಶಗಳು ಚೀನಾದ ಬೆಲ್ಟ್ ರೋಡ್ ಯೋಜನೆಯ ಭಾಗವಾಗಿವೆ. ಅಷ್ಟೇ ಅಲ್ಲ, ಚೀನಾ ಕೊಟ್ಟ ಸಾಲದ ಸುಳಿಗೆ ಸಿಲುಕಿವೆ. ಚೀನಾದ ಎಕ್ಸಿಮ್ ಬ್ಯಾಂಕ್ ಈ ದೇಶಗಳಿಗೆ ಗಮನಾರ್ಹ ಪ್ರಮಾಣದ ಸಾಲ ಕೊಟ್ಟಿದೆ ಎಂಬುದು ಎದ್ದು ಕಾಣುತ್ತದೆ.

ಶ್ರೀಲಂಕಾ ಮತ್ತು ನೇಪಾಳಗಳೊಂದಿಗೆ ಭಾರತವು ಮುಕ್ತ ಗಡಿ ಹೊಂದಿದೆ. ಹೀಗಾಗಿ ಈ ದೇಶಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ ಭಾರತಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಬಹುದು. ಪಾಕಿಸ್ತಾನವು ಈಗಾಗಲೇ ಸೌದಿ ಅರೇಬಿಯಾ ಮತ್ತು ಅರಬ್ ಸಂಯುಕ್ತ ಸಂಸ್ಥಾನಗಳೊಂದಿಗೆ (ಯುಎಇ) ಸಾಲ ಹೊಂದಾಣಿಕೆ ಒಪ್ಪಂದ ಮಾಡಿಕೊಂಡಿದೆ. ಆದರೂ ಅಲ್ಲಿ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಪಾಕಿಸ್ತಾನದ ಆರ್ಥಿಕ ಭವಿಷ್ಯದ ಎದುರು ದೊಡ್ಡ ಪ್ರಶ್ನೆ ಮೂಡಿದೆ.

ಈ ಮೂರೂ ದೇಶಗಳ ಆರ್ಥಿಕ ಬಿಕ್ಕಟ್ಟು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಅವಕಾಶಗಳನ್ನು ಒದಗಿಸುತ್ತದೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಅಂಕಿಅಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿದರೆ ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನಗಳ ಆರ್ಥಿಕ ಬಿಕ್ಕಟ್ಟಿಗೆ ಹತ್ತಾರು ವರ್ಷಗಳ ಆರ್ಥಿಕ ಅಶಿಸ್ತು ಮತ್ತು ಕಳಪೆ ಅಡಳಿತವೇ ಮುಖ್ಯ ಕಾರಣ ಎಂದು ತಿಳಿದುಬರುತ್ತದೆ. ಈ ಹಂತದಲ್ಲಿ ಆ ದೇಶಗಳ ಆರ್ಥಿಕತೆ ಸುಧಾರಣೆಗೆ ಭಾರತ ತಕ್ಷಣಕ್ಕೆ ಏನೂ ಮಾಡಲಾರದು. ಆದರೆ ಅಷ್ಟೋಇಷ್ಟೋ ಹಣಸಹಾಯ ಮಾಡುವ ಮೂಲಕ ಅಲ್ಲಿನ ಜನರ ಒಲವು ಗಳಿಸಲು ಮತ್ತು ಅವರ ಸಿಟ್ಟು ಕಡಿಮೆ ಮಾಡಲು ಮಾತ್ರ ಯತ್ನಿಸಬಹುದು.

ಶ್ರೀಲಂಕಾಕ್ಕೆ ಹೋಲಿಸಿದರೆ ಪಾಕಿಸ್ತಾನ ಮತ್ತು ನೇಪಾಳಗಳ ಪರಿಸ್ಥಿತಿ ತುಸು ವಾಸಿ ಎನ್ನುವಂತಿದೆ. ಐಷಾರಾಮಿ ವಸ್ತುಗಳ ಆಮದನ್ನು ನೇಪಾಳ ನಿರ್ಬಂಧಿಸಿದ್ದರೆ, ಪಾಕಿಸ್ತಾನವು ಇಂಧನ ಮತ್ತು ವಿದ್ಯುತ್ ಸಬ್ಸಿಡಿಯನ್ನು ಹಂತಹಂತವಾಗಿ ಹಿಂಪಡೆಯಲು ಅರಂಭಿಸಿದೆ. ಆದರೆ ತೀವ್ರ ಜನಾಕ್ರೋಶ ಎದುರಿಸುತ್ತಿರುವ ಶ್ರೀಲಂಕಾ ಸರ್ಕಾರಕ್ಕೆ ಮಾತ್ರ ಯಾವುದೇ ಕಠಿಣ ಕ್ರಮ ಘೋಷಿಸಲು ಸಾಧ್ಯವಾಗಿಲ್ಲ. ಪಾಕಿಸ್ತಾನದಂತೆ ಸರ್ಕಾರ ಬದಲಿಸಲು ಬೇಕಿರುವಷ್ಟು ಸದಸ್ಯಬಲವೂ ಶ್ರೀಲಂಕಾದ ವಿರೋಧ ಪಕ್ಷಗಳಿಗೆ ಇಲ್ಲ ಎನ್ನುವುದು ಶ್ರೀಲಂಕಾದ ಪರಿಸ್ಥಿತಿ ಬಿಗಡಾಯಿಸಲು ಮತ್ತೊಂದು ಮುಖ್ಯ ಕಾರಣವಾಗಿದೆ.

ಈ ದೇಶಗಳ ಸಂಕಷ್ಟಕ್ಕೆ ಪ್ರತ್ಯಕ್ಷವಾಗಿಯೋ-ಪರೋಕ್ಷವಾಗಿಯೋ ಕಾರಣವಾಗಿರುವ ಚೀನಾ, ಈ ದೇಶಗಳಿಗೆ ನೆರವಾಗುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ವಿಪರ್ಯಾಸದ ಸಂಗತಿ. ಕೊವಿಡ್​ನ ಸುದೀರ್ಘ ಹೊಡೆತದಿಂದ ಹೈರಾಣಾಗಿರುವ ಚೀನಾದಲ್ಲಿ ಇಂದಿಗೂ ಸೋಂಕಿನ ಸಮಸ್ಯೆ ಪರಿಹಾರವಾಗಿಲ್ಲ. ಅಗತ್ಯ ಪ್ರಮಾಣದಲ್ಲಿ ವಿದೇಶಿ ಮೀಸಲು ನಿಧಿ ಸಂಗ್ರಹಿಸಿಕೊಳ್ಳದೆ ವಿದೇಶಗಳ ನೆರವಿನಿಂದ ದೊಡ್ಡಮಟ್ಟದ ಮೂಲಸೌಕರ್ಯ ನಿರ್ಮಾಣ ಯೋಜನೆಗಳಿಗೆ ಕೈಹಾಕಿದ್ದು ಈ ದೇಶಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲು ಇರುವ ಮತ್ತೊಂದು ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: Sri Lanka: ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದಲ್ಲಿ 5 ವಾರಗಳಲ್ಲಿ ಎರಡನೇ ಬಾರಿಗೆ ತುರ್ತು ಪರಿಸ್ಥಿತಿ ಜಾರಿ

ಇದನ್ನೂ ಓದಿ: Sri Lanka Protest Live Updates: ಶ್ರೀಲಂಕಾ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವವರ ಮೇಲೆ ಪೊಲೀಸ್ ಫೈರಿಂಗ್; ಓರ್ವ ಸಾವು

Published On - 1:13 pm, Sun, 8 May 22