ಕೊರೊನಾದಂತಹ ಮಹಾಮಾರಿಯನ್ನು ವಿಶ್ವಕ್ಕೆ ಪರಿಚಯಿಸಿದ ಚೀನಾದಲ್ಲಿ ಮತ್ತೊಂದು ಭೀಕರ, ಪೈಶಾಚಿಕ ಪ್ರಸಂಗ ನಡೆದಿದೆ. ಅದೇನಂದ್ರೆ ನಾಯಿಗಳು, ಬೆಕ್ಕುಗಳು, ಮೊಲಗಳು ಸೇರಿದಂತೆ ಸುಮಾರು 4,000 ಸಾಕುಪ್ರಾಣಿಗಳ ಖರೀದಿಗಾಗಿ ಗ್ರಾಹಕರು ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಿದ್ದಾರೆ. ಮುಂದೇನಾಯ್ತು ಅದೇ ವ್ಯಥೆ, ವಿಷಾದದ ವಿಚಾರ.
ಹಾಗೆ ಗ್ರಾಹಕರು ಸಾಕುಪ್ರಾಣಿಗಳನ್ನು ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸುತ್ತಿದ್ದಂತೆ ಆ ಕಂಪನಿಯವರು 4,000 ಸಾಕುಪ್ರಾಣಿಗಳ ಡೆಲಿವರಿಗಾಗಿ ಲೋಹದ ಪಂಜರಗಳು, ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ಹಾಕಿ ಪ್ಯಾಕ್ ಮಾಡಿದ್ದಾರೆ. ಆದರೆ ಒಂದು ವಾರ ಕಳೆದರೂ ಅದು ಡೆಲಿವರಿಯಾಗಿಲ್ಲ. ಪಾಪ ಆ ಮೂಕ ಪ್ರಾಣಿಗಳು ಏನು ಮಾಡಬೇಕು? ಊಟ, ನೀರು ಇಲ್ಲದೆ ಅಷ್ಟೂ ಸಾಕುಪ್ರಾಣಿಗಳು ಮೃತಪಟ್ಟಿವೆ ಎನ್ನಲಾಗಿದೆ. ಇಂತಂಹದ್ದೊಂದು ಅಮಾನವೀಯ ಘಟನೆ ನಡೆದಿರೋದು ಇದೇ ಚೀನಾದ ಹೆನಾನ್‌ನ ಲುಹೋಹೆ ನಗರದ ಡಾಂಗ್‌ಸಿಂಗ್ ಲಾಜಿಸ್ಟಿಕ್ಸ್ ಕೇಂದ್ರದಲ್ಲಿ!
ಈಗಾಗಲೇ 4,000 ಸಾಕುಪ್ರಾಣಿಗಳು ಮೃತಪಟ್ಟಿವೆ. ಈ ಮಧ್ಯೆ 1,000 ಮೊಲಗಳು, ಬಿಳಿ ಇಲಿಗಳು, ನಾಯಿಗಳು ಮತ್ತು ಬೆಕ್ಕುಗಳನ್ನು ಉಳಿಸುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಗಿದೆ. ಇನ್ನು ಅನಾರೋಗ್ಯಕ್ಕೆ ಒಳಗಾದ ಪ್ರಾಣಿಗಳನ್ನು ಪಶು ವೈದ್ಯಕೀಯ ಚಿಕಿತ್ಸಾಲಯಗಳಿಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಾಕು ಪ್ರಾಣಿಗಳನ್ನು ಅನೇಕರು ದತ್ತು ಪಡೆದವರಿದ್ದರು. ಇದೇ ಮೊದಲ ಬಾರಿಗೆ ಇಂತಹ ಘಟನೆ ಸಂಭವಿಸಿದ್ದು, ಆನ್‌ಲೈನ್ ಡೆಲಿವರಿ ಏಜೆನ್ಸಿಯಿಂದ ಇಂತಹ ದೊಡ್ಡ ಪ್ರಮಾದ ನಡೆದಿದೆ.
Published On - 4:16 pm, Fri, 2 October 20