Drunkest Country: ಜಗತ್ತಿನ ಯಾವ ದೇಶದ ಜನರು ಹೆಚ್ಚಾಗಿ ಕುಡಿಯುತ್ತಾರೆ?; ಇಲ್ಲಿದೆ ಕುತೂಹಲಕರ ಮಾಹಿತಿ

| Updated By: shivaprasad.hs

Updated on: Dec 03, 2021 | 9:18 PM

Global Drug Survey: ಜಗತ್ತಿನ ಯಾವ ರಾಷ್ಟ್ರದಲ್ಲಿ ಜನರು ಹೆಚ್ಚಾಗಿ ಕುಡಿಯುತ್ತಾರೆ? ಜನರ ಕುಡಿತಕ್ಕೆ ಕಾರಣಗಳೇನಿರಬಹುದು? ಕುಡಿದ ನಂತರ ಯಾವ ದೇಶದ ಜನರು ಹೆಚ್ಚಾಗಿ ಪಶ್ಚಾತ್ತಾಪ ಪಡುತ್ತಾರೆ? ಈ ಎಲ್ಲಾ ಕುತೂಹಲಕರ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Drunkest Country: ಜಗತ್ತಿನ ಯಾವ ದೇಶದ ಜನರು ಹೆಚ್ಚಾಗಿ ಕುಡಿಯುತ್ತಾರೆ?; ಇಲ್ಲಿದೆ ಕುತೂಹಲಕರ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಜಗತ್ತಿನ ಯಾವ ದೇಶದ ಜನರು ಹೆಚ್ಚಾಗಿ ಕುಡಿಯುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ ಎಂದಾದರೂ ಮೂಡಿದೆಯೇ? ಇತ್ತೀಚಿನ ಸಂಶೋಧನೆಯೊಂದು ನಿಮ್ಮ ಕುತೂಹಲ ತಣಿಸುವ ಮಾಹಿತಿ ಬಿಡುಗಡೆ ಮಾಡಿದೆ. ಅಲ್ಲದೇ, ಈ ಕುರಿತು ಅಂಕಿಅಂಶಗಳ ಸಮೇತ ಜಗತ್ತಿನ ಅತ್ಯಂತ ಹೆಚ್ಚು ಕುಡುಕ ದೇಶವನ್ನು ಘೋಷಿಸಿದೆ. ಗ್ಲೋಬಲ್ ಡ್ರಗ್ ಸರ್ವೆ (ಜಿಡಿಎಸ್)ನ ಅಧ್ಯಯನದ ಪ್ರಕಾರ, 2020 ರಲ್ಲಿ ಆಸ್ಟ್ರೇಲಿಯಾವು ಹೆಚ್ಚು ಕುಡುಕ ದೇಶವಾಗಿ ಹೊರಹೊಮ್ಮಿದೆ. ಲಂಡನ್ ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಗ್ಲೋಬಲ್ ಡ್ರಗ್ ಸರ್ವೆ, ಜನರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಆಧರಿಸಿ ‘ಹೆಚ್ಚು ಆಲ್ಕೊಹಾಲ್ ಸೇವಿಸಲಾಗಿದೆ’ ಎಂಬುದನ್ನು ವ್ಯಾಖ್ಯಾನಿಸಿದೆ. ಇದರ ಆಧಾರದಲ್ಲಿ ಕುಡಿದ ನಂತರ ವಸ್ತುಗಳ ಕಡೆ ಗಮನ ಕೇಂದ್ರೀಕರಿಸಲಾಗದಿರುವುದು ಮತ್ತು ಪರಿಚಯದವರೊಂದಿಗೆ ಮಾತನಾಡುವಾಗ ಸಂಭಾಷಣೆ ಹಾಗೂ ನಡವಳಿಕೆಗಳ ವ್ಯತ್ಯಾಸಗಳನ್ನು ‘ಹೆಚ್ಚು ಕುಡಿತದ ಪರಿಣಾಮ’ ಎಂದು ವ್ಯಾಖ್ಯಾನಿಸಲಾಗಿದೆ. ಇವುಗಳ ಆಧಾರದಲ್ಲಿ ಅಧ್ಯಯನ ನಡೆಸಲಾಗಿದೆ.

ತಮ್ಮ ಸಮೀಕ್ಷೆಗಾಗಿ ಜಿಡಿಎಸ್​​ನಲ್ಲಿನ ಸಂಶೋಧಕರು ವರ್ಷದ ಕೊನೆಯ ತಿಂಗಳುಗಳಲ್ಲಿ 22 ದೇಶಗಳ 32,022 ಜನರಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ. ಸಮೀಕ್ಷೆಯು ವಿಶ್ವ ಆರೋಗ್ಯ ಸಂಸ್ಥೆ ಸಿದ್ಧಪಡಿಸಿದ AUDIT (ಆಲ್ಕೋಹಾಲ್ ಯೂಸ್ ಡಿಸಾರ್ಡರ್ಸ್ ಐಡೆಂಟಿಫಿಕೇಶನ್ ಟೆಸ್ಟ್) ಪ್ರಶ್ನಾವಳಿಯನ್ನು ಅವಲಂಬಿಸಿದೆ . ಅಧ್ಯಯನದಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದವರು ವರ್ಷಕ್ಕೆ ಸರಾಸರಿ 14.6 ಬಾರಿ ಕುಡಿದಿದ್ದಾರೆ ಎಂದಿದ್ದನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಅಂದರೆ ಒಬ್ಬ ವ್ಯಕ್ತಿ ಸರಾಸರಿ ತಿಂಗಳಿಗೊಮ್ಮೆ (ಅದಕ್ಕಿಂತ ಸ್ವಲ್ಪ ಹೆಚ್ಚು) ಕುಡಿದಿದ್ದಾನೆ ಎನ್ನಬಹುದು. ಆದರೆ ಸಮೀಕ್ಷೆಯಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಆಸ್ಟ್ರೇಲಿಯಾವನ್ನು ಪರಿಗಣಿಸಿದರೆ, ಅಲ್ಲಿನವರು ತಿಂಗಳಿಗೆ ಎರಡು ಬಾರಿ ಕುಡಿದಿದ್ದಾರೆ. ಹಾಗೆಯೇ ಮೆಕ್ಸಿಕೋದಿಂದ ಬಂದವರು ಕಳೆದ 12 ತಿಂಗಳುಗಳಲ್ಲಿ 8.9 ಬಾರಿ ಕುಡಿದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜನರು ಮದ್ಯಪಾನ ಮಾಡಲು ಕಾರಣಗಳೇನು ಎಂಬುದನ್ನೂ ಸಮೀಕ್ಷೆಯು ಒಳಗೊಂಡಿದೆ. ಆನಂದಕ್ಕಾಗಿ, ತಮಾಷೆಗಾಗಿ ಅಥವಾ ಸಮಸ್ಯೆಯಿಂದ ನೊಂದು ಮದ್ಯ ಸೇವಿಸುವವರನ್ನು ಅಧ್ಯಯನದಲ್ಲಿ ಗುರುತಿಸಲಾಗಿದೆ. ಅದರ ಪ್ರಕಾರ, ಕುಡಿಯುವವರಿಗೆ ಎಲ್ಲಾ ಮೂರು ವಿಷಯಗಳು ಕುಡಿತಕ್ಕೆ ಬಹಳ ಮುಖ್ಯ ಕಾರಣಗಳಂತೆ! ಆದಾಗ್ಯೂ, ಕಡಿಮೆ ಆಲ್ಕೋಹಾಲ್ ಪ್ರಮಾಣವನ್ನು ಹೊಂದಿರುವುದನ್ನು ಕುಡಿಯುವವರು ಸಂತೋಷದ ಕಾರಣಕ್ಕಾಗಿ ಕುಡಿಯುತ್ತಾರಂತೆ.

ಬ್ರೆಜಿಲ್, ಮೆಕ್ಸಿಕೋ ಮತ್ತು ಸ್ಪೇನ್‌ನಲ್ಲಿರುವ ಜನರು ಕುಡಿದ ನಂತರ ಮರಳುವಾಗ ಆಗುವ ಹಾನಿಯನ್ನು ತಪ್ಪಿಸಲು ಆದ್ಯತೆ ನೀಡುತ್ತಾರಂತೆ. ನೆದರ್ಲ್ಯಾಂಡ್ಸ್​​ನ ಜನರು ಆನಂದಕ್ಕಾಗಿ ಕುಡಿಯುವವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಫಿನ್ಲ್ಯಾಂಡ್ ಜನರು ಮದ್ಯಪಾನದಲ್ಲಿ ಪಾಲ್ಗೊಳ್ಳಲು ತಮಾಷೆ, ವಿನೋದಕ್ಕಾಗಿ ಕುಡಿಯುತ್ತೇವೆ ಎಂದು ಹೇಳಿದ್ದಾರಂತೆ.

ಕುಡಿದ ನಂತರ ಪಶ್ಚಾತ್ತಾಪ ಕಾಡುತ್ತದೆಯೇ ಎಂಬ ಪ್ರಶ್ನೆಯನ್ನೂ ಸರ್ವೆ ಒಳಗೊಂಡಿತ್ತು. ಈ ಪ್ರಶ್ನೆಗೆ ಐರ್ಲೆಂಡ್​ನ ಬಹಳಷ್ಟು ಜನರು ಹೌದು ಎಂದಿದ್ದಾರೆ. ‘‘ತಾವು ಕುಡಿಯಲೇ ಬಾರದಿತ್ತು.. ಅಥವಾ ಸ್ವಲ್ಪ ಕಡಿಮೆ ಕುಡಿಯಬಹುದಿತ್ತು’’ ಎಂದು ಐರ್ಲೆಂಡಿನ ಕಾಲು ಭಾಗದಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಉಳಿದ ದೇಶಗಳಿಗೆ ಹೋಲಿಸಿದರೆ ಈ ಸಂಖ್ಯೆ ಐರ್ಲೆಂಡ್​ನಲ್ಲಿ ಹೆಚ್ಚಾಗಿದೆ. ಅಲ್ಲದೇ ಕುಡಿದಿರುವುದಕ್ಕೆ ಯಾವುದೇ ಪಶ್ಚಾತ್ತಾಪದ ಭಾವನೆ ಇಲ್ಲದ ದೇಶಗಳ ಪಟ್ಟಿಯಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ. ಹೀಗೆ ಸರ್ವೆಯು ಹಲವು ಅಚ್ಚರಿಯ ಮಾಹಿತಿಗಳನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ:

Omicron in India ಹೊಸ ಕೊವಿಡ್-19 ರೂಪಾಂತರಿ ಆತಂಕ; ಆರೋಗ್ಯದ ಕಾಳಜಿಗೆ ಇಲ್ಲಿದೆ ತಜ್ಞರ ಸಲಹೆ

ಬೆಂಗಳೂರು: ಸಕಾಲಕ್ಕೆ ಚಿಕಿತ್ಸೆ ಸಿಕ್ಕರೆ ಹೃದಯ ಸ್ತಂಭನಕ್ಕೀಡಾದ ವ್ಯಕ್ತಿ ಸಾವನ್ನು ಜಯಿಸಬಹುದು; ಇಲ್ಲಿದೆ ಯಶಸ್ವಿ ಉದಾಹರಣೆ

Published On - 8:51 pm, Fri, 3 December 21