ಹಲವು ಯುದ್ಧಗಳಲ್ಲಿ ರಷ್ಯಾ ಸಾಧಿಸಿದ ಗೆಲುವುಗಳಿಗೂ, ಚಳಿಗಾಲಕ್ಕೂ ನೇರ ಸಂಬಂಧವಿದೆ. ಟರ್ಕಿ, ಫ್ರಾನ್ಸ್, ಜರ್ಮನಿ ದೇಶಗಳು ರಷ್ಯಾ ಗೆಲ್ಲಲು ನಡೆಸಿದ ದಾಳಿಯನ್ನು ರಷ್ಯಾ ಚಳಿಗಾಲಕ್ಕೆ ಕಾದು ಹಿಮ್ಮೆಟ್ಟಿಸಿತ್ತು. ಮೊದಲು ಸೋತಂತೆ ಮಾಡಿ ಹಿಂದೆ ಸರಿಯುವುದು. ಅಗತ್ಯ ಸಿದ್ಧತೆ ಮಾಡಿಕೊಂಡು ಸಮಯ ನೋಡಿ ಪ್ರತಿದಾಳಿ ನಡೆಸುವುದು ರಷ್ಯಾ ಸಾಮಾನ್ಯವಾಗಿ ಅನುಸರಿಸುವ ಯುದ್ಧತಂತ್ರ. ಇದೀಗ ಉಕ್ರೇನ್ನ ಹಲವು ನಗರಗಳಲ್ಲಿ ರಷ್ಯಾ ಸೋತಂತೆ ಮಾಡಿ ಹಿಮ್ಮೆಟ್ಟುತ್ತಿರುವುದು ಸಹ ಇಂಥದ್ದೇ ತಂತ್ರದ ಒಂದು ಭಾಗ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಸೇರಿ ಹಲವು ಪ್ರಮುಖ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಕೊರೆಯುವ ಭೀಕರ ಚಳಿಗಾಲವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಲ್ಲಿ ರಷ್ಯಾ ವಿಶೇಷ ಪರಿಣತಿ ಸಾಧಿಸಿದೆ. ಇದೇ ಕಾರಣಕ್ಕೆ ‘ಜನರಲ್ ವಿಂಟರ್’ (ಚಳಿಯೆಂಬ ಯುದ್ಧನಾಯಕ) ಎಂಬ ಪದಗುಚ್ಛವೂ ರಷ್ಯಾದಲ್ಲಿ ಜನಪ್ರಿಯವಾಗಿದೆ. ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಮೊದಲ ಬಾರಿಗೆ ಈ ಋತುಮಾನದ ಹಿಮಪಾತ ಆರಂಭವಾಗಿದ್ದು, ಎಲ್ಲೆಡೆ ಭೀತಿ ಆವರಿಸಿದೆ. ಉಕ್ರೇನ್ನ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಪ್ರಕ್ರಿಯೆಯನ್ನು ರಷ್ಯಾ ಮುಂದುವರಿಸಿದೆ. ಚಳಿಗಾಲದಲ್ಲಿ ಉಕ್ರೇನ್ನ ಹಲವು ಪ್ರಾಂತ್ಯಗಳಲ್ಲಿ ಉಷ್ಣಾಂಶವು ಮೈನಸ್ 20 ಡಿಗ್ರಿ ಸೆಲ್ಷಿಯಸ್ವರೆಗೆ ಕುಸಿಯುತ್ತದೆ. ವಿದ್ಯುತ್ ಹೀಟರ್ಗಳು ಇಲ್ಲದಿದ್ದರೆ ಜನರು ಮನೆಗಳನ್ನು ಬಿಸಿಯಾಗಿಸಿಕೊಳ್ಳುವುದೇ ಕಷ್ಟ. ಸರ್ಕಾರವು ಜನರ ಕಷ್ಟಕ್ಕೆ ಸ್ಪಂದಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದರಿಂದ ಉಕ್ರೇನ್ನ ಪ್ರತಿರೋಧ ಕಡಿಮೆಯಾಗಬಹುದು ಎಂಬುದು ರಷ್ಯಾದ ನಿರೀಕ್ಷೆಯಾಗಿದೆ.
ಹಿಮಪಾತ ಆರಂಭವಾದರೆ ಹೊಲಗಳು ಕೆಸರುಮೊಸರಾಗುತ್ತವೆ. ಮುಖ್ಯರಸ್ತೆಗಳನ್ನು ಬಿಟ್ಟು ಬೇರೆಡೆ ಯುದ್ಧೋಪಕರಣಗಳ ಸಂಚಾರವೇ ಕಷ್ಟ. ಯೋಧರು ಬಯಲಿನಲ್ಲಿ ಅಡಗಿ ಕೂರುವುದೂ ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಉಕ್ರೇನ್ ಯೋಧರ ಯುದ್ಧೋತ್ಸಾಹವೂ ಕುಸಿಯಲಿದೆ. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು ಏಕಾಏಕಿ ಮತ್ತೊಂದು ಹಠಾತ್ ದಾಳಿ ನಡೆಸಿದರೆ ಉಕ್ರೇನ್ ಸೋಲಲಿದೆ ಎನ್ನುವುದು ರಷ್ಯಾದ ನಿರೀಕ್ಷೆ.
ಚಳಿಗಾಲದಲ್ಲಿ ಸೈನಿಕರು ಬದುಕಿ ಉಳಿಯಲು ಅಗತ್ಯವಿರುವ ವಿಶೇಷ ಬಟ್ಟೆ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳಿಸಿಕೊಡಬೇಕು ಎಂದು ಉಕ್ರೇನ್ ಸರ್ಕಾರವು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಮೊರೆಯಿಟ್ಟಿದೆ. ಮತ್ತೊಂದೆಡೆ ರಷ್ಯಾ ಸಹ ಕಳೆದ ಸೆಪ್ಟೆಂಬರ್ನಲ್ಲಿ ಭರ್ತಿ ಮಾಡಿಕೊಂಡಿರುವ ಬಿಸಿರಕ್ತದ ತರುಣರಿಗೆ ತರಬೇತಿ ತೀವ್ರಗೊಳಿಸಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ವತಃ ಸೈನಿಕ ತರಬೇತಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದು, ತರಬೇತಿಯನ್ನು ಗಮನಿಸುತ್ತಿದ್ದಾರೆ.
ನಿರೀಕ್ಷೆಗೂ ಮೀರಿದ ಪ್ರತಿರೋಧ, ಸುದೀರ್ಘ ಯುದ್ಧ ಮತ್ತು ಜೊತೆಗಾರರ ಸಾವಿನಿಂದ ಕುದಿಯುತ್ತಿರುವ ರಷ್ಯಾ ಸೇನೆ ಉಕ್ರೇನ್ನಿಂದ ಹಠಾತ್ ಹಿಂದೆ ಸರಿದಿರುವುದು ಸಹ ಈ ವಿಶ್ಲೇಷಣೆಗಳಿಗೆ ಪುಷ್ಟಿ ನೀಡುತ್ತಿದೆ. ಖೆರ್ಸೋನ್ ಸೇರಿದಂತೆ ಹಲವು ಪ್ರಮುಖ ನಗರಗಳನ್ನು ಸುಲಭವಾಗಿ ಗೆದ್ದ ಖುಷಿಯಲ್ಲಿರುವ ಉಕ್ರೇನ್ ಸೇನೆಯು ಸಂಭ್ರಮಾಚಾರಣೆಯಲ್ಲಿ ಮುಳುಗಿದೆ. ‘ಇಡೀ ರಷ್ಯಾ ಆರ್ಥಿಕವಾಗಿ ಕುಸಿದುಬೀಳುವವರೆಗೆ ಅವರು ಸೋಲೊಪ್ಪುವುದಿಲ್ಲ. ಮೊದಲು ಸೋತಂತೆ ಮಾಡಿ, ಎದುರಾಳಿಯ ಉತ್ಸಾಹ ಹೆಚ್ಚಿಸಿ, ನಂತರ ಮುನ್ನುಗ್ಗುವುದು ರಷ್ಯಾದ ಪಾರಂಪರಿಕ ಯುದ್ಧತಂತ್ರ. ಉಕ್ರೇನ್ ಯುದ್ಧದಲ್ಲಿ ಏನೋ ಮಹತ್ವದ ಬೆಳವಣಿಗೆ ನಡೆಯಲಿದೆ ಎಂಬ ಊಹೆ ಎಲ್ಲರಿಗೂ ಇದೆ. ಆದರೆ ಅದು ಏನು ಎಂಬ ಬಗ್ಗೆ ಯಾರಿಗೂ ಖಚಿತ ಮಾಹಿತಿಯಿಲ್ಲ’ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ನಲ್ಲಿ ಯುದ್ಧದ ವಿಶ್ಲೇಷಕರಾದ ಮ್ಯಾಥ್ಯೂ ಲಕ್ಸ್ಮೂರ್, ಸ್ಟೀಫನ್ ಫಿಡ್ಲರ್ ಬರೆದಿದ್ದಾರೆ.
ಮುಂದುವರಿದ ರಷ್ಯಾ ಶೆಲ್ ದಾಳಿ
ಉಕ್ರೇನ್ನ ಪೂರ್ವಭಾಗದಲ್ಲಿ ರಷ್ಯಾ ಶೆಲ್ ದಾಳಿ ಮುಂದುವರಿದಿದೆ. ಭಾನುವಾರ ಒಂದೇ ದಿನ 400ಕ್ಕೂ ಹೆಚ್ಚು ಶೆಲ್ಗಳು ಉಕ್ರೇನ್ನಲ್ಲಿ ಸ್ಫೋಟಿಸಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶವನ್ನು ಉದ್ದೇಶಿಸಿ ಮಾಡಿರುವ ಭಾಷಣದಲ್ಲಿ ಹೇಳಿದ್ದಾರೆ. ದಕ್ಷಿಣ ಉಕ್ರೇನ್ನ ಖೆರ್ಸೋನ್ನಿಂದ ಹಿಂದೆ ಸರಿದಿರುವ ರಷ್ಯಾದ ಪಡೆಗಳನ್ನು ಇದೀಗ ಪೂರ್ವ ಭಾಗದ ಡೊನೆಟ್ಸ್ಕ್ ಮತ್ತು ಲುಶಂಕ್ ಪ್ರದೇಶಗಳಿಗೆ ನಿಯೋಜಿಸಲಾಗಿದೆ. ಕೈಗಾರಿಕೆಗಳು ಹೆಚ್ಚಾಗಿರುವ ಡೊನ್ಬಾಸ್ ಪ್ರದೇಶದಲ್ಲಿ ರಷ್ಯಾ ಪಡೆಗಳು ಗಮನಾರ್ಹ ಸಂಖ್ಯೆಯಲ್ಲಿವೆ.
ಉಕ್ರೇನ್ನ ಪ್ರಮುಖ ನಗರಗಳಿಂದ ಹಿಂದೆ ಸರಿದಿರುವ ರಷ್ಯಾ ಸೇನೆಯು ತನ್ನ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಎಲ್ಲಿ ಅಡಗಿಸಿಟ್ಟಿದೆ ಎಂದು ಹುಡುಕಿ, ದಾಳಿ ನಡೆಸಲು ಉಕ್ರೇನ್ ಮುಂದಾಗಿದೆ. ಮೆಲ್ನೋಟಕ್ಕೆ ಒಟ್ಟಾರೆ ಪರಿಸ್ಥಿತಿ ಉಕ್ರೇನ್ ಪರವಾಗಿ ತಿರುಗಿದಂತೆ ಇದೆ. ಆದರೆ ಚಳಿ ತೀವ್ರಗೊಂಡ ನಂತರ ಪರಿಸ್ಥಿತಿ ರಷ್ಯಾ ಪರವಾಗಿ ತಿರುಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಪೊಲೆಂಡ್ ಮೇಲೆ ಕ್ಷಿಪಣಿ ದಾಳಿ; ಆಕಸ್ಮಿಕ ಎಂದ ನ್ಯಾಟೊ, ರಷ್ಯಾ ಕಾರಣ ಎಂದ ಉಕ್ರೇನ್, ನಿಟ್ಟುಸಿರು ಬಿಟ್ಟ ಜಗತ್ತು