ಆರ್ಕ್ಟಿಕ್ ವಲಯದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದ ಪರಿಣಾಮ ಗ್ರೀನ್ಲ್ಯಾಂಡ್ನಲ್ಲಿ (Green Land) ಹಿಮ ಕರಗುವಿಕೆ (Ice Melting) ಆರಂಭವಾಗಿದ್ದು, ಕಳೆದ ಮಂಗಳವಾರ ಒಂದೇ ದಿನ ಉಂಟಾಗಿರುವ ಹಿಮ ಕರಗುವಿಕೆಯು ಇಡೀ ಫ್ಲೋರಿಡಾ (Florida) ರಾಜ್ಯವನ್ನು ಎರಡು ಇಂಚು ನೀರಿನಲ್ಲಿ ಮುಳುಗಿಸುವಷ್ಟು ಪ್ರಮಾಣದಲ್ಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದೊಂದು ದಶಕದಲ್ಲಿ ಹೀಗೆ ಏಕಾಏಕಿ ಭಾರೀ ಪ್ರಮಾಣದಲ್ಲಿ ಹಿಮ ಕರಗುತ್ತಿರುವುದು ಮೂರನೇ ಬಾರಿಯಾಗಿದ್ದು, ಮಂಗಳವಾರ ಸಂಭವಿಸಿದ ಹಿಮ ಕರಗುವಿಕೆಯಿಂದಾಗಿ ಗ್ರೀನ್ಲ್ಯಾಂಡ್ ತನ್ನ 8.5 ಬಿಲಿಯನ್ ಟನ್ ಮೇಲ್ಭಾಗವನ್ನು ಕಳೆದುಕೊಂಡಿದೆ ಹಾಗೂ ಕಳೆದ ಭಾನುವಾರದಿಂದ ಈ ತನಕ 18.4 ಬಿಲಿಯನ್ ಟನ್ ಮೇಲ್ಮೈ ಪ್ರದೇಶವನ್ನು ಕಳೆದುಕೊಂಡಿದೆ ಎಂದು ಡೆನ್ಮಾರ್ಕ್ ಹವಾಮಾನ ಇಲಾಖೆ ವರದಿಗಳು ತಿಳಿಸಿವೆ.
ಆದರೂ, ಸದರಿ ಹಿಮ ಕರಗುವಿಕೆಯ ಪ್ರಮಾಣ 2019ರಲ್ಲಿ ಉಂಟಾದ ಕರಗುವಿಕೆಯ ಗಾತ್ರಕ್ಕಿಂತ ಕೊಂಚ ಕಡಿಮೆ ಮಟ್ಟದ್ದೇ ಆಗಿದ್ದು, ಅದರ ವಿಸ್ತೀರ್ಣ ಮಾತ್ರ ಹೆಚ್ಚಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಜುಲೈ 27ರಂದು ಕಂಡುಬಂದಿರುವ ಹಿಮಕರಗುವಿಕೆ ಅನಿರೀಕ್ಷಿತವಾಗಿದ್ದಾಗಿದೆ. ಗ್ರೀನ್ಲ್ಯಾಂಡ್ನ ಬಹುಭಾಗ ಕರಗಿದ್ದು, ಇದು ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿರುವ ತೊಂದರೆಗೆ ಕೈಗನ್ನಡಿ ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ.
ಈ ಹಿಮ ಕರಗುವಿಕೆಗೆ ಮನುಷ್ಯನೇ ನೇರ ಕಾರಣವಾಗಿದ್ದು, ಹವಾಮಾನದಲ್ಲಿ ಬಿಸಿ ಏರುತ್ತಿರುವುದರಿಂದ 1990ರ ಮಧ್ಯಭಾಗದಿಂದ ಇಲ್ಲಿಯ ತನಕ ಸುಮಾರು 28 ಟ್ರಿಲಿಯನ್ ಟನ್ ಹಿಮವನ್ನು ಭೂಮಿ ಕಳೆದುಕೊಂಡಿದೆ. ಅಷ್ಟು ಹಿಮ ಕರಗಿ ಹೋಗುವುದಕ್ಕೆ ಮನುಷ್ಯನ ಕೊಡುಗೆ ದೊಡ್ಡದಿದೆ. ಇದರಲ್ಲಿ ಆರ್ಕ್ಟಿಕ್ ಭಾಗದಲ್ಲಿ ಉಂಟಾಗಿರುವ ಕರಗುವಿಕೆಯೇ ಅತಿ ಹೆಚ್ಚಿದ್ದು, ಗ್ರೀನ್ಲ್ಯಾಂಡ್ನ ಹಿಮ ಪದರವೂ ಸೇರಿ ದೊಡ್ಡ ಪ್ರದೇಶದಲ್ಲಿನ ಹಿಮ ನೀರಾಗಿದೆ ಎಂದು ವರದಿಗಳು ತಿಳಿಸಿವೆ.
A massive ice melting event is taking place in #Greenland, according to @PolarPortal
It would be enough to cover Florida in 2 inches (5 cm) of water
Not as extreme as 2019 in terms of gigatons but the melt area is a bit larger than 2 years ago.#ClimateChange #ClimateAction pic.twitter.com/Ai7RaWWebK— World Meteorological Organization (@WMO) July 29, 2021
ಕಳೆದೊಂದು ದಶಕದಲ್ಲಿ ಇದು ಮತ್ತಷ್ಟು ಗಂಭೀರವಾಗುತ್ತಿದ್ದು, ಗ್ರೀನ್ಲ್ಯಾಂಡ್ ಬಳಿ ಹವಾಮಾನದ ಉಷ್ಣತೆ ಹೆಚ್ಚುತ್ತಿರುವುದರಿಂದ ಹಿಮ ಕರಗುವಿಕೆ ಸಾಧಾರಣ ಎಂಬಂತಾಗಿ ಹೋಗಿದೆ. ನಿನ್ನೆಯ ಹಿಮ ಕರಗುವಿಕೆ ಕೂಡಾ ಇದಕ್ಕೆ ಉದಾಹರಣೆ ಎಂದು ಲೀಡ್ಸ್ ವಿವಿಯಲ್ಲಿ ಹಿಮ ತಜ್ಞರೂ ಹಾಗೂ ವರದಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವವರೂ ಆದ ಥಾಮಸ್ ಸ್ಲಾಟರ್ ತಿಳಿಸಿದ್ದಾರೆ.
2019ರಲ್ಲಿ ಗ್ರೀನ್ಲ್ಯಾಂಡ್ನಲ್ಲಿ ಸುಮಾರು 532 ಬಿಲಿಯನ್ ಟನ್ ಹಿಮ ಕರಗಿ ಸಮುದ್ರದ ಪಾಲಾಗಿತ್ತು. ಜುಲೈ ತಿಂಗಳಲ್ಲಿ ಅನಿರೀಕ್ಷಿತವಾಗಿ ಬೀಸಿದ ಬಿಸಿ ಗಾಳಿ ಅದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಸಮುದ್ರದ ನೀರಿನ ಮಟ್ಟದಲ್ಲಿ ಶಾಶ್ವತವಾಗಿ 1.5 ಮೀಟರ್ ಏರಿಕೆಯಾಗಿದೆ ಎನ್ನುವುದು ಗಮನಾರ್ಹ ಸಂಗತಿ.
ಇದನ್ನೂ ಓದಿ:
ಸಮುದ್ರಕ್ಕೆ ಜಾರಿಬಿತ್ತು ವಿಶ್ವದ ಅತಿದೊಡ್ಡ ಹಿಮಗಡ್ಡೆ; ದೆಹಲಿಗಿಂತಲೂ ಮೂರು ಪಟ್ಟು ದೊಡ್ಡದಿದೆ ಅಳತೆ
ಹಿಮಾಚಲ ಭೀಕರ ಭೂಕುಸಿತದಿಂದ ಸಾಯುವ ಮೊದಲು ಜೈಪುರ ವೈದ್ಯರ ಟ್ವೀಟ್
(Greenland Facing huge ice melting due to climate change)
Published On - 12:59 pm, Fri, 30 July 21