ಸಮುದ್ರಕ್ಕೆ ಜಾರಿಬಿತ್ತು ವಿಶ್ವದ ಅತಿದೊಡ್ಡ ಹಿಮಗಡ್ಡೆ; ದೆಹಲಿಗಿಂತಲೂ ಮೂರು ಪಟ್ಟು ದೊಡ್ಡದಿದೆ ಅಳತೆ
ಎ-76 ಹಿಮಗಡ್ಡೆಯ ಮೇಲ್ಮೈ ವಿಸ್ತೀರ್ಣ ಸುಮಾರು 4,320 ಚದರ ಕಿಲೋ ಮೀಟರ್ (1,668 ಚದರ ಮೈಲಿ) ಆಗಿದ್ದು, ಉದ್ದ 175 ಕಿಲೋ ಮೀಟರ್ (106 ಮೈಲಿ) ಹಾಗೂ ಅಗಲ 25 ಕಿಲೋ ಮೀಟರ್ (15 ಮೈಲಿ) ಇದೆ ಎಂದು ಅಧ್ಯಯನದ ವರದಿಗಳು ತಿಳಿಸಿವೆ.
ಮನುಷ್ಯ ಈ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಹೋದಷ್ಟೂ ಪ್ರಕೃತಿ ಅದನ್ನು ಒಗಟಾಗಿಸುತ್ತಲೇ ಇರುತ್ತದೆ. ಹೀಗಾಗಿ ಪ್ರಕೃತಿಯ ಒಂದೊಂದು ವಿಸ್ಮಯಗಳನ್ನೂ ಮಾನವ ಕುಲ ಇಂದಿಗೂ ಬೆರಗುಗಣ್ಣಿನಿಂದ ನೋಡುತ್ತಿದೆ. ಆದರೆ, ಕೆಲ ಪ್ರಾಕೃತಿಕ ಬದಲಾವಣೆಗಳಿಗೆ ಮಾನವನ ಐಷಾರಾಮಿ ಬದುಕೇ ಕಾರಣವಾ? ಅಭಿವೃದ್ಧಿ ಹೆಸರಲ್ಲಿ ನಾವು ಮಾಡುತ್ತಿರುವ ಕೆಲಸಗಳಿಗೆ ಪ್ರಕೃತಿ ಅಚ್ಚರಿಯ ರೂಪದಲ್ಲಿ ಎಚ್ಚರಿಕೆಯನ್ನು ನೀಡುತ್ತಿದೆಯಾ? ಯೋಚಿಸಬೇಕಿದೆ. ಅಂದಹಾಗೆ, ಅಂಟಾರ್ಟಿಕ ಖಂಡದಲ್ಲಿ ಹಿಮಚ್ಛೇದವಾಗಿ ಭಾರೀಗಾತ್ರದ ಹಿಮಗಡ್ಡೆಯೊಂದು ಸಮುದ್ರಕ್ಕೆ ಬಂದು ಬಿದ್ದಿದೆ. ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಪ್ರಸ್ತುತ ಸಮುದ್ರದಲ್ಲಿ ತೇಲುತ್ತಿರುವ ಹಿಮಗಡ್ಡೆಗಳ ಪೈಕಿ ಇದೇ ಅತ್ಯಂತ ದೊಡ್ಡ ಗಾತ್ರದ್ದಾಗಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿ ನಡೆಸಿದ ಅಧ್ಯಯನದ ಪ್ರಕಾರ ಅಂಟಾರ್ಟಿಕ ಭಾಗದಿಂದ ತುಂಡಾದ ಹಿಮಗಡ್ಡೆ ಇದೀಗ ವೆಡೆಲ್ ಸಮುದ್ರದಲ್ಲಿ ತೇಲುತ್ತಿದ್ದು ಅದರ ಗಾತ್ರ ನ್ಯೂಯಾರ್ಕ್ ನಗರಕ್ಕಿಂತ ನಾಲ್ಕು ಪಟ್ಟು ದೊಡ್ಡದಿದೆ. ಅದನ್ನೇ ನಮ್ಮ ಭಾರತದ ರಾಜಧಾನಿ ದೆಹಲಿಯ ಗಾತ್ರಕ್ಕೆ ಹೋಲಿಸಿದರೆ ಸುಮಾರು ಮೂರು ಪಟ್ಟು ದೊಡ್ಡದಾಗಿದೆ. ಈ ಹಿಮಗಡ್ಡೆಗೆ ವಿಜ್ಞಾನಿಗಳು ಎ-76 ಎಂದು ನಾಮಕರಣ ಮಾಡಿದ್ದು, ಇತ್ತೀಚೆಗಷ್ಟೇ ಕೋಪರ್ನಿಕಸ್ ಸೆಂಟಿನೆಲ್ – 1 ಉಪಗ್ರಹದ ಮೂಲಕ ತೆಗೆಯಲಾದ ಚಿತ್ರದಿಂದ ಇದು ಬೆಳಕಿಗೆ ಬಂದಿದೆ.
ಎ-76 ಹಿಮಗಡ್ಡೆಯ ಮೇಲ್ಮೈ ವಿಸ್ತೀರ್ಣ ಸುಮಾರು 4,320 ಚದರ ಕಿಲೋ ಮೀಟರ್ (1,668 ಚದರ ಮೈಲಿ) ಆಗಿದ್ದು, ಉದ್ದ 175 ಕಿಲೋ ಮೀಟರ್ (106 ಮೈಲಿ) ಹಾಗೂ ಅಗಲ 25 ಕಿಲೋ ಮೀಟರ್ (15 ಮೈಲಿ) ಇದೆ ಎಂದು ಅಧ್ಯಯನದ ವರದಿಗಳು ತಿಳಿಸಿವೆ. ನ್ಯೂಯಾರ್ಕ್ ನಗರದ ಒಟ್ಟು ವಿಸ್ತೀರ್ಣ 1,213 ಚದರ ಕಿ.ಮೀ ಇದ್ದು, ಈ ಹಿಮಗಡ್ಡೆಯು ಅದಕ್ಕಿಂತ ನಾಲ್ಕು ಪಟ್ಟು ಹಿರಿದಾಗಿದೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಇತ್ತ ದೆಹಲಿಯ ವಿಸ್ತೀರ್ಣ ಸುಮಾರು 1,484 ಚದರ ಕಿ.ಮೀ ಇದ್ದು ಹಿಮಗಡ್ಡೆಯು ದೆಹಲಿಗಿಂತ 2.91 ಪಟ್ಟು ದೊಡ್ಡದಿದೆ.
ಅಂಟಾರ್ಟಿಕದಲ್ಲಿ ಹಿಮ ಪದರಗಳು ಜಗತ್ತಿನ ಬೇರೆ ಹಿಮಚ್ಛಾದಿತ ಪ್ರದೇಶಗಳಿಗಿಂತ ಬಲುಬೇಗನೆ ಕರಗುತ್ತಿರುವುದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಈ ಹಿಮಗಡ್ಡೆ ಮತ್ತೆ ಕರಗಿ ಅಥವಾ ಭೂಭಾಗಕ್ಕೆ ಡಿಕ್ಕಿ ಹೊಡೆದು ಪುಡಿಯಾಗುವ ತನಕ ಹೀಗೇ ತೇಲುತ್ತಿರಲಿದ್ದು, ಅಲ್ಲಿಯ ತನಕ ಅಸ್ತಿತ್ವದಲ್ಲಿರುವ ಜಗತ್ತಿನ ಅತಿದೊಡ್ಡ ಹಿಮಗಡ್ಡೆ ಎಂಬ ಹೆಗ್ಗಳಿಕೆಯನ್ನು ಹೊತ್ತುಕೊಳ್ಳಲಿದೆ.
ಕಳೆದ ಬಾರಿ ಎ-68ಎ ಎಂಬ ಹಿಮಗಡ್ಡೆಯನ್ನು ವಿಶ್ವದ ದೊಡ್ಡ ಹಿಮಗಡ್ಡೆ ಎಂದು ಗುರುತಿಸಲಾಗಿದ್ದು, ಅದು ಆತಂಕಕ್ಕೂ ಕಾರಣವಾಗಿತ್ತು. ಏಕೆಂದರೆ ಸಮುದ್ರ ಸಿಂಹ ಜಾಗೂ ಪೆಂಗ್ವಿನ್ಗಳ ಸಂತಾನ್ಪೋತ್ತಿ ತಾಣವಾಗಿರುವ ದ್ವೀಪವೊಂದಕ್ಕೆ ಅದು ಡಿಕ್ಕಿ ಹೊಡೆಯುವ ಸಾಧ್ಯತೆಗಳು ಕಂಡುಬಂದಿದ್ದು, ಒಂದು ವೇಳೆ ಹಾಗಾಗಿದ್ದರೆ ಅವುಗಳ ಜೀವಕ್ಕೆ ಕಂಟಕ ತಂದೊಡ್ಡುತ್ತಿತ್ತು. ಆದರೆ ಅದೃಷ್ಟವಶಾತ್ ಎ-68ಎ ಹಿಮಗಡ್ಡೆ ಡಿಕ್ಕಿ ಹೊಡೆಯುವ ಬದಲು ತಾನಾಗಿಯೇ ತುಂಡಾಗಿ ಚೂರು ಚೂರಾದ ಕಾರಣ ಯಾವ ಅವಘಡವೂ ನಡೆದಿರಲಿಲ್ಲ.
ಇದನ್ನೂ ಓದಿ: Australia Beach: ಸಮುದ್ರಕ್ಕೆ ಈಜಲು ಹೋದವನಿಗೆ ಆಕ್ಟೋಪಸ್ ಜಲಚರಿ ಹೊಡೆದದ್ದು ಈಗ ವೈರಲ್
ಕಾಶ್ಮೀರದಲ್ಲಿ ತೀವ್ರ ಚಳಿ: ಕನಿಷ್ಠ ತಾಪಮಾನಕ್ಕೆ ಮಂಜುಗಡ್ಡೆಯಂತಾದ ದಾಲ್ ಸರೋವರ