
ನವದೆಹಲಿ, ಸೆಪ್ಟೆಂಬರ್ 14: ರಷ್ಯಾದಲ್ಲಿ ಈಗ ಹಿಂದಿ ಭಾಷೆ (Hindi language) ಕಲಿಯಲು ಬಯಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಮೂರು ದಶಕಗಳ ಹಿಂದೆ ಸೋವಿಯತ್ ಯೂನಿಯನ್ ಪತನದ ನಂತರ ಆ ದೇಶದ ಜನರು ಹಿಂದಿ ಭಾಷೆ ಮೇಲೆ ಹೆಚ್ಚು ಆಸಕ್ತಿ ತೋರತೊಡಗುತ್ತಿರುವುದು ಕುತೂಹಲ ಮೂಡಿಸುವ ಸಂಗತಿ. ಇದರ ಪರಿಣಾಮವೋ ಎಂಬಂತೆ ರಷ್ಯಾದಲ್ಲಿ ಹಿಂದಿ ಭಾಷೆಯನ್ನು ಕಲಿಸುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚೆಚ್ಚು ವಿಶ್ವವಿದ್ಯಾಲಯಗಳು ಹಿಂದಿ ಭಾಷೆಯ ಕಲಿಕೆಯ ಅವಕಾಶ ನೀಡುತ್ತಿವೆ.
ರಷ್ಯಾದ ವಿಜ್ಞಾನ ಹಾಗು ಉನ್ನತ ಶಿಕ್ಷಣದ ಉಪಮಂತ್ರಿಯಾದ ಕಾನ್ಸ್ಟಾಂಟಿನ್ ಮೋಗಿಲೆವಸ್ಕಿ ಅವರು ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡುತ್ತಾ, ‘ನಮ್ಮ ವಿದ್ಯಾರ್ಥಿಗಳು ಹಿಂದಿ ಕಲಿಯಲಿ ಎಂಬುದು ನಮ್ಮ ಭಾವನೆ’ ಎಂದಿದ್ದಾರೆ.
ಇದನ್ನೂ ಓದಿ: ನಮ್ಮಿಂದ ಅವರು ಒಂದು ಜೋಳವನ್ನೂ ಕೊಳ್ಳೋದಿಲ್ಲ: ಭಾರತದ ವ್ಯಾಪಾರ ನೀತಿಯನ್ನು ಟೀಕಿಸಿದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ
‘ಭಾರತ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಇರುವ ದೇಶ. ಹೆಚ್ಚೆಚ್ಚು ಭಾರತೀಯರು ತಮ್ಮ ನಿತ್ಯದ ಜೀವನದ ವ್ಯವಹಾರದಲ್ಲಿ ಇಂಗ್ಲೀಷ್ ಬದಲು ಹಿಂದಿಯನ್ನು ಬಳಸುತ್ತಿದ್ದಾರೆ. ನಾವೂ ಕೂಡ ಹಿಂದಿ ಹಾಗೂ ಇತರ ಪೌರ್ವಾತ್ಯ ಭಾಷೆಗಳನ್ನು ಕಲಿಯುವ ಅಗತ್ಯ ಇದೆ’ ಎಂದು ರಷ್ಯನ್ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ರಷ್ಯನ್ನರು ಹಿಂದಿ ಭಾಷೆ ಕಲಿಯುವುದರಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಸಹಜವಾಗಿ ಬರುತ್ತದೆ. ರಷ್ಯಾದ ಮಾನವಶಾಸ್ತ್ರ ಯೂನಿವರ್ಸಿಟಿಯ (ಆರ್ಎಸ್ಯುಎಚ್) ಇಂದಿರಾ ಗಾಝಿಯೆವಾ ಅವರು ಇದಕ್ಕೆ ಕುತೂಹಲ ಎನಿಸುವ ಕಾರಣ ಕೊಟ್ಟಿದ್ದಾರೆ. ಅವರ ಪ್ರಕಾರ, ರಷ್ಯಾದ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಭಾರತದ ಬಗ್ಗೆ ಸಿಗುತ್ತಿರುವ ಚಿತ್ರಣವು ಪಾಶ್ಚಿಮಾತ್ಯ ದೃಷ್ಟಿಕೋನದ್ದಾಗಿದೆ. ಭಾರತೀಯ ಭಾಷೆ ಕಲಿತರೆ ಭಾರತದ ಬಗ್ಗೆ ನೈಜ ಚಿತ್ರಣ ಸಿಗುತ್ತದೆ ಎಂಬುದು ರಷ್ಯನ್ನರ ಭಾವನೆ.
ಇದನ್ನೂ ಓದಿ: ರಷ್ಯಾದ ಬೃಹತ್ ತೈಲ ಘಟಕದ ಮೇಲೆ 361 ಡ್ರೋನ್ಗಳಿಂದ ಉಕ್ರೇನ್ ದಾಳಿ
ಸೋವಿಯತ್ ಒಕ್ಕೂಟ ಅಸ್ತಿತ್ವದಲ್ಲಿದ್ದಾಗ ಹೆಚ್ಚಿನ ವಿವಿಗಳಲ್ಲಿ ಹಿಂದಿ ಭಾಷೆ ಕಲಿಕೆಗೆ ಅವಕಾಶ ಇತ್ತು. ಸಾಕಷ್ಟು ವಿದ್ಯಾರ್ಥಿಗಳು ಹಿಂದಿ ಕಲಿಯುತ್ತಿದ್ದರು. ರಷ್ಯಾದಲ್ಲಿ ಬಾಲಿವುಡ್ ಸಿನಿಮಾಗಳೂ ಜನಪ್ರಿಯವೆನಿಸಿದ್ದವು. ಸೋವಿಯತ್ ಒಕ್ಕೂಟ ಪತನದ ಬಳಿಕ ಹಿಂದಿ ಭಾಷೆ ಕಲಿಕೆಗೆ ಹಿನ್ನಡೆಯಾಯಿತು. ಈಗ ಹಲವು ಶಿಕ್ಷಣ ಸಂಸ್ಥೆಗಳು ಮತ್ತೆ ಹಿಂದಿ ಹಾಗೂ ಇತರ ಹಲವು ಭಾಷೆಗಳ ಕಲಿಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತಿವೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ