ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದು ಉದ್ಯಮಿಯೊಬ್ಬನನ್ನು ಹತ್ಯೆಗೈಯ್ಯಲಾಗಿದೆ. ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ದಹರ್ಕಿ ಟೌನ್ ಎಂಬಲ್ಲಿ ಸೋಮವಾರ ರಾತ್ರಿ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಉದ್ಯಮಿಯನ್ನು ಸತನ್ ಲಾಲ್ ಎಂದು ಗುರುತಿಸಲಾಗಿದೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದು-ಸಿಖ್ಖರ ಮೇಲೆ ಪದೇಪದೆ ದಾಳಿ ನಡೆಯುತ್ತಲೇ ಇರುತ್ತವೆ. ಜನವರಿ 4ರಂದು ಸುನೀಲ್ ಕುಮಾರ್ ಎಂದ ಹಿಂದು ಉದ್ಯಮಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ. ಈ ದುರ್ಘಟನೆ ಕೂಡ ಸಿಂಧ್ ಪ್ರಾಂತ್ಯದ ಅನಜ್ ಮಂಡಿಯಲ್ಲಿ ನಡೆದಿತ್ತು. ಈ ಉದ್ಯಮಿಯ ಹತ್ಯೆಯ ನಂತರ ಇಡೀ ನಗರ ಸ್ಥಗಿತಗೊಂಡಿತ್ತು. ಜನವರಿ 30ರಂದು ಪೇಶಾವರ ನಗರದಲ್ಲಿ ಕ್ರಿಶ್ಚಿಯನ್ ಪಾದ್ರಿಯೊಬ್ಬರನ್ನು ಅಪರಿಚಿತನೊಬ್ಬ ಹತ್ಯೆ ಮಾಡಿದ್ದ. ಈ ದಾಳಿಯಲ್ಲಿ ಇನ್ನೊಬ್ಬಾತ ಗಾಯಗೊಂಡಿದ್ದ.
ಸತನ್ ಲಾಲ್ನನ್ನು ಜಮೀನು ವಿಚಾರಕ್ಕೆ ಹತ್ಯೆ ಮಾಡಲಾಗಿದೆ. ಇತ್ತೀಚೆಗೆ ಆತನ ಜಮೀನಿನಲ್ಲಿ ಹತ್ತಿ ಕಾರ್ಖಾನೆ ಮತ್ತು ಹಿಟ್ಟಿನ ಗಿರಣಿಯನ್ನು ಉದ್ಘಾಟಿಸಲಾಗಿತ್ತು. ಅದೇ ಜಾಗದಲ್ಲೇ ದುಷ್ಕರ್ಮಿಗಳನ್ನು ಅವನನ್ನು ಹತ್ಯೆಗೈದಿದ್ದಾರೆ ಎಂದು ಸತನ್ ಲಾಲ್ ಸ್ನೇಹಿತ ಮುಖಿ ಅನಿಲ್ ಕುಮಾರ್ ಹೇಳಿದ್ದಾಗಿ ಪಾಕ್ ಮಾಧ್ಯಮ ವರದಿ ಮಾಡಿದೆ. ಈ ಮಧ್ಯೆ ಸತನ್ ಲಾಲ್ ಮಾತನಾಡಿದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ, ಒಂದಷ್ಟು ಜನ ನನಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರು ನನ್ನ ಕಣ್ಣುಗಳನ್ನು ಜಜ್ಜಿ ಬಿಡುವುದಾಗಿ ಹೇಳುತ್ತಿದ್ದಾರೆ. ಕಾಲು-ಕೈ ಕತ್ತರಿಸುವುದಾಗಿ ಹೆದರಿಸುತ್ತಿದ್ದಾರೆ. ಪಾಕಿಸ್ತಾನವನ್ನು ಬಿಟ್ಟುಬಿಡುವಂತೆ ಹೇಳುತ್ತಿದ್ದಾರೆ. ಆದರೆ ನಾನು ಪಾಕಿಸ್ತಾನದವನು. ಸತ್ತರೆ ಇಲ್ಲೇ ಸಾಯುತ್ತೇನೆ ಹೊರತು ಅವರಿಗೆ ಶರಣಾಗುವುದಿಲ್ಲ ಎಂದು ಸತನ್ ಲಾಲ್ ಹೇಳಿದ್ದು ಕೇಳುತ್ತದೆ ಎಂದು ಹೇಳಲಾಗಿದೆ.
ಹಿಂದು ಉದ್ಯಮಿಯ ಹತ್ಯೆ ನಡೆಯುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿದೆ. ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ. ಸ್ಥಳೀಯ ದಹರ್ಕಿ ಪೊಲೀಸ್ ಠಾಣೆ ಎದುರು ಧರಣಿ ಕೂಡ ನಡೆಸಿದ್ದಾರೆ. ಸದ್ಯ ಪ್ರಮುಖ ಆರೋಪಿ ಮತ್ತು ಆತನ ಸಹಚರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ಸುಕ್ಕುರ್ ಡಿಐಜಿ ತಿಳಿಸಿದ್ದಾರೆ.
Published On - 9:42 am, Wed, 2 February 22