Jobs: ಉದ್ಯೋಗ ಸೃಷ್ಟಿಗೆ ರಾಜ್ಯ ಸರ್ಕಾರದಿಂದ ವಿಶೇಷ ಕ್ರಮ: 88 ಯೋಜನೆಗಳಿಗೆ ಅನುಮೋದನೆ, 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಸಾಧ್ಯತೆ
Murugesh Nirani: ಈ ಪೈಕಿ ₹ 50 ಕೋಟಿಗೂ ಹೆಚ್ಚು ಹೂಡಿಕೆಯ 7 ಯೋಜನೆಗಳಿದ್ದರೆ, ₹ 50 ಕೋಟಿ ಒಳಗಿನ 78 ಯೋಜನೆಗಳಿವೆ.
ಬೆಂಗಳೂರು: ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದ ಹಿನ್ನೆಲೆಯಲ್ಲಿ 88 ಯೋಜನೆಗಳಿಗೆ ಕೈಗಾರಿಕಾ ಇಲಾಖೆಯ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯು (Single Window) ಅನುಮೋದನೆ ನೀಡಿದೆ. ಈ ಯೋಜನೆಗಳ ಒಟ್ಟು ಮೊತ್ತವು ₹ 2367.99 ಕೋಟಿ. ಈ ಯೋಜನೆಗಳಿಂದ ರಾಜ್ಯದಲ್ಲಿ 10,904 ಉದ್ಯೋಗ ಸೃಷ್ಟಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪೈಕಿ ₹ 50 ಕೋಟಿಗೂ ಹೆಚ್ಚು ಹೂಡಿಕೆಯ 7 ಯೋಜನೆಗಳಿದ್ದರೆ, ₹ 50 ಕೋಟಿ ಒಳಗಿನ 78 ಯೋಜನೆಗಳಿವೆ.
ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದ ಹಿನ್ನೆಲೆಯಲ್ಲಿ ಕೈಗಾರಕಾ ಇಲಾಖೆಯು ಈ ಕ್ರಮಕ್ಕೆ ಮುಂದಾಗಿದೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ನೇತೃತ್ವದಲ್ಲಿ ಮಂಗಳವಾರ (ಫೆ.1) ಸಂಜೆ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು.
ಅನುಮೋದನೆ ಸಿಕ್ಕ ಬೃಹತ್ ಕೈಗಾರಿಕೆಗಳಿವು. ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ಪಾಕ್೯: ₹ 357 ಕೋಟಿ, ಸ್ಪಾನ್ ಸುಲ್ಸ್ ಫಾರ್ಮುಲೇಷನ್: ₹ 96 ಕೋಟಿ, ರಿನಾಕ್ ಇಂಡಿಯಾ: ₹ 80 ಕೋಟಿ, ಸನ್ವಿಕ್ ಸ್ಟೀಲ್ ಲಿ: ₹ 64 ಕೋಟಿ, ಎಚ್ ಅಂಡ್ ವಿ ಅಡ್ವಾನ್ಸ್ಡ್ ಮೆಟೀರಿಯಲ್ ಇಂಡಿಯಾ: ₹ 59.31 ಕೋಟಿ, ಎ ಒನ್ ಟೆಕ್ ಪ್ರೈ ಲಿ: ₹ 46.50 ಕೋಟಿ, ಟೆಕ್ಸ್ಪೋಟ್೯ ಇಂಡಸ್ಟ್ರೀಸ್ ಪ್ರೈ ಲಿ: ₹ 44.80 ಕೋಟಿ, ಕೇನಾಸ್ಸ್ ಟೆಕ್ನಾಲಜಿ ಇಂಡಿಯಾ ಪ್ರೈ ಲಿ: ₹ 35 ಕೋಟಿ.
ಭಾರತದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿ ಸರ್ಕಾರದ ಮುಂದಿನ ಗುರಿ; ನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಕೇಂದ್ರ ಬಜೆಟ್ 2022 (Union Budget 2022) ಮಂಡನೆ ವೇಳೆ ದೇಶಾದ್ಯಂತ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಸರ್ಕಾರದ ಮುಂದಿನ ಗುರಿಯಾಗಿದೆ ಎಂದು ಹೇಳಿದ್ದರು. ಪಿಎಂ ಗತಿ ಶಕ್ತಿಯು ಆರ್ಥಿಕತೆಯನ್ನು ಮುಂದಕ್ಕೆ ಕರೆದೊಯ್ಯುತ್ತದೆ ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ಪಿಎಂ ಗತಿ ಶಕ್ತಿ ಯೋಜನೆಯಡಿ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಮೇಕ್ ಇನ್ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತದಲ್ಲಿ ಯುವಕರು, ಮಹಿಳೆಯರು ಮತ್ತು ಬಡವರ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಿದೆ. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಆತ್ಮನಿರ್ಭರ ಭಾರತವನ್ನು ಯಶಸ್ವಿಯಾಗಿಸಲಿದೆ. ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗಗಳು ಮತ್ತು 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ರಚಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ; ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ಇದನ್ನೂ ಓದಿ: ಕರ್ನಾಟಕದಲ್ಲಿ ಕಾರು ಉತ್ಪಾದನಾ ಘಟಕ ತೆರೆಯಲು ಎಲಾನ್ ಮಸ್ಕ್ಗೆ ಮುರುಗೇಶ್ ನಿರಾಣಿ ಆಹ್ವಾನ
Published On - 6:15 pm, Wed, 2 February 22