ಕೆನಡಾದಲ್ಲಿ ಹಿಂದೂ ದೇವಾಲಯ( Hindu Temple)ದ ಮೇಲೆ ದುಷ್ಕರ್ಮಿಗಳು ಮತ್ತೆ ದಾಳಿ ನಡೆಸಿದ್ದಾರೆ. ಒಂಟಾರಿಯೊ ನಗರದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ ನಡೆದಿದೆ. ದ್ವೇಷಪೂರಿತ ಘೋಷಣೆಗಳನ್ನು ದೇವಸ್ಥಾನದ ಗೋಡೆಗಳ ಮೇಲೆ ಬರೆಯಲಾಗಿದೆ. ಸ್ವಾಮಿನಾರಾಯಣ ಮಂದಿರದ ಹೊರಗಿನ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಹಿಂದೂ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಹಿಂದೂ ದೇವಾಲಯದ ಧ್ವಂಸವನ್ನು ದ್ವೇಷದ ಘಟನೆ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ವಿಂಡ್ಸರ್ ಪೊಲೀಸರು ತಿಳಿಸಿದ್ದಾರೆ.
ಆರಂಭಿಕ ತನಿಖೆಯಲ್ಲಿ, ಅಧಿಕಾರಿಗಳು ಮಧ್ಯರಾತ್ರಿ 12 ಗಂಟೆಯ ನಂತರ ಪ್ರದೇಶದಲ್ಲಿ ಇಬ್ಬರು ಶಂಕಿತರು ಕಾಣಿಸಿಕೊಂಡ ವೀಡಿಯೊವನ್ನು ಪಡೆದುಕೊಂಡಿದ್ದಾರೆ. ವೀಡಿಯೊದಲ್ಲಿ, ಒಬ್ಬ ಶಂಕಿತನು ಕಟ್ಟಡದ ಗೋಡೆಯನ್ನು ಧ್ವಂಸ ಮಾಡಿದ್ದು, ವ್ಯಕ್ತಿಯೊಬ್ಬ ಅವನ ಪಕ್ಕ ನಿಂತಿರುವುದನ್ನು ಕಾಣಬಹುದು.
ಘಟನೆಯ ಸಮಯದಲ್ಲಿ ಶಂಕಿತ ವ್ಯಕ್ತಿಯು ಕಪ್ಪು ಸ್ವೆಟರ್, ಎಡಗಾಲಿನಲ್ಲಿ ಸಣ್ಣ ಬಿಳಿ ಲೋಗೋ ಹೊಂದಿರುವ ಕಪ್ಪು ಪ್ಯಾಂಟ್ ಮತ್ತು ಕಪ್ಪು ಮತ್ತು ಬಿಳಿ ಹೈ-ಟಾಪ್ ರನ್ನಿಂಗ್ ಶೂಗಳನ್ನು ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎರಡನೇ ಶಂಕಿತ ಆರೋಪಿ ಕಪ್ಪು ಪ್ಯಾಂಟ್, ಸ್ವೆಟ್ ಶರ್ಟ್, ಕಪ್ಪು ಶೂ ಮತ್ತು ಬಿಳಿ ಸಾಕ್ಸ್ ಧರಿಸಿದ್ದ.
ಮತ್ತಷ್ಟು ಓದಿ: ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಧ್ವಂಸ: ಪದೇಪದೆ ಇದೇ ದೇಗುಲ ಟಾರ್ಗೆಟ್ ಮಾಡುತ್ತಿರುವ ಪುಂಡರು
ಕೆನಡಾದ ಹಿಂದೂ ದೇವಾಲಯಗಳಲ್ಲಿ ಇಂತಹ ಘಟನೆಗಳು ಈ ಹಿಂದೆ ಹಲವು ಬಾರಿ ನಡೆದಿವೆ, ಆದರೆ ಇದುವರೆಗೆ ಅಲ್ಲಿನ ಸರ್ಕಾರ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ವಿಂಡ್ಸರ್‌ನಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಿರುವ ಐದನೇ ಘಟನೆ ಇದಾಗಿದೆ.
ಈ ಹಿಂದೆ ಫೆಬ್ರವರಿ 14 ರಂದು ಮಿಸ್ಸಿಸೌಗಾದ ರಾಮ ಮಂದಿರದಲ್ಲಿ ವಿಧ್ವಂಸಕ ಕೃತ್ಯಗಳ ಜೊತೆಗೆ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿತ್ತು. ಅದೇ ಸಮಯದಲ್ಲಿ, ಕೆನಡಾದ ಬ್ರಾಂಪ್ಟನ್‌ನ ಗೌರಿ ಶಂಕರ ದೇವಾಲಯ ಮತ್ತು ರಿಚ್‌ಮಂಡ್‌ನ ವಿಷ್ಣು ದೇವಾಲಯದಲ್ಲೂ ಅನೇಕ ವಿಗ್ರಹಗಳನ್ನು ಧ್ವಂಸ ಮಾಡಲಾಗಿತ್ತು. ಖಲಿಸ್ತಾನಿ ಬೆಂಬಲಿಗರು ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಹಲವು ಬಾರಿ ದಾಳಿ ನಡೆಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ