ಕೊರೊನಾ ಇಡೀ ಜಗತ್ತಿನ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದೆ. ಜನರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ದುಸ್ತರಗೊಳಿಸಿದೆ. ಆರ್ಥಿಕ ಹೊಡೆತಕ್ಕೆ ತತ್ತರಿಸಿ ಹಲವು ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿವೆ. ಬಹುತೇಕ ಎಲ್ಲಾ ರಾಷ್ಟ್ರಗಳೂ ಒಂದೊಂದು ತೆರನಾದ ಸಮಸ್ಯೆಗೆ ಸಿಲುಕಿವೆ.
ಇತ್ತೀಚೆಗೆ ಜಪಾನ್ನಲ್ಲಿ ನಡೆದ ಅಧ್ಯಯನವೊಂದು ಕೊರೊನಾದಿಂದ ಜಪಾನ್ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ತೆರೆದಿಟ್ಟಿದೆ. 2020ರಲ್ಲಿ ಕೊರೊನಾದಿಂದ ಸಾವಿಗೀಡಾಗಿದ್ದಕ್ಕಿಂತ ಹೆಚ್ಚು ಜಪಾನೀಯರು ಅಕ್ಟೋಬರ್ ತಿಂಗಳೊಂದರಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಕಳವಳಕಾರಿ ಮಾಹಿತಿ ಹೊರಬಿದ್ದಿದೆ.
ಆತ್ಮಹತ್ಯೆಗೂ ಕೊರೊನಾದಿಂದಾದ ಆರ್ಥಿಕ ಸಂಕಷ್ಟಕ್ಕೂ ನೇರ ಸಂಬಂಧವಿದೆ
ಜಪಾನಿನಲ್ಲಿ ಕೊರೊನಾ ಸೋಂಕಿಗೆ ಆರಂಭದಿಂದ ಇಲ್ಲಿಯ ತನಕ 2,087ಜನ ಮೃತರಾಗಿದ್ದಾರೆ. ಆದರೆ, ಈ ಸಂಖ್ಯೆಯನ್ನೂ ಮೀರಿ ಕೇವಲ ಅಕ್ಟೋಬರ್ ತಿಂಗಳೊಂದರಲ್ಲೇ 2,153 ಜನ ಆತ್ಮಹತ್ಯೆಗೆ ಶರಣಾಗಿ ಸಾವನ್ನಪ್ಪಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ಹೀಗೆ ಆತ್ಮಹತ್ಯೆಯಲ್ಲಿ ಧಿಡೀರ್ ಏರಿಕೆಯಾಗಿರುವುದಕ್ಕೂ ಕೊರೊನಾ ಉಂಟುಮಾಡಿರುವ ಆರ್ಥಿಕ ಸಂಕಷ್ಟಕ್ಕೂ ನೇರ ಸಂಬಂಧವಿದೆ ಎನ್ನಲಾಗುತ್ತಿದೆ.
ಕೊವಿಡ್ನಿಂದಾಗಿ ಇತರೆ ದೇಶಗಳಲ್ಲೂ ಆರ್ಥಿಕ ಸಂಕಷ್ಟವಿದೆ; ಹಾಗಾಗಿ ಇತರೆ ದೇಶಗಳಿಗೂ ಇದು ಎಚ್ಚರಿಕೆಯ ಗಂಟೆ
ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪಾನಿನ ತಜ್ಞೆ ಮಿಚಿಕೋ ಅವರು ಹೇಳುವಂತೆ ಇತರೆ ದೇಶಗಳಿಗೆ ಹೋಲಿಸಿದರೆ ಜಪಾನ್ ಲಾಕ್ಡೌನ್ನಿಂದಾದ ಪರಿಣಾಮ ಅತ್ಯಂತ ಕಡಿಮೆ ಇದೆ. ಆದರೂ, ಅಲ್ಲಿಯ ಜನ ಅಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಆತಂಕಕಾರಿ ಬೆಳವಣಿಗೆ ಇತರೆ ದೇಶಗಳಿಗೆ ಎಚ್ಚರಿಕೆಯ ಗಂಟೆಯಾಗಿದ್ದು. ಈ ವಿಚಾರದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.
ಸರಿಸುಮಾರು ಒಂದು ದಶಕದ ಹಿಂದೆ ಭೀಕರ ಸುನಾಮಿ ಜಪಾನ್ ದೇಶವನ್ನು ಅಪ್ಪಳಿಸಿದಾಗ ಇಡೀ ಜಗತ್ತೇ ಮರುಗಿತ್ತು. 15 ಸಾವಿರಕ್ಕೂ ಅಧಿಕ ಮಂದಿಯನ್ನು ಕಳೆದುಕೊಂಡು ಅನೇಕ ರೀತಿಯ ನಷ್ಟಗಳನ್ನು ಎದುರಿಸಿ ಜಪಾನ್ ಅತ್ಯಂತ ಕಠಿಣ ಪರಿಸ್ಥಿತಿಗೆ ತಲುಪಿದಾಗ ಮುಂದುವರಿದ ದೇಶವೊಂದು ಮುಗ್ಗರಿಸಿ ಬಿತ್ತು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು.
ಮಾನಸಿಕವಾಗಿ ಸದೃಢವಾಗಿರುವ ಜಪಾನೀಯರಲ್ಲಿ ಆತ್ಮಹತ್ಯೆ ಪ್ರವೃತ್ತಿ ವಿಪರ್ಯಾಸವೇ ಸರಿ
ಅದೇನೇ ಆದರೂ ಜಪಾನ್ ಮಾತ್ರ ಇಡೀ ಜಗತ್ತೇ ನಿಬ್ಬೆರಗಾಗುವಂತೆ ಪುಟಿದೆದ್ದಿತ್ತು. ಆ ಮೂಲಕ ಎಂತಹ ಕಷ್ಟವನ್ನೂ ಎದುರಿಸುವ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟಿತ್ತು. ಆದರೆ, ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ನಷ್ಟ ಅನುಭವಿಸುತ್ತಿರುವ ಜಪಾನಿನ ಜನ ಮಾನಸಿಕ ತೊಳಲಾಟಕ್ಕೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿದಿರುವುದು ವಿಪರ್ಯಾಸ.