ಒತ್ತಡಗಳ ನಡುವೆಯೂ ವಿದೇಶಾಂಗ ನೀತಿಯಲ್ಲಿ ಸ್ವಾತಂತ್ರ್ಯ ಕಾಯ್ದುಕೊಂಡ ಭಾರತದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಶ್ಲಾಘನೆ ವ್ಯಕ್ತಪಡಿಸಿದರು. ಇದರೊಂದಿಗೆ ‘ಮೇಕ್ ಇನ್ ಇಂಡಿಯಾ’ (Make In India) ದೃಷ್ಟಿಕೋನವನ್ನು ಶ್ಲಾಘಿಸಿ ಮೋದಿ ಓರ್ವ ದೇಶಭಕ್ತ ಎಂದು ಕರೆದರು. ಮಾಸ್ಕೋದಲ್ಲಿ ನಡೆದ ವಾರ್ಷಿಕ ವಾಲ್ಡೈ ಚರ್ಚೆಯಲ್ಲಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಯಾವುದೇ ಒತ್ತಡಗಳ ನಡುವೆ ತಮ್ಮ ದೇಶ ಮತ್ತು ಜನರ ಹಿತಾಸಕ್ತಿಯಲ್ಲಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಲು ಸಮರ್ಥರಾಗಿರುವ ವಿಶ್ವದ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದರು.
ಭಾರತದಂತಹ ದೇಶಗಳಿಗೆ ಮುಂದೆ ಉತ್ತಮ ಭವಿಷ್ಯವಿದೆ. ಮಾತ್ರವಲ್ಲದೆ ವಿಶ್ವ ರಾಜಕೀಯದಲ್ಲೂ ಪಾತ್ರವನ್ನು ಹೊಂದಲಿವೆ ಎಂದು ನಾನು ಭಾವಿಸುತ್ತೇನೆ. ನಾವು ಎಂದಿಗೂ ಭಾರತದೊಂದಿಗೆ ಯಾವುದೇ ಸಮಸ್ಯೆಯನ್ನು ಹೊಂದಿರಲಿಲ್ಲ. ನಾವು ಯಾವಾಗಲೂ ಒಬ್ಬರಿಗೊಬ್ಬರು ಬೆಂಬಲಿಸುತ್ತೇವೆ. ಈ ಬೆಂಬಲ ಈಗ ಮಾತ್ರವಲ್ಲ ಭವಿಷ್ಯದಲ್ಲೂ ಮುಂದುವರಿಯಲಿದೆ ಎಂದರು.
“ಭಾರತೀಯ ಕೃಷಿಗೆ ಬಹಳ ಮುಖ್ಯವಾದ ರಸಗೊಬ್ಬರಗಳ ಪೂರೈಕೆಯನ್ನು ಹೆಚ್ಚಿಸುವಂತೆ ಪ್ರಧಾನಿ ಮೋದಿ ನನ್ನ ಬಳಿ ಚರ್ಚಿಸಿದ್ದಾರೆ. ಅದರಂತೆ ಪೂರೈಕೆಯ ಪ್ರಮಾಣವನ್ನು 7.6 ಪಟ್ಟು ಹೆಚ್ಚಿಸಿದ್ದೇವೆ ಎಂದರು. ಅಲ್ಲದೆ ಭಾರತವು ಬ್ರಿಟಿಷರ ವಸಾಹತುಶಾಹಿಯಿಂದ ಆಧುನಿಕ ರಾಜ್ಯಕ್ಕೆ ಅಭಿವೃದ್ಧಿಯ ಮಹಾನ್ ಪಥದಲ್ಲಿ ಸಾಗಿದೆ ಎಂದು ಪುಟಿನ್ ಹೇಳಿದರು. “ಇದು ಪ್ರಪಂಚದ ಪ್ರತಿಯೊಬ್ಬರಿಂದ ಸಾಮಾನ್ಯ ಗೌರವವನ್ನು ಆಕರ್ಷಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಬಹಳಷ್ಟು ಸಾಧನೆ ಮಾಡಲಾಗಿದೆ. ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಮಹತ್ವದ್ದಾಗಿದೆ” ಎಂದರು.
ಸೆಪ್ಟೆಂಬರ್‌ನಲ್ಲಿ ಶಾಂಘೈ ಸಹಕಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಉಜ್ಬೇಕಿಸ್ತಾನ್‌ನಲ್ಲಿ ಪುಟಿನ್ ಅವರನ್ನು ಭೇಟಿಯಾಗಿದ್ದರು. ಅಲ್ಲಿ ಇಂದಿನ ಯುಗವು ಯುದ್ಧದ ಯುಗವಲ್ಲ ಎಂದು ಪುಟಿನ್‌ಗೆ ಪ್ರಧಾನಿ ಮೋದಿ ಹೇಳಿದರು. ಈ ಹೇಳಿಕೆಯನ್ನು ಒಪ್ಪಿಕೊಂಡ ಪುಟೀನ್, “ಉಕ್ರೇನ್‌ನಲ್ಲಿನ ಸಂಘರ್ಷದ ಬಗ್ಗೆ ನಿಮ್ಮ ನಿಲುವಿನ ಬಗ್ಗೆ ನನಗೆ ತಿಳಿದಿದೆ ಮತ್ತು ನಿಮ್ಮ ಕಾಳಜಿಗಳ ಬಗ್ಗೆ ನನಗೆ ತಿಳಿದಿದೆ. ಇದೆಲ್ಲವೂ ಆದಷ್ಟು ಬೇಗ ಕೊನೆಗೊಳ್ಳಬೇಕೆಂದು ನಾವು ಬಯಸುತ್ತೇವೆ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಾವು ನಿಮಗೆ ತಿಳಿಸುತ್ತೇವೆ” ಎಂದು ಸಭೆಯಲ್ಲಿ ಪುಟಿನ್ ಮೋದಿಗೆ ತಿಳಿಸಿದರು.
ಮತ್ತಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 am, Fri, 28 October 22