ಉಕ್ರೇನ್​​ನಿಂದ ತಮ್ಮ ಪ್ರಜೆಗಳನ್ನು ಸ್ಥಳಾಂತರ ಮಾಡಲು ಉಳಿದ ದೇಶಗಳು ಕೈಗೊಂಡ ಕ್ರಮಗಳೇನು? -ಭಾರತದ ಬಗ್ಗೆ ಹೆಮ್ಮೆ ಎನ್ನಿಸದೇ?

| Updated By: Lakshmi Hegde

Updated on: Feb 28, 2022 | 5:41 PM

ಯುಎಸ್​​ನ ಅಂದಾಜು 900 ಉದ್ಯೋಗಿಗಳು ಯುದ್ಧ ಪೀಡಿತ ಉಕ್ರೇನ್​​ನಲ್ಲಿ ಸಿಲಕಿದ್ದಾರೆ ಎಂದು ವಾಷಿಂಗ್ಟನ್ ಡಿಸಿ ತಿಳಿಸಿದೆ. ಆದರೆ ಯುಎಸ್​ನ ನಾಗರಿಕರನ್ನು ಉಕ್ರೇನ್​​ನಿಂದ  ಸ್ಥಳಾಂತರ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದೂ ಹೇಳಿದೆ.

ಉಕ್ರೇನ್​​ನಿಂದ ತಮ್ಮ ಪ್ರಜೆಗಳನ್ನು ಸ್ಥಳಾಂತರ ಮಾಡಲು ಉಳಿದ ದೇಶಗಳು ಕೈಗೊಂಡ ಕ್ರಮಗಳೇನು? -ಭಾರತದ ಬಗ್ಗೆ ಹೆಮ್ಮೆ ಎನ್ನಿಸದೇ?
ಉಕ್ರೇನ್​ ಚಿತ್ರಣ
Follow us on

ರಷ್ಯಾ ಮತ್ತು ಉಕ್ರೇನ್​​ ನಡುವೆ ಘೋರ ಯುದ್ಧ (Russia-Ukraine War) ನಡೆಯುತ್ತಿದೆ. ರಷ್ಯಾ ಸೇನೆ ಉಕ್ರೇನ್​​ ನೆಲಕ್ಕೆ ಆಗಮಿಸಿ ಕಂಡಕಂಡಲ್ಲಿ ದಾಳಿ ನಡೆಸುತ್ತಿದೆ. ಉಕ್ರೇನ್​ ಪ್ರಜೆಗಳು, ಉಕ್ರೇನ್​​ನಲ್ಲಿರುವ ಇತರ ದೇಶಗಳ ಪ್ರಜೆಗಳ ಸಂಕಷ್ಟ, ಸಂಕಟ ಹೇಳತೀರದ್ದು. ಈ ಮಧ್ಯೆ ಭಾರತ ಸರ್ಕಾರ, ಉಕ್ರೇನ್​​ನಲ್ಲಿರುವ ತನ್ನ ಪ್ರಜೆಗಳನ್ನು ವಾಪಸ್​ ಕರೆತರಲು ಆಪರೇಶನ್​ ಗಂಗಾ ಎಂಬ ಕಾರ್ಯಾಚರಣೆ ಶುರುಮಾಡಿಕೊಂಡಿದೆ. ಇದರಡಿಯಲ್ಲಿ ಸುಮಾರು 1200 ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ. ಹಾಗಿದ್ದಾಗ್ಯೂ ಇನ್ನೂ ಸುಮಾರು 16ಸಾವಿರ ವಿದ್ಯಾರ್ಥಿಗಳು ಉಕ್ರೇನ್​​ನಲ್ಲಿ ಸಿಲುಕಿದ್ದಾರೆ. ಬರೀ ಭಾರತದ ವಿದ್ಯಾರ್ಥಿಗಳಷ್ಟೇ ಅಲ್ಲ, ಇನ್ನೂ ಹಲವು ದೇಶಗಳ ಪ್ರಜೆಗಳು, ವಿದ್ಯಾರ್ಥಿಗಳು ಯುದ್ಧದ ನಾಡು ಉಕ್ರೇನ್​ನಲ್ಲಿ ಸಿಲುಕಿ ಕಷ್ಟಪಡುತ್ತಿದ್ದಾರೆ.

ಉಕ್ರೇನ್​​ನಲ್ಲಿ ಇರುವ ಭಾರತೀಯರ ಸ್ಥಳಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇಂದು ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಉಕ್ರೇನ್​ನಲ್ಲಿರುವ ಭಾರತೀಯರ ರಕ್ಷಣೆಯನ್ನು ತ್ವರಿತವಾಗಿ ಮಾಡುವ ನಿಟ್ಟಿನಲ್ಲಿ ನಾಲ್ವರು ಕೇಂದ್ರ ಸಚಿವರು ಅಲ್ಲಿಗೆ ಹೋಗಲಿದ್ದಾರೆ ಎನ್ನಲಾಗಿದೆ.
ಇನ್ನು ಭಾರತ ಹೊರತು ಪಡಿಸಿ ಉಳಿದ ದೇಶಗಳು ಏನೆಲ್ಲ ಕ್ರಮ ಕೈಗೊಂಡಿವೆ ಎಂದು ಇಲ್ಲಿದೆ ಮಾಹಿತಿ..

ಚೀನಾ 

ಉಕ್ರೇನ್​ನಲ್ಲಿ ಚೀನಾದ ಸುಮಾರು 6000 ಪ್ರಜೆಗಳು ಸಿಲುಕಿದ್ದಾರೆ. ಉಕ್ರೇನ್​ನಲ್ಲಿರುವ ಚೀನಿಯರನ್ನು ರಕ್ಷಣೆ  ಮಾಡಲಾಗುವುದು. ಹೀಗಾಗಿ ಚಾರ್ಟರ್ಡ್​ ವಿಮಾನ ವ್ಯವಸ್ಥೆ ಮಾಡಿದ್ದಾಗಿ ಬೀಜಿಂಗ್​ ಹೇಳಿದೆ. ಈ ವಿಮಾನ ಹತ್ತುವವರು ಕೀವ್​​ನಿಂದ ಹೊರಟಾಗ ಚೀನಾದ ಧ್ವಜವನ್ನು ಗುರುತಿಗಾಗಿ ಪ್ರದರ್ಶಿಸಬೇಕು ಎಂದೂ ಸೂಚಿಸಿತ್ತು. ಆದರೆ ಸದ್ಯ ಚೀನಾ ತನ್ನ ನಾಗರಿಕರ ಸ್ಥಳಾಂತರ ಪ್ರಕ್ರಿಯೆಯನ್ನು ಮುಂದೂಡಿದೆ.  ಹೀಗಾಗಿ ಸದ್ಯ ಚೀನಾ ಪ್ರಜೆಗಳ ಸ್ಥಳಾಂತರ ಕಾರ್ಯ ನಡೆಯುತ್ತಿಲ್ಲ.

ಯುನೈಟೆಡ್​ ಸ್ಟೇಟ್ಸ್​ 

ಯುಎಸ್​​ನ ಅಂದಾಜು 900 ಉದ್ಯೋಗಿಗಳು ಯುದ್ಧ ಪೀಡಿತ ಉಕ್ರೇನ್​​ನಲ್ಲಿ ಸಿಲಕಿದ್ದಾರೆ ಎಂದು ವಾಷಿಂಗ್ಟನ್ ಡಿಸಿ ತಿಳಿಸಿದೆ. ಆದರೆ ಯುಎಸ್​ನ ನಾಗರಿಕರನ್ನು ಉಕ್ರೇನ್​​ನಿಂದ  ಸ್ಥಳಾಂತರ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದೂ ಹೇಳಿದೆ. ಯುದ್ಧ ನಡೆಯುತ್ತಿರುವ ಉಕ್ರೇನ್​​ನಲ್ಲಿರುವ ಯುಎಸ್​ ಪ್ರಜೆಗಳು ವಾಪಸ್ ದೇಶಕ್ಕೆ ಬರಲು ಇಚ್ಛಿಸಿದರೆ, ದಯವಿಟ್ಟು ವೈಯಕ್ತಿಕವಾಗಿಯೇ ವ್ಯವಸ್ಥೆ ಮಾಡಿಕೊಳ್ಳಿ ಎಂದು ನಾವು ಒತ್ತಾಯಿಸುತ್ತೇವೆ. ಅದೂ ಕೂಡ ಎಷ್ಟರಮಟ್ಟಿಗೆ ಸುರಕ್ಷಿತ ಎಂಬುದನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ನೀವು ಅಲ್ಲಿಂದ ಹೊರಡಲು ಆಯ್ಕೆ ಮಾಡಿಕೊಳ್ಳುವ ಮಾರ್ಗ ಮತ್ತು ಅಪಾಯ ಎರಡನ್ನೂ ಪರಿಗಣಿಸಿಕೊಳ್ಳಿ. ಹಾಗೊಮ್ಮೆ ಬರುತ್ತೀರಿ ಎಂದಾದರೆ ನೀವು ಹಂಗೇರಿ, ರೊಮೇನಿಯಾ, ಸ್ಲೊವಾಕಿಯಾ ಗಡಿಭಾಗಕ್ಕೆ ಬಂದು ಅಲ್ಲಿಂದ ಸ್ವದೇಶಕ್ಕೆ ಮರಳಬಹುದು ಎಂದು ನಾವು ಶಿಫಾರಸ್ಸು ಮಾಡುತ್ತೇವೆ ಎಂದು ಉಕ್ರೇನ್​​ನಲ್ಲಿರುವ ಯುಎಸ್ ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ. ಹಾಗೇ, ಅಗತ್ಯ ಇರುವವರ ಸಂವಹನಕ್ಕಾಗಿ ಒಂದು ಆನ್​ಲೈನ್ ಅರ್ಜಿ ಮತ್ತು ಫೋನ್​ನಂಬರ್​ನ್ನು ಬಿಡುಗಡೆ  ಮಾಡಿದೆ.

ಯುನೈಟೆಡ್​ ಕಿಂಗ್​ಡಮ್​

ಈ ದೇಶದ ಸರ್ಕಾರ ಯುದ್ಧ ಶುರುವಾಗುವುದಕ್ಕೂ ಮೊದಲೇ ಒಂದು ಸುತ್ತೋಲೆ ಹೊರಡಿಸಿದೆ. ಯುದ್ಧ ಭೀತಿ ಇರುವ ಉಕ್ರೇನ್​​ನಲ್ಲಿರುವ ಯುಕೆಯ ನಾಗರಿಕರನ್ನು ಸ್ಥಳಾಂತರ ಮಾಡಲು ಯಾವುದೇ ವ್ಯವಸ್ಥೆ ಕೈಗೊಳ್ಳಲು ಇಲ್ಲಿನ ದೂತಾವಾಸ ಕಚೇರಿಗೆ ಸಾಧ್ಯವಿಲ್ಲ. ಬ್ರಿಟಿಷ್​ ನಾಗರಿಕರು ಅದನ್ನು ನಿರೀಕ್ಷಿಸಬೇಡಿ ಎಂದು ಹೇಳಿಬಿಟ್ಟಿದೆ. ಹಾಗಿದ್ದಾಗ್ಯೂ ಕೆಲವರು ಉಳಿದ ದೇಶಗಳ ನಾಗರಿಕರಂತೆ ಗಡಿ ಪ್ರದೇಶಗಳವರೆಗೆ ಹೋಗಿ ಅಲ್ಲಿಂದ ತಾಯ್ನಾಡಿಗೆ ಮರಳುತ್ತಿದ್ದಾರೆ.

ಜರ್ಮನಿ

ಉಕ್ರೇನ್​​ನಲ್ಲಿರುವ ಜರ್ಮನ್ನರು ಆದಷ್ಟು ಬೇಗ ಆ ದೇಶವನ್ನು ಬಿಟ್ಟು ಹೊರಡಿ. ಆದರೆ ಸರ್ಕಾರದಿಂದ ಯಾವುದೇ ಸ್ಥಳಾಂತರ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಜರ್ಮಿನಿ ತಿಳಿಸಿದೆ. ಅಷ್ಟೇ ಅಲ್ಲ ಬರ್ಲಿನ್, ಉಕ್ರೇನ್​​ನಲ್ಲಿರುವ​ ತನ್ನ ರಾಯಭಾರಿ ಕಚೇರಿಯನ್ನೂ ಕ್ಲೋಸ್ ಮಾಡಿದೆ.

ಈಜಿಪ್ಟ್​

ಉಕ್ರೇನ್​​ನಲ್ಲಿರುವ ಈಜಿಪ್ಟ್​ ನಾಗರಿಕರೊಂದಿಗೆ ಅಲ್ಲಿನ ಸರ್ಕಾರ ಸಂವಹನ ನಡೆಸಲು ಪ್ರಯತ್ನ ಮಾಡುತ್ತಿದೆ. ಈಜಿಪ್ಟ್​​ನ ವಿದ್ಯಾರ್ಥಿಗಳು ತಮ್ಮ ದೇಶದ ರಾಯಭಾರಿ ಕಚೇರಿ ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಹಲವರು ಯಾರ ಸಹಾಯಕ್ಕೂ ಕಾಯದೆ, ಸ್ವತಃ ಕಾಲ್ನಡಿಗೆಯಲ್ಲಿ ಪೋಲ್ಯಾಂಡ್​ವರೆಗೆ ಧಾವಿಸಿ, ಅಲ್ಲಿಂದ ಸ್ವದೇಶಕ್ಕೆ ಹೋಗುವ ಪ್ರಯತ್ನದಲ್ಲಿದ್ದಾರೆ.

ಇದನ್ನೂ ಓದಿ: ಬೆನ್ನತ್ತಿ ಬಂತು ಯುದ್ಧ; ಅಫ್ಘಾನ್​​ನಿಂದ ತಪ್ಪಿಸಿಕೊಂಡು ಉಕ್ರೇನ್​ಗೆ ಬಂದಿದ್ದ ವ್ಯಕ್ತಿಯ ದುರದೃಷ್ಟದ ಕತೆ ಇದು

Published On - 4:40 pm, Mon, 28 February 22