
ನವದೆಹಲಿ, ಸೆಪ್ಟೆಂಬರ್ 1: ಚೀನಾದಲ್ಲಿ ನಡೆದ ಎಸ್ಸಿಒ ಸಭೆಯಲ್ಲಿ (SCO Summit) ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೆಲ ದೇಶಗಳು ಹೇಗೆ ದ್ವಂದ್ವ ನೀತಿ ಅನುಸರಿಸುತ್ತಿವೆ ಎಂಬುದನ್ನು ಮೋದಿ ಎತ್ತಿ ತೋರಿಸಿದರು. ಮೋದಿ ಅವರ ಈ ಅನಿಸಿಕೆಗೆ ಎಸ್ಸಿಒದ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಿವೆ. ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಈ ರಾಷ್ಟ್ರಗಳು ಖಂಡಿಸಿವೆ.
ಚೀನಾದ ಟಿಯಾಂಜಿನ್ನಲ್ಲಿ ನಡೆದ ಈ ಸಮಿಟ್ನಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಪಾಲ್ಗೊಂಡಿದ್ದರು. ಅವರ ಎದುರೇ ಭಾರತವು ಭಯೋತ್ಪಾದನೆ ವಿರುದ್ಧ ವಿವಿಧ ರಾಷ್ಟ್ರಗಳ ಬೆಂಬಲ ಗಳಿಸಿದ್ದು ಅದಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದಿಂದ ಭಯೋತ್ಪಾದನೆ ವಿಚಾರ; ಚೀನಾದಿಂದಲೂ ಬೆಂಬಲ
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರಗಾಮಿಗಳು ದಾಳಿ ಮಾಡಿ ಹಲವು ಮಂದಿಯನ್ನು ಗುಂಡಿಟ್ಟು ಬಲಿಪಡೆದಿದ್ದರು. ಶಾಂಘೈ ಸಹಕಾರ ಸಂಘಟನೆಯ ವಿವಿಧ ಸದಸ್ಯ ದೇಶಗಳು ಟಿಯಾಂಜಿನ್ ಘೋಷಣೆಯಲ್ಲಿ ಪಹಲ್ಗಾಂ ಘಟನೆಯನ್ನು ಬಲವಾಗಿ ಖಂಡಿಸಿವೆ.
‘ಸದಸ್ಯ ದೇಶಗಳು ಪಹಲ್ಗಾಂ ಉಗ್ರ ದಾಳಿ ಘಟನೆಯನ್ನು ಬಲವಾಗಿ ಖಂಡಿಸಿವೆ. ಮೃತರು ಮತ್ತು ಗಾಯಾಳುಗಳಿಗೆ ಸಾಂತ್ವನ ವ್ಯಕ್ತಪಡಿಸಿವೆ. ಇಂಥ ದಾಳಿಗಳನ್ನು ಎಸಗಿದವರು, ಬೆಂಬಲ ನೀಡಿದವರಿಗೆ ಶಿಕ್ಷೆಯಾಗಬೇಕು’ ಎಂದು ಟಿಯಾಂಜಿನ್ ಡಿಕ್ಲರೇಶನ್ನಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ ನರೇಂದ್ರ ಮೋದಿ ಅವರು ಪಹಲ್ಗಾಂ ಉಗ್ರ ದಾಳಿ ಘಟನೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿ ತೀವ್ರವಾಗಿ ಖಂಡಿಸಿದ್ದರು. ‘ಪಹಲ್ಗಾಂ ಘಟನೆಯು ಭಾರತದ ಆತ್ಮದ ಮೇಲೆ ನಡೆದ ದಾಳಿ ಮಾತ್ರವಲ್ಲ, ಮಾನವೀಯತೆನ್ನು ನಂಬುವ ಪ್ರತಿಯೊಂದು ದೇಶಕ್ಕೂ ಎಸೆದ ಸವಾಲಾಗಿತ್ತು. ಕೆಲ ದೇಶಗಳು ಬಹಿರಂಗವಾಗಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದನ್ನು ಹೇಗೆ ಒಪ್ಪುವುದು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ’ ಎಂದು ಮೋದಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವದ ಮೇಲೆ ನಮ್ಮ ಸಂಬಂಧ ಮುಂದುವರೆಸಲು ಬದ್ಧ: ಜಿನ್ಪಿಂಗ್ಗೆ ಮೋದಿ ಸಂದೇಶ
ಎಸ್ಸಿಒ ಶೃಂಗಸಭೆಯಲ್ಲಿ ಭಾರತ, ರಷ್ಯಾ ಮತ್ತು ಚೀನಾ ಶಕ್ತಿಗಳ ಸಮಾಗಮವಾಗಿತ್ತು. ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್, ಷಿ ಜಿನ್ಪಿಂಗ್ ಒಟ್ಟಿಗೆ ನಿಂತು ಮಾತನಾಡಿದರು. ಪುಟಿನ್ ಮತ್ತು ಮೋದಿ ನಡುವೆ ಹೆಚ್ಚಿನ ಆಪ್ತತೆ ಕಾಣಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೃತೀಯ ಜಗತ್ತಿನ ರಾಷ್ಟ್ರಗಳ ಶಕ್ತಿಗಳು ನಿರ್ದಿಷ್ಟ ಸಂದೇಶ ರವಾನಿಸಿದಂತೆ ಕಾಣುತ್ತಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ