ಅಮೆರಿಕದ ವಾಷಿಂಗ್ಟನ್ ರೆಸ್ಟೊರೆಂಟ್‌ನ ಹೊರಗೆ ದಾಳಿ; ಭಾರತ ಮೂಲದ ವ್ಯಕ್ತಿ ಸಾವು

|

Updated on: Feb 10, 2024 | 2:20 PM

ತನಿಖಾಧಿಕಾರಿಗಳ ಪ್ರಕಾರ, ಫೆಬ್ರವರಿ 2 ರಂದು 15 ನೇ ಸ್ಟ್ರೀಟ್ ನಾರ್ತ್‌ವೆಸ್ಟ್‌ನ 1100 ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು ಬೆಳಿಗ್ಗೆ 2 ಗಂಟೆಯ ಸುಮಾರಿಗೆ ಶೋಟೊ ರೆಸ್ಟೋರೆಂಟ್‌ ಹೊರಗೆ ನಡೆದ ಘಟನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ವಿವೇಕ್ ತನೇಜಾ ಮತ್ತು ಅಪರಿಚಿತ ವ್ಯಕ್ತಿ ಜತೆ ನಡೆದ ವಾಗ್ವಾದ, ಹಲ್ಲೆಗೆ ತಿರುಗಿದ್ದು ಈ ಜಗಳದಲ್ಲಿ ವಿವೇಕ್ ಗಂಭೀರ ಗಾಯಗೊಂಡಿದ್ದರು. ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಅಮೆರಿಕದ ವಾಷಿಂಗ್ಟನ್ ರೆಸ್ಟೊರೆಂಟ್‌ನ ಹೊರಗೆ ದಾಳಿ; ಭಾರತ ಮೂಲದ ವ್ಯಕ್ತಿ ಸಾವು
ವಿವೇಕ್ ತನೇಜಾ
Follow us on

ವಾಷಿಂಗ್ಟನ್ ಫೆಬ್ರುವರಿ 10: ಅಮೆರಿಕದ ವಾಷಿಂಗ್ಟನ್ (Washington) ರೆಸ್ಟೊರೆಂಟ್‌ನ ಹೊರಗೆ ನಡೆದ ದಾಳಿಯಲ್ಲಿ 41 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬರು(Indian-origin)  ಸಾವಿಗೀಡಾಗಿದ್ದಾರೆ. ವಾಷಿಂಗ್ಟನ್ ಡೌನ್‌ಟೌನ್‌ನಲ್ಲಿರುವ ರೆಸ್ಟೋರೆಂಟ್‌ನ ಹೊರಗೆ ನಡೆದ ವಾಗ್ವಾದದ ಸಂದರ್ಭದಲ್ಲಿ ಈ ವ್ಯಕ್ತಿ ತೀವ್ರ ಗಾಯಗೊಂಡಿದ್ದರು. ತನಿಖಾಧಿಕಾರಿಗಳ ಪ್ರಕಾರ, ಫೆಬ್ರವರಿ 2 ರಂದು 15 ನೇ ಸ್ಟ್ರೀಟ್ ನಾರ್ತ್‌ವೆಸ್ಟ್‌ನ 1100 ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು ಬೆಳಿಗ್ಗೆ 2 ಗಂಟೆಯ ಸುಮಾರಿಗೆ ಶೋಟೊ ರೆಸ್ಟೋರೆಂಟ್‌ (Shoto Restaurant) ಹೊರಗೆ ನಡೆದ ಘಟನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಅಧಿಕಾರಿಗಳು ಬಂದಾಗ ಅವರಿಗೆ ಪಾದಚಾರಿ ಮಾರ್ಗದಲ್ಲಿ ಭಾರತೀಯ ವಿವೇಕ್ ತನೇಜಾ ಬಿದ್ದಿರುವುದು ಕಾಣಿಸಿತ್ತು. ತೀವ್ರ ಗಾಯಗೊಂಡ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.

ಪ್ರಾಥಮಿಕ ತನಿಖೆಯಲ್ಲಿ ತನೇಜಾ ಮತ್ತು ಅಪರಿಚಿತ ವ್ಯಕ್ತಿ ಜಗಳವಾಡಿದ್ದು ಅದು ಹಲ್ಲೆಗೆ ತಿರುಗಿದೆ ಎಂದು ಸಿಬಿಎಸ್‌ನೊಂದಿಗೆ ಸಂಯೋಜಿತವಾಗಿರುವ ವಾಷಿಂಗ್ಟನ್,ಡಿಸಿಯಲ್ಲಿನ ದೂರದರ್ಶನ ಕೇಂದ್ರವಾದ WUSA ಹೇಳಿದೆ. ತನೇಜಾ ಕೆಳಗೆ ಬಿದ್ದಿದ್ದು ಆತನ ತಲೆ ಪಾದಚಾರಿ ಮಾರ್ಗಕ್ಕೆ ಬಡಿದಿತ್ತು. ತೀವ್ರ ಗಾಯಗೊಂಡಿದ್ದ ಅವರು ಬುಧವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಈಗ ತನೇಜಾ ಅವರ ಸಾವನ್ನು ಕೊಲೆ ಎಂದು ತನಿಖೆ ನಡೆಸುತ್ತಿದ್ದಾರೆ.

ತನೇಜಾ ಅವರು ಡೈನಮೋ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು. ಕಂಪನಿಯ ವೆಬ್‌ಸೈಟ್‌ನ ಪ್ರಕಾರ, ತನೇಜಾ ಅವರು ಡೈನಮೋದ ಕಾರ್ಯತಂತ್ರದ, ಬೆಳವಣಿಗೆ ಮತ್ತು ಪಾಲುದಾರಿಕೆಯ ಉಪಕ್ರಮಗಳನ್ನು ಮುನ್ನಡೆಸುತ್ತಾರೆ. ತನೇಜಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ.

ಫೆಬ್ರವರಿ 2 ರಂದು ನಾರ್ತ್‌ವೆಸ್ಟ್‌ನ 15 ನೇ ಸ್ಟ್ರೀಟ್‌ನ 1100 ಬ್ಲಾಕ್‌ನಲ್ಲಿ ಸಂಭವಿಸಿದ ನರಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಯನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ (MPD) ಸಾರ್ವಜನಿಕರ ಸಹಾಯವನ್ನು ಕೋರುತ್ತಿದೆ. ಎಂಪಿಡಿ ದಾಖಲೆಗಳ ಪ್ರಕಾರ, ದಾಳಿ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಮಾರಣಾಂತಿಕ ಗಾಯಗಳಿಂದ ಬಳಲುತ್ತಿರುವ ವ್ಯಕ್ತಿಯನ್ನು ಕಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದರು. ಆ ವ್ಯಕ್ತಿ ಫೆಬ್ರವರಿ 7 ರಂದು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:ಷಿಕಾಗೋದಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿ ಮೇಲೆ ದಾಳಿ; ಅಟ್ಟಾಡಿಸಿ ಹೊಡೆದು ಫೋನ್ ದೋಚಿದ ದುಷ್ಕರ್ಮಿಗಳು

ಜಿಲ್ಲೆಯಲ್ಲಿನ ಪ್ರತಿ ನರಹತ್ಯೆಗೆ ಜವಾಬ್ದಾರರಾಗಿರುವ ವ್ಯಕ್ತಿ ಅಥವಾ ವ್ಯಕ್ತಿಗಳ ಬಂಧನ ಮತ್ತು ಶಿಕ್ಷೆಗೆ ಕಾರಣವಾಗುವ ಮಾಹಿತಿಯನ್ನು ಒದಗಿಸುವ ವ್ಯಕ್ತಿಗಳಿಗೆ MPD ಬಹುಮಾನವನ್ನು ನೀಡುವುದಾಗಿ ಘೋಷಿಸಿದೆ.

ಈ ವಾರದ ಆರಂಭದಲ್ಲಿ, ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿ ಸೈಯದ್ ಮಜಾಹಿರ್ ಅಲಿ ಮೇಲೆ ದಾಳಿ ನಡೆದಿತ್ತು. ಇದಕ್ಕೂ ಮೊದಲು, ಜಾರ್ಜಿಯಾ ರಾಜ್ಯದ ಲಿಥೋನಿಯಾ ನಗರದಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿ ವಿವೇಕ್ ಸೈನಿ ಮೇಲೆ ನಿರಾಶ್ರಿತ ಮಾದಕ ವ್ಯಸನಿಯಿಂದ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ಈ ವರ್ಷ ಅಮೆರಿಕದಲ್ಲಿ ನಾಲ್ವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾಪೆ ಎಂದು ವರದಿಯಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ