ಅಮೆರಿಕಾ, ಬ್ರಿಟನ್​ ಲಸಿಕೆ ಮೇಲೆ ನಮಗೆ ನಂಬಿಕೆಯಿಲ್ಲ.. ಆ ಲಸಿಕೆ ಬೇಡ: ಸೆಡ್ಡು ಹೊಡೆದ ಇರಾನ್​

| Updated By: ಸಾಧು ಶ್ರೀನಾಥ್​

Updated on: Jan 08, 2021 | 6:02 PM

ಅಮೆರಿಕಾದ ಫೈಜರ್​-ಬಯೋಎನ್​ಟೆಕ್​ ಮತ್ತು ಬ್ರಿಟನ್​ ದೇಶದ ಆಸ್ಟ್ರಾಜೆನೆಕಾ ಸಂಸ್ಥೆಯ ಕೊರೊನಾ ಲಸಿಕೆಗಳನ್ನು ಬಳಸಿದರೂ ಆ ದೇಶಗಳಲ್ಲಿ ಮರಣ ಪ್ರಮಾಣ ಏರಿಕೆಯಾಗುತ್ತಿದೆ. ಆದ್ದರಿಂದ ಇರಾನ್​ ಅಲ್ಲಿನ ಲಸಿಕೆಗಳನ್ನು ಆಮದು ಮಾಡಿಕೊಳ್ಳುವುದಿಲ್ಲ

ಅಮೆರಿಕಾ, ಬ್ರಿಟನ್​ ಲಸಿಕೆ ಮೇಲೆ ನಮಗೆ ನಂಬಿಕೆಯಿಲ್ಲ.. ಆ ಲಸಿಕೆ ಬೇಡ: ಸೆಡ್ಡು ಹೊಡೆದ ಇರಾನ್​
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ಲಸಿಕೆ ಈಗ ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಿ ಉಳಿದಿಲ್ಲ. ಅದೊಂದು ಪ್ರತಿಷ್ಠೆಯ, ವ್ಯವಹಾರದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಡುವ ವಸ್ತುವೂ ಆಗಿದೆ. ಫೈಜರ್​-ಬಯೋಎನ್​ಟೆಕ್​ ಸಂಸ್ಥೆಯ ಕೊರೊನಾ ಲಸಿಕೆ ಮೊದಲ ಬಾರಿಗೆ ಅನುಮತಿ ಗಿಟ್ಟಿಸಿಕೊಂಡಾಗಲೇ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಅವಶ್ಯಕತೆಗೂ ಮೀರಿ ಲಸಿಕೆಯನ್ನು ಕಾಯ್ದಿರಿಸಿದ್ದವು. ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವುದಷ್ಟೇ ಅಲ್ಲದೇ ಮುಂದೆ ಅವಶ್ಯಕತೆ ಬಿದ್ದರೂ ನಾವು ಕೈಚಾಚುವಂತಾಗಬಾರದು ಎಂಬ ಸ್ವಪ್ರತಿಷ್ಠೆ ಅದರಲ್ಲಿ ಅಡಗಿತ್ತು.

ಪಾಶ್ಚಿಮಾತ್ಯ ರಾಷ್ಟ್ರಗಳ ಈ ಬಕಾಸುರನ ಗುಣ ಎಷ್ಟೋ ಬಡರಾಷ್ಟ್ರಗಳ ಪಾಲಿನ ಲಸಿಕೆಯನ್ನು ಕಿತ್ತುಕೊಂಡಿದೆ. ಆ ವಿಚಾರವಾಗಿ ಹಲವು ರಾಷ್ಟ್ರಗಳಿಗೆ ಆಕ್ರೋಶವೂ ಇದೆ ಎನ್ನುವುದು ಗೌಪ್ಯ ಸಂಗತಿಯೇನಲ್ಲ. ಆದರೆ, ಅದರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕುವ ಬಲಾಢ್ಯರೊಬ್ಬರು ಬೇಕಾಗಿತ್ತಷ್ಟೇ. ಇತ್ತ ಅಣ್ವಸ್ತ್ರ ವಿಚಾರವಾಗಿ ಅದೇ ಪಾಶ್ಚಿಮಾತ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದ, ಹಲವು ರೀತಿಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕೆ ಬಿದ್ದಿದ್ದ ಇರಾನ್​ ಈ ಸಮಯವನ್ನು ಉಪಯೋಗಿಸಿಕೊಂಡಿದೆ.

ಅಣ್ವಸ್ತ್ರಗಳಿಂದ ಶುರುವಾದ ಮುನಿಸು ಈಗ ಕೊರೊನಾ ಲಸಿಕೆಗೂ ವ್ಯಾಪಿಸಿದೆ

ಅಣ್ವಸ್ತ್ರಗಳಿಂದ ಶುರುವಾದ ಮುನಿಸು ಈಗ ಕೊರೊನಾ ಲಸಿಕೆಗೂ ವ್ಯಾಪಿಸುವುದಕ್ಕೆ ಇರಾನ್​ ಇಟ್ಟಿರುವ ಹೆಜ್ಜೆ ಕಾರಣವಾಗಿದೆ. ಕೊರೊನಾ ಲಸಿಕೆ ವಿಚಾರದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿರುವ ಇರಾನ್​ ದೇಶವು ಅಮೆರಿಕಾ ಮತ್ತು ಬ್ರಿಟನ್​ ತಯಾರಿಸಿದ ಲಸಿಕೆಗಳಿಗೆ ನಿಷೇಧ ಹೇರಿದೆ. ಈ ಕುರಿತು ಅಲ್ಲಿನ ಪರಮೋಚ್ಛ ನಾಯಕ ಆಯತೊಲ್ಲ ಅಲಿ ಖೋಮೆನಿ ಶುಕ್ರವಾರ ಘೋಷಣೆಯನ್ನೂ ಮಾಡಿದ್ದಾರೆ.

ಇರಾನ್​ನ ದೃಶ್ಯ ಮಾಧ್ಯಮದ ಮೂಲಕ ನೀಡಿರುವ ಹೇಳಿಕೆಯಲ್ಲಿ ಅಮೆರಿಕಾದ ಫೈಜರ್​-ಬಯೋಎನ್​ಟೆಕ್​ ಮತ್ತು ಬ್ರಿಟನ್​ ದೇಶದ ಆಸ್ಟ್ರಾಜೆನೆಕಾ ಸಂಸ್ಥೆಯ ಕೊರೊನಾ ಲಸಿಕೆಗಳನ್ನು ಬಳಸಿದರೂ ಆ ದೇಶಗಳಲ್ಲಿ ಮರಣ ಪ್ರಮಾಣ ಏರಿಕೆಯಾಗುತ್ತಿದೆ. ಆದ್ದರಿಂದ ಇರಾನ್​ ಅಲ್ಲಿನ ಲಸಿಕೆಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಬೇರೆಯವರ ಮೇಲೆ ಪ್ರಯೋಗ ಮಾಡುವ ಕುಬುದ್ಧಿ ಹೊಂದಿವೆ; ಅದಕ್ಕೇ ಈ ಎಚ್ಚರಿಕೆ..
ಇದಕ್ಕೂ ಮಿಗಿಲಾಗಿ ‘ನಾನು ಆ ದೇಶಗಳನ್ನು ನಂಬುವುದಿಲ್ಲ’ ಎಂಬ ಹೇಳಿಕೆಯನ್ನು ನೀಡಿರುವ ಆಯತೊಲ್ಲ ಅಲಿ ಖೋಮೆನಿ, ಆ ರಾಷ್ಟ್ರಗಳು ಕೆಲವೊಮ್ಮೆ ಬೇರೆಯವರ ಮೇಲೆ ಪ್ರಯೋಗ ಮಾಡುವ ಕುಬುದ್ಧಿ ಪ್ರದರ್ಶಿಸುತ್ತವೆ. ನನ್ನ ದೃಷ್ಟಿಯಲ್ಲಿ ಫ್ರಾನ್ಸ್​ ದೇಶವೂ ನಂಬಿಕೆಗೆ ಅರ್ಹವಲ್ಲ ಎಂದು ಹೇಳಿಕೆ ನೀಡುವ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬಹಿರಂಗವಾಗಿ ವಿರೋಧ ತೋರಿದ್ದಾರೆ.

ಇರಾನ್​ ಸುರಕ್ಷಿತ ಮೂಲದಿಂದಲೇ ಕೊರೊನಾ ಲಸಿಕೆ ಪಡೆಯಲಿದೆ ಎಂದಿರುವ ಅಲಿ, ತಮ್ಮ ದೇಶದಲ್ಲಿ ತಯಾರಾಗುವ ಲಸಿಕೆಗಾಗಿಯೇ ಕಾಯೋಣ ಎಂಬರ್ಥದ ಸುಳಿವು ನೀಡಿದ್ದಾರೆ. ಇರಾನ್​ಗೆ ದೊಡ್ಡ ಮಟ್ಟದಲ್ಲಿ ಲಸಿಕೆ ಪೂರೈಸಲು ಅಮೆರಿಕಾ, ಬ್ರಿಟನ್​ ಸಿದ್ಧವಾಗುತ್ತಿರುವಾಗಲೇ ಇರಾನ್​ ಇಂತಹ ಹೇಳಿಕೆ ನೀಡಿರುವುದು ಅಚ್ಚರಿಯನ್ನೂ ಹುಟ್ಟುಹಾಕಿದೆ.