ಅಮೆರಿಕ-ಇಸ್ರೇಲ್ ದಾಳಿಗೆ ಧ್ವಂಸಗೊಂಡಿದ್ದ ಖಮೇನಿ ನಿವಾಸದ ಮೊದಲ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಕಳೆದೊಂದು ವಾರದಿಂದ ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆದಿವೆ. ಖಮೇನಿಯವರ ಅಂತ್ಯಕ್ರಿಯೆ ಮುಗಿಯುವ ಮೊದಲೇ ಅಮೆರಿಕ ಮತ್ತೊಮ್ಮೆ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಇದಕ್ಕೂ ಬಗ್ಗೆ ಇರಾನ್ ಈ ದಾಳಿಗೆ ಪ್ರತಿದಾಳಿ ನಡೆಸಿದೆ. ಮೆರವಣಿಗೆಯ ನಂತರ ಅವರ ದಫನ ಕಾರ್ಯದ ದಿನವಾದ ಇಂದೇ ಟೆಹ್ರಾನ್‌ನಲ್ಲಿರುವ ಅವರ ಅಧಿಕೃತ ನಿವಾಸದ ಒಳಗಿನ ವಿನಾಶದ ಮೊದಲ ವಿಡಿಯೋವನ್ನು ಇರಾನ್ ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿವೆ. ಖಮೇನಿಯವರ ಮನೆ ಮೇಲೆ ದಾಳಿ ನಡೆದಾಗ ಯಾವ ರೀತಿ ಆ ಮನೆ ಧ್ವಂಸವಾಗಿದೆ ಎಂಬುದನ್ನು ಈ ವಿಡಿಯೋ ಬಹಿರಂಗಗೊಳಿಸಿದೆ.

ಅಮೆರಿಕ-ಇಸ್ರೇಲ್ ದಾಳಿಗೆ ಧ್ವಂಸಗೊಂಡಿದ್ದ ಖಮೇನಿ ನಿವಾಸದ ಮೊದಲ ವಿಡಿಯೋ ಬಿಡುಗಡೆ ಮಾಡಿದ ಇರಾನ್
Iran Khamenei House
Image Credit source: TV9

Updated on: Jul 09, 2026 | 3:51 PM

ಮುಖ್ಯಾಂಶಗಳು

  • ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಖಮೇನಿ ಹತ್ಯೆ
  • ಖಮೇನಿ ನಿವಾಸದ ಈಗಿನ ಸ್ಥಿತಿಯ ವಿಡಿಯೋ ರಿಲೀಸ್
  • ಇರಾನ್ ಮೇಲಾದ ದಾಳಿಯ ಭೀಕರತೆ ಬಯಲು

ಟೆಹ್ರಾನ್, ಜುಲೈ 9: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ (Iran War) ಮೇಲೆ ವೈಮಾನಿಕ ದಾಳಿ ನಡೆಸಿದ್ದವು. ಆಗ ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ನಿವಾಸವನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿತ್ತು. ಖಮೇನಿಯ ಹತ್ಯೆಯಾದರೆ ಇರಾನ್ ಮತ್ತೆ ಯುದ್ಧ ಮುಂದುವರೆಸುವ ಧೈರ್ಯ ಮಾಡುವುದಿಲ್ಲ ಎಂಬುದು ಟ್ರಂಪ್ ಹಾಗೂ ನೆತನ್ಯಾಹು ಅವರ ಅಭಿಪ್ರಾಯವಾಗಿತ್ತು. ಆದರೆ, ಅವರ ಲೆಕ್ಕಾಚಾರವನ್ನು ಉಲ್ಟಾ ಮಾಡುವಂತೆ ಇರಾನ್ ಮಿಲಿಟರಿ ಆಗಿದ್ದಾಗಲಿ ಎಂಬಂತೆ ಅಮೆರಿಕಕ್ಕೆ ಸಂಬಂಧಿಸಿದ ವಾಯುನೆಲೆಗಳ ಮೇಲೆ, ಇಸ್ರೇಲ್ ಮೇಲೆ ತೀವ್ರ ದಾಳಿ ನಡೆಸಿತ್ತು. ಇದೀಗ ಮತ್ತೆ ಅಮೆರಿಕ ಇರಾನ್ ಮೇಲೆ ದಾಳಿಯನ್ನು ಆರಂಭಿಸಿದ ಬೆನ್ನಲ್ಲೇ ಇರಾನ್ ಮೊದಲ ಬಾರಿಗೆ ಖಮೇನಿಯವರ ಮನೆಯ ಮೇಲಿನ ದಾಳಿಯ ಮೊದಲ ವಿಡಿಯೋ ಬಿಡುಗಡೆ ಮಾಡಿದೆ.

ಈ ವರ್ಷದ ಫೆಬ್ರವರಿ 28ರಂದು ಅಯತೊಲ್ಲಾ ಖಮೇನಿ ಅವರನ್ನು ಬಲಿಪಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯ ಭೀಕರತೆಯನ್ನು ಈ 35 ಸೆಕೆಂಡುಗಳ ವಿಡಿಯೋ ತೋರಿಸುತ್ತದೆ. ಟೆಹ್ರಾನ್‌ನ ಕಾಂಪೌಂಡ್ ಒಳಗಿರುವ ‘ಇಮಾಮ್ ಖಮೇನಿ ಹುಸೇನಿಯಾ’ದ ಮುಖ್ಯ ಸಭಾಂಗಣವು ಸಂಪೂರ್ಣವಾಗಿ ಧ್ವಂಸಗೊಂಡಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಭಾಂಗಣದಲ್ಲೇ ಖಮೇನಿ ಪ್ರಮುಖ ಸಭೆಗಳನ್ನು ನಡೆಸುತ್ತಿದ್ದರು ಮತ್ತು ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರು.


ಬಲಿಯಾಗಿದ್ದು ಯಾರ್ಯಾರು?:

ಟೆಹ್ರಾನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದಾಗ ಖಮೇನಿಯವರ ಮನೆಯಲ್ಲಿ ಅಯತೊಲ್ಲಾ ಖಮೇನಿ, ಅವರ ಪತ್ನಿ ಮನ್ಸೌರೆಹ್, ಅವರ 4 ಗಂಡು ಮಕ್ಕಳು (ಮೊಸ್ತಫಾ, ಮೊಜ್ತಬಾ, ಮಸೌದ್, ಮೈಸಮ್) ಮತ್ತು ಇಬ್ಬರು ಹೆಣ್ಣು ಮಕ್ಕಳು (ಬೊಶ್ರಾ, ಹೋದಾ) ವಾಸಿಸುತ್ತಿದ್ದರು. ಈ ದಾಳಿಯಲ್ಲಿ ಖಮೇನಿ ಅವರೊಂದಿಗೆ ಅವರ ಕುಟುಂಬದ ಹಲವು ಸದಸ್ಯರು ಮತ್ತು ಅವರ ಮಗಳಾದ ಬೊಶ್ರಾ ಅವರ 14 ತಿಂಗಳ ಮಗು ‘ಝಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿ’ ಕೂಡ ಮೃತಪಟ್ಟಿತ್ತು. ಖಮೇನಿಯವರ ಕುಟುಂಬವನ್ನೇ ಛಿದ್ರಗೊಳಿಸಿದ ಈ ದಾಳಿಯಿಂದ ಖಮೇನಿಯವರ ನಿವಾಸ ಹೇಗಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಅಂತ್ಯ; ಭಾರತದ ತಲೆಬಿಸಿಗೆ ಕಾರಣಗಳಿವು

ಅವಶೇಷಗಳ ರಾಶಿ:

ಖಮೇನಿಯವರ ನಿವಾಸದ ಕಟ್ಟಡದ ಕುಸಿದು ಬಿದ್ದಿರುವ ಭಾಗಗಳು, ಬಿದ್ದಿರುವ ಭಾರಿ ಪ್ರಮಾಣದ ಅವಶೇಷಗಳ ರಾಶಿ ಅಮೆರಿಕ ಮತ್ತು ಇಸ್ರೇಲ್​ನ ಜಂಟಿ ಮಿಲಿಟರಿ ಕಾರ್ಯಾಚರಣೆಯ ತೀವ್ರತೆಯನ್ನು ಎತ್ತಿ ತೋರಿಸುತ್ತವೆ. ಈ ದಾಳಿಯ ನಂತರ ಈ ನಿವಾಸದ ಒಳಗಿನ ದೃಶ್ಯ ಸಾರ್ವಜನಿಕವಾಗಿ ಪ್ರಕಟವಾಗುತ್ತಿರುವುದು ಇದೇ ಮೊದಲು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ.

ಖಮೇನಿಯ ಹತ್ಯೆಯಾಗಿದ್ದು ಹೇಗೆ?:

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಘೋಷಿಸಿದ ಮೊದಲ ದಿನವೇ 86 ವರ್ಷದ ಅಯತೊಲ್ಲಾ ಖಮೇನಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿಯಲ್ಲಿ ಅವರ 14 ತಿಂಗಳ ಮೊಮ್ಮಗಳು ಸೇರಿದಂತೆ ಅವರ ಕುಟುಂಬದ ಹಲವು ಸದಸ್ಯರು ಕೂಡ ಸಾವನ್ನಪ್ಪಿದ್ದರು. ಅವರ ನಂತರ ಇರಾನ್‌ನ ಸುಪ್ರೀಂ ನಾಯಕನಾಗಿ ಅಧಿಕಾರ ವಹಿಸಿಕೊಂಡಿರುವ ಅವರ ಪುತ್ರ ಮೊಜ್ತಬಾ ಅಲಿ ಖಮೇನಿ ಕೂಡ ಈ ದಾಳಿಯಲ್ಲಿ ಗಾಯಗೊಂಡಿದ್ದರು. ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅಯತೊಲ್ಲಾ ಖಮೇನಿಯ ಅಂತ್ಯಕ್ರಿಯೆಯಲ್ಲಿ ಕೂಡ ಅವರ ಮಗನಾದ ಮೊಜ್ತಬಾ ಖಮೇನಿ ಹಾಜರಾಗಿರಲಿಲ್ಲ.

ಖಮೇನಿ ಅಂತ್ಯಕ್ರಿಯೆ:

ಇರಾನ್ ಇದೀಗ ಬಿಡುಗಡೆ ಮಾಡಿರುವ ಈ ವಿಡಿಯೋ ಈಶಾನ್ಯ ಇರಾನ್‌ನಲ್ಲಿರುವ ಖಮೇನಿ ಅವರದೇ ನಗರವಾದ ‘ಮಶ್ಹಾದ್’ನಲ್ಲಿ ಖಮೇನಿಯವರ ದಫನ ಕಾರ್ಯ ನಡೆಯುವ ಸಮಯದಲ್ಲೇ ಹೊರಬಿದ್ದಿದೆ. ಇದರೊಂದಿಗೆ ಟೆಹ್ರಾನ್, ಕೋಮ್ ಹಾಗೂ ಇರಾಕ್‌ನ ಶಿಯಾ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾಗಳಲ್ಲಿ 1 ವಾರಗಳ ಕಾಲ ನಡೆದ ಸುದೀರ್ಘ ಅಂತ್ಯಕ್ರಿಯೆಯ ಮೆರವಣಿಗೆ ಕೊನೆಗೊಂಡಿದೆ. ಖಮೇನಿಯವರ ದಫನ ಕಾರ್ಯಕ್ಕೂ ಮುನ್ನ ಅವರ ಶವಪೆಟ್ಟಿಗೆಯನ್ನು ಟೆಹ್ರಾನ್‌ನ ಗ್ರಾಂಡ್ ಮೊಸಲ್ಲಾದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇದಾದ ನಂತರ ಟೆಹ್ರಾನ್ ಮತ್ತು ಕೋಮ್ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗಿತ್ತು. ಅಲ್ಲಿ ಲಕ್ಷಾಂತರ ಭಕ್ತರು ಅಂತಿಮ ನಮನ ಸಲ್ಲಿಸಿದ ನಂತರ ಆ ಶವಪೆಟ್ಟಿಗೆಯನ್ನು ಮರಳಿ ಇರಾನ್‌ಗೆ ತರಲಾಗಿತ್ತು.

ಇದನ್ನೂ ಓದಿ: ಶೂಟ್ ಮಾಡ್ಬೇಕಾ?; ಭೀಕರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್​ಗೆ ಇರಾನ್ ತಿರುಗೇಟು

2 ದಿನಗಳ ಹಿಂದಿನಿಂದ ಇರಾನ್ ಮತ್ತು ಅಮೆರಿಕದ ನಡುವೆ ಮತ್ತೊಮ್ಮೆ ಸಂಘರ್ಷ ಶುರುವಾಗಿದೆ. ಇರಾನ್ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಉಲ್ಬಣಗೊಂಡು, ಯುದ್ಧವಾಗಿ ಬದಲಾಗುವ ಆತಂಕ ಸೃಷ್ಟಿಯಾಗಿದೆ. ಇದೇ ಸಂದರ್ಭದಲ್ಲಿ ಖಮೇನಿಯವರ ನಿವಾಸದ ಧ್ವಂಸದ ಈ ವಿಡಿಯೋ ಬಿಡುಗಡೆಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಇರಾನ್‌ನ ಗುರಿಗಳ ಮೇಲೆ ಹೊಸ ದಾಳಿಗಳನ್ನು ನಡೆಸಿರುವುದಾಗಿ ಅಮೆರಿಕ ಮಿಲಿಟರಿ ತಿಳಿಸಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಕೂಡ ದಾಳಿ ನಡೆಸುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:50 pm, Thu, 9 July 26

Follow Us