ಹಿಜಾಬ್ ವಿರುದ್ಧ ಮಹಿಳೆಯರ ಸುದೀರ್ಘ ಪ್ರತಿಭಟನೆಯ ನಂತರ ನೈತಿಕ ಪೊಲೀಸ್ ವ್ಯವಸ್ಥೆ ರದ್ದು ಮಾಡಿದ ಇರಾನ್

| Updated By: ರಶ್ಮಿ ಕಲ್ಲಕಟ್ಟ

Updated on: Dec 04, 2022 | 5:53 PM

ನೈತಿಕ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ ಅದನ್ನು ರದ್ದುಗೊಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಹೇಳಿದ್ದಾರೆಂದು ISNA ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಿಜಾಬ್ ವಿರುದ್ಧ ಮಹಿಳೆಯರ ಸುದೀರ್ಘ ಪ್ರತಿಭಟನೆಯ ನಂತರ ನೈತಿಕ ಪೊಲೀಸ್ ವ್ಯವಸ್ಥೆ ರದ್ದು ಮಾಡಿದ ಇರಾನ್
ಪ್ರಾತಿನಿಧಿಕ ಚಿತ್ರ
Follow us on

ಟೆಹ್ರಾನ್: ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್  (female dress code)ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಹ್ಸಾ ಅಮಿನಿಯ (Mahsa Amini) ಬಂಧನದಿಂದ ಉಂಟಾದ ಎರಡು ತಿಂಗಳ ಪ್ರತಿಭಟನೆಗಳ ನಂತರ ಇರಾನ್ (Iran) ತನ್ನ ನೈತಿಕ ಪೊಲೀಸ್ ವ್ಯವಸ್ಥೆಯನ್ನು ರದ್ದುಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಟೆಹ್ರಾನ್‌ನಲ್ಲಿ ನೈತಿಕ ಪೊಲೀಸರು ಬಂಧಿಸಿದ ಮೂರು ದಿನಗಳ ನಂತರ ಸೆಪ್ಟೆಂಬರ್ 16 ರಂದು ಕುರ್ದಿಷ್ ಮೂಲದ 22 ವರ್ಷದ ಮಹ್ಸಾ ಅಮಿನಿ ಸಾವಿಗೀಡಾಗಿದ್ದಳು. ಈಕೆಯ ಸಾವಿನ ನಂತರ ಮಹಿಳೆಯರು ಇರಾನ್ ನಾದ್ಯಂತ ಭಾರೀ ಪ್ರತಿಭಟನೆಗಳನ್ನು ನಡೆಸಿದ್ದು, ಅಧಿಕಾರಿಗಳು ಇದನ್ನು ಗಲಭೆ ಎಂದು ಕರೆದಿದ್ದರು. ನೈತಿಕ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ ಅದನ್ನು ರದ್ದುಗೊಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಹೇಳಿದ್ದಾರೆಂದು ISNA ಸುದ್ದಿ ಸಂಸ್ಥೆ ವರದಿ ಮಾಡಿದೆ. ಧಾರ್ಮಿಕ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು ನೈತಿಕ ಪೊಲೀಸರನ್ನು ಏಕೆ ರದ್ದು ಮಾಡಿಲ್ಲ ಎಂದು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ನೈತಿಕ ಪೊಲೀಸರನ್ನು ಔಪಚಾರಿಕವಾಗಿ ಗಶ್ಟ್-ಇ ಇರ್ಷಾದ್ ಅಥವಾ “ಮಾರ್ಗದರ್ಶನ ಪೆಟ್ರೋಲ್” ಎಂದು ಕರೆಯಲಾಗುತ್ತದೆ. ನಮ್ರತೆ ಮತ್ತು ಹಿಜಾಬ್ ಸಂಸ್ಕೃತಿಯನ್ನು ಪಸರಿಸುವುದಕ್ಕಾಗಿ ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜಾದ್ ಈ ಪಡೆಯನ್ನು ಸ್ಥಾಪಿಸಿದ್ದರು. ಇಲ್ಲಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ.2006ರಿಂದ ಈ ಪಡೆ ಕಾರ್ಯ ನಿರ್ವಹಿಸಲು ಆರಂಭಿಸಿತ್ತು.

ಮಹಿಳೆಯರು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಎಂಬ ಕಾನೂನನ್ನು ಬದಲಾಯಿಸುವ ಅಗತ್ಯವಿದೆಯೇ ಎಂಬ ವಿಷಯದಲ್ಲಿ ಸಂಸತ್ ಮತ್ತು ನ್ಯಾಯಾಂಗ ಎರಡೂ ಕೆಲಸ ಮಾಡುತ್ತಿವೆ ಎಂದು ಮೊಂಟಾಜೆರಿ ಹೇಳಿದ ಒಂದು ದಿನದ ನಂತರ ಈ ಘೋಷಣೆ ಬಂದಿದೆ.
ಅಧ್ಯಕ್ಷ ಇಬ್ರಾಹಿಂ ರೈಸಿ ಶನಿವಾರ ದೂರದರ್ಶನಕ್ಕೆ ನೀಡಿದ ಹೇಳಿಕೆಯಲ್ಲಿ ಇರಾನ್‌ನ ಗಣರಾಜ್ಯ ಮತ್ತು ಇಸ್ಲಾಮಿಕ್ ಅಡಿಪಾಯಗಳು ಸಾಂವಿಧಾನಿಕವಾಗಿ ಬೇರೂರಿದೆ. ಆದರೆ ಹೊಂದಿಕೊಳ್ಳುವ ಸಂವಿಧಾನವನ್ನು ಅನುಷ್ಠಾನಗೊಳಿಸುವ ವಿಧಾನಗಳಿವೆ ಎಂದಿದ್ದಾರೆ.
ಅಮೆರಿಕ ಬೆಂಬಲಿತ ರಾಜಪ್ರಭುತ್ವವನ್ನು ಉರುಳಿಸಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಅನ್ನು ಸ್ಥಾಪಿಸಿದ 1979 ರ ಕ್ರಾಂತಿಯ ನಂತರ ನಾಲ್ಕು ವರ್ಷಗಳ ನಂತರ ಹಿಜಾಬ್ ಕಡ್ಡಾಯವಾಯಿತು.15 ವರ್ಷಗಳ ಹಿಂದೆ ಮಹಿಳೆಯರನ್ನು ಬಂಧಿಸಲು ಪ್ರಾರಂಭಿಸುವ ಮೊದಲು ನೈತಿಕ ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ಎಚ್ಚರಿಕೆಗಳನ್ನು ನೀಡಿದ್ದರು.

ವಿಶೇಷವಾಗಿ ಮಾಜಿ ಮಧ್ಯಮ ಅಧ್ಯಕ್ಷ ಹಸನ್ ರೌಹಾನಿ ಅವರ ಅಡಿಯಲ್ಲಿ ವಸ್ತ್ರ ಸಂಹಿತೆ ಕ್ರಮೇಣ ಬದಲಾದವು. ನಂತರ ಮಹಿಳೆಯರು ಬಿಗಿಯಾದ ಜೀನ್ಸ್‌ ಧರಿಸಿ, ವರ್ಣರಂಜಿತ ಹಿಜಾಬ್ ಧರಿಸತೊಡಗಿದರು. ಆದರೆ ಈ ವರ್ಷ ಜುಲೈನಲ್ಲಿ ಅವರ ಉತ್ತರಾಧಿಕಾರಿ, ಅಲ್ಟ್ರಾ-ಕನ್ಸರ್ವೇಟಿವ್ ರೈಸಿ, ಹಿಜಾಬ್ ಕಡ್ಡಾಯವಾಗಿ ಜಾರಿಗೊಳಿಸಲು ಎಲ್ಲಾ ರಾಜ್ಯ ಸಂಸ್ಥೆಗಳನ್ನು ಸಜ್ಜುಗೊಳಿಸಲು ಕರೆ ನೀಡಿದರು.
“ಇರಾನ್ ಮತ್ತು ಇಸ್ಲಾಂನ ಶತ್ರುಗಳು ಭ್ರಷ್ಟಾಚಾರವನ್ನು ಹರಡುವ ಮೂಲಕ ಸಮಾಜದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ರೈಸಿ ಆ ಸಮಯದಲ್ಲಿ ಆರೋಪಿಸಿದರು.ಇದರ ಹೊರತಾಗಿಯೂ, ಅನೇಕ ಮಹಿಳೆಯರು ನಿಯಮಗಳನ್ನು ಖಂಡಿಸಿ, ಪ್ರತಿಭಟನೆ ನಡೆಸಿದರು.

 

Published On - 5:27 pm, Sun, 4 December 22