
ಟೆಹರಾನ್, ಜನವರಿ 2: ಇರಾನ್ ದೇಶದಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ (Iran people protest) ಹೆಚ್ಚುತ್ತಿದೆ. ಭಾನುವಾರ ಶುರುವಾದ ಪ್ರತಿಭಟನೆಗಳಲ್ಲಿ ಬಲಿಯಾದವರ ಸಂಖ್ಯೆ ಏಳು ದಾಟಿದೆ. ಆರ್ಥಿಕ ಸಂಕಷ್ಟ ಮತ್ತು ಹಣದುಬ್ಬರದಿಂದ ಜರ್ಝರಿತವಾಗಿರುವ ದೇಶದ ಈ ಹೀನಾಯ ಸ್ಥಿತಿಗೆ ಸರ್ಕಾರವನ್ನು ಹೊಣೆಯಾಗಿಸಿ, ಇರಾನ್ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರಗೊಳ್ಳುತ್ತಿದೆ.
ಹತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಇರಾನ್ನ ವರ್ತಕರು, ಅಂಗಡಿ ಮಾಲೀಕರೂ ಕೂಡ ಜೊತೆಯಾಗಿದ್ಧಾರೆ. ಅನೇಕ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಬಂದ್ ಮಾಡಿವೆ.
ಇರಾನ್ನ ಹಲವು ನಗರಗಳಲ್ಲಿ ಜನರು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಲವೆಡೆ ಇಸ್ಲಾಮಿಕ್ ರಿಪಬ್ಲಿಕ್ನ ಧ್ವಜಗಳನ್ನು ಸುಡಲಾಗುತ್ತಿದೆ. ‘ಮುಲ್ಲಾ ಮರೆಯಾಗುವವರೆಗೂ ಈ ನೆಲ ಮುಕ್ತವಾಗುವುದಿಲ್ಲ’ ಎನ್ನುವಂತಹ ಘೋಷವಾಕ್ಯಗಳು ಕೇಳಿಬರುತ್ತಿವೆ ಎನ್ನಲಾಗಿದೆ.
ಇದನ್ನೂ ಓದಿ: ದೇಶದ್ರೋಹ ಆರೋಪಿ ಉಮರ್ ಖಾಲೀದ್ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳಿಂದಲೂ ಬೆಂಬಲ
‘ಮುಲ್ಲಾಗಳು ಇರಾನ್ನಿಂದ ತೊಲಗಬೇಕು’; ‘ನಿರಂಕುಶ ಪ್ರಭುತ್ವಕ್ಕೆ ಸಾವಾಗಲಿ’ ಎಂಬಿತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗುತ್ತಿದ್ದಾರೆ ಎಂದು ಪತ್ರಕರ್ತೆ ಮಸಿಹ್ ಅಲಿನೇಜಾದ್ ಅವರು ಟ್ವೀಟ್ ಮಾಡಿದ್ದಾರೆ. ಈಕೆಯ ಪ್ರಕಾರ, ಜನರು ತಮ್ಮ ದೇಶ ಇಸ್ಲಾಮಿಕ್ ರಿಪಬ್ಲಿಕ್ ಆಗಿ ಉಳಿಯಬಾರದು ಎಂದು ಬಯಸುತ್ತಿದ್ದಾರೆ.
ಪರಮಾಣು ಶಸ್ತ್ರ ವಿಚಾರವಾಗಿ ಅಮೆರಿಕ ದೇಶವು ಇರಾನ್ ಮೇಲೆ ಕಟ್ಟುನಿಟ್ಟಾದ ಆರ್ಥಿಕ ನಿಷೇಧ ಹಾಕಿದೆ. ದೀರ್ಘಕಾಲದಿಂದ ನಿಷೇಧ ಇರುವ ಕಾರಣ ಇರಾನ್ ದೇಶದ ಆರ್ಥಿಕತೆ ಬಹಳ ಹೀನಾಯ ಪರಿಸ್ಥಿತಿಯಲ್ಲಿದೆ. ಇಲ್ಲಿ ಬೆಲೆ ಏರಿಕೆ ಅಥವಾ ಹಣದುಬ್ಬರ ಶೇ. 52ರಷ್ಟಿದೆ. ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ.
ಇದನ್ನೂ ಓದಿ: ಸ್ವಿಜರ್ಲೆಂಡ್ ಬಾರ್ನಲ್ಲಿ ಬೆಂಕಿ ಅವಘಡ; ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಇರಾನ್ನ ರಿಯಾಲ್ ಕರೆನ್ಸಿ ತೀರಾ ಮೌಲ್ಯ ಕಳೆದುಕೊಂಡಿದೆ. ಒಂದು ಡಾಲರ್ಗೆ 14 ಲಕ್ಷ ರಿಯಾಲ್ ಬೆಲೆ ಇದೆ. ಒಂದು ರುಪಾಯಿಗೆ ಸುಮಾರು 14,000 ರಿಯಾಲ್ ಆಗಬಹುದು. ಈ ಕಾರಣಕ್ಕೂ ಇರಾನ್ನಲ್ಲಿ ಹಣದುಬ್ಬರ ಬಹಳ ಉಚ್ಚ ಮಟ್ಟದಲ್ಲಿದೆ. ಇರಾನ್ನಲ್ಲಿ ಅಡಳಿತ ವಿರೋಧಿ ಅಲೆ ಏಳಲು ಇವು ಪ್ರಮುಖ ಕಾರಣಗಳಾಗಿವೆ. ಹಾಗೆಯೇ, ಇರಾನ್ನಲ್ಲಿ ಇಸ್ಲಾಮ್ ಮೂಲಭೂತವಾದದ ವಿರುದ್ಧವೂ ಜನರು ಬಂಡಾಯ ಏಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ