ಇಸ್ರೇಲ್ ಇರಾನ್ ಸಂಘರ್ಷ; ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರಿಕೆಯ ಹೆಜ್ಜೆಗಳಿಡುತ್ತಿರುವ ಎರಡು ದೇಶಗಳು

|

Updated on: Apr 21, 2024 | 1:35 PM

Israel-Iran conflict: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಪೂರ್ಣಪ್ರಮಾಣದ ಯುದ್ಧಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಕೆಲ ಹಿಂದಿನ ದಿನಗಳವರೆಗೂ ಇತ್ತು. ಆದರೆ, ಎರಡೂ ದೇಶಗಳು ಅತಿರೇಕದ ಹೇಳಿಕೆಗಳನ್ನು ಕಡಿಮೆ ಮಾಡುವ ಮೂಲಕ ಸಂಘರ್ಷ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿವೆ. ಇದೇ ವೇಳೆ, ಇಸ್ರೇಲ್ ರಕ್ಷಣಾ ವ್ಯವಸ್ಥೆ ಬಲಪಡಿಸಲು ಅಮೆರಿಕ 13 ಬಿಲಿಯನ್ ಡಾಲರ್ ಹಣದ ನೆರವು ಬಿಡುಗಡೆ ಮಾಡಲಿದೆ. ಈ ಸಂಬಂಧ ಮಸೂದೆಯನ್ನು ಅಮೆರಿಕ ಸಂಸತ್ತು ಅಂಗೀಕರಿಸಿದೆ.

ಇಸ್ರೇಲ್ ಇರಾನ್ ಸಂಘರ್ಷ; ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರಿಕೆಯ ಹೆಜ್ಜೆಗಳಿಡುತ್ತಿರುವ ಎರಡು ದೇಶಗಳು
ಇಸ್ರೇಲ್ ರಕ್ಷಣಾ ವ್ಯವಸ್ಥೆ
Follow us on

ವಾಷಿಂಗ್ಟನ್, ಏಪ್ರಿಲ್ 21: ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ತಿಕ್ಕಾಟ (Israel-Iran conflict) ಮತ್ತು ಸಣ್ಣ ಪ್ರಮಾಣದ ಸಂಘರ್ಷ ಅತಿರೇಕಕ್ಕೆ ಹೋಗದಂತೆ ಎರಡೂ ದೇಶಗಳು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿರುವಂತಿದೆ. ಮೊದಲಿಗೆ ಇರಾನೀ ರಾಯಭಾರಿ ಕಚೇರಿ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಆಗಿತ್ತು. ಅದಕ್ಕೆ ಪ್ರತೀಕಾರವಾಗಿ ಇಸ್ರೆಲ್ ಮೇಲೆ ಇರಾನ್​ನಿಂದ ನೂರಾರು ಡ್ರೋನ್ ಮತ್ತು ಕ್ಷಿಪಣಿಗಳ ಮಳೆ ಸುರಿದವು. ಇಸ್ರೇಲ್​ನ ರಕ್ಷಣಾ ಕವಚ ಈ ಕ್ಷಿಪಣಿಗಳನ್ನು ಬಹಳ ದೂರದಲ್ಲೇ ನಾಶ ಮಾಡಿದವು. ಅದಾದ ಬಳಿಕ ಇಸ್ರೇಲ್​ನಿಂದ ಇರಾನ್ ಮೇಲೆ ಪ್ರತಿದಾಳಿ ಆಗಿದೆ. ಈ ಘಟನೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇತ್ತು. ಆದರೆ, ಅಂಥದ್ದೇನೂ ಸದ್ಯಕ್ಕೆ ಆಗಿಲ್ಲ.

ಡ್ರೋನ್ ಮತ್ತು ಕ್ಷಿಪಣಿ ದಾಳಿ ಬಳಿಕ ತನ್ನ ಉದ್ದೇಶ ನೆರವೇರಿತು ಎಂದು ಹೇಳಿದ್ದ ಇರಾನ್, ಇಸ್ರೇಲ್​ನಿಂದ ಮರುದಾಳಿಯಾದರೆ ಹೊಸ ಅನಾಹುತಗಳನ್ನು ಸೃಷ್ಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಆದರೂ ಇಸ್ರೇಲ್​ನಿಂದ ಕ್ಷಿಪಣಿ ದಾಳಿಯಾಯಿತು ಎನ್ನಲಾಗಿದೆ. ಇಸ್ರೇಲ್​ನಿಂದ ಪ್ರತಿದಾಳಿ ಆಗಿರುವುದನ್ನು ಇರಾನ್ ನಿರಾಕರಿಸುವ ಮೂಲಕ ಸಂಘರ್ಷ ಮುಂದುವರಿಸುವ ಉದ್ದೇಶ ತನ್ನನ್ನಿಲ್ಲ ಎಂಬುದನ್ನು ವೇದ್ಯಪಡಿಸಿದೆ. ಇಸ್ರೇಲ್ ಕೂಡ ಈ ಪ್ರತಿದಾಳಿ ಬಗ್ಗೆ ಅತಿರೇಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಇದರಿಂದ ಯುದ್ಧ ಸೂಕ್ಷ್ಮ ಪರಿಸ್ಥಿತಿ ಸದ್ಯಕ್ಕೆ ತಿಳಿಗೊಂಡಿದೆ.

ಇದನ್ನೂ ಓದಿ: Israel-Iran War: ಮುಯ್ಯಿಗೆ ಮುಯ್ಯಿ, ಇಸ್ರೇಲ್​ನಿಂದ ಇರಾನ್​ ಮೇಲೆ ಕ್ಷಿಪಣಿ ದಾಳಿ

‘ಕಳೆದ ರಾತ್ರಿ ನಡೆದದ್ದು ಒಂದು ದಾಳಿಯೇ ಅಲ್ಲ. ಎರಡೋ ಮೂರೋ ಕ್ವಾಡ್​ಕಾಪ್ಟರ್​ಗಳು ಹಾರಾಡಿದ್ದವು. ಇರಾನ್​ನಲ್ಲಿ ನಮ್ಮ ಮಕ್ಕಳು ಬಳಸುವ ಆಟಿಕೆಗಳ ಮಟ್ಟದವು ಅವು. ಇರಾನ್​ಗೆ ಅಪಾಯಕಾರಿಯಾಗುವಂತಹ ಯಾವುದೇ ಸಾಹಸಕ್ಕೆ ಇಸ್ರೇಲ್ ಕೈಹಾಕದೇ ಇದ್ದರೆ ನಾವೇನೂ ಸ್ಪಂದಿಸುವುದಿಲ್ಲ,’ ಎಂದು ಇರಾನ್ ವಿದೇಶಾಂಗ ಸಚಿವ ಹೊಸೇನ್ ಆಮಿರ್ ಅಬ್ದೊಲ್ಲಾಹಿಯನ್ ಹೇಳಿದ್ದರು.

ಇಸ್ರೇಲ್ ರಕ್ಷಣಾ ವ್ಯವಸ್ಥೆಗೆ ಅಮೆರಿಕ ಇನ್ನಷ್ಟು ನೆರವು

ಇಸ್ರೇಲ್​ನ ಐರನ್ ಡೋಮ್ ಏರ್ ಡಿಫೆನ್ಸ್ ಸಿಸ್ಟಂ ಸೇರಿದಂತೆ ರಕ್ಷಣಾ ವ್ಯವಸ್ಥೆ ಬಲಪಡಿಸಲು ಅಮೆರಿಕ ಹೊಸ ಧನಸಹಾಯಕ್ಕೆ ಸಮ್ಮತಿಸಿದೆ. 13 ಬಿಲಿಯನ್ ಡಾಲರ್​ನಷ್ಟು ಹಣದ ನೆರವನ್ನು ಅಮೆರಿಕ ನೀಡಲಿದೆ. ಈ ಸಂಬಂಧ ಮಸೂದೆಗೆ ಅಮೆರಿಕದ ಸಂಸತ್ತು ಅನುಮೋದಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಕ್ಷಿಪಣಿ ಯೋಜನೆಗೆ ಸಹಾಯವಾದ ಚೀನಾ, ಬೆಲಾರಸ್ ಕಂಪನಿಗಳಿಗೆ ಅಮೆರಿಕದ ನಿಷೇಧ

ಇನ್ನೊಂದೆಡೆ ಇಸ್ರೇಲ್ ರಕ್ಷಣಾ ವ್ಯವಸ್ಥೆ ಬಲಪಡಿಸಲು ಅಮೆರಿಕ ನೆರವು ನೀಡುತ್ತಿರುವ ಕ್ರಮವನ್ನು ಪ್ಯಾಲನೀ ಅಧ್ಯಕ್ಷರು ಖಂಡಿಸಿದ್ದಾರೆ. ಅಮೆರಿಕದ ಈ ಹಣವು ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸಾವಿರಾರು ಪ್ಯಾಲಸ್ಟೀನೀಯರ ಸಾವಿಗೆ ಕಾರಣವಾಗುತ್ತದೆ ಎಂದು ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮುದ್ ಅಬ್ಬಾಸ್ ಅವರ ವಕ್ತಾರ ನಬಿಲ್ ಅಬು ರುಡೇನಾ ಹೇಳಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ