ಸೊಮಾಲಿಲ್ಯಾಂಡ್​ಗೆ ಮಾನ್ಯತೆ ಕೊಟ್ಟ ವಿಶ್ವದ ಏಕೈಕ ದೇಶ ಇಸ್ರೇಲ್; ಯಾವುದಿದು ಆಫ್ರಿಕನ್ ನಾಡು?

Israel becomes first country to recognize Somaliland: 1991ರಲ್ಲಿ ಸೊಮಾಲಿಯಾದಿಂದ ಪ್ರತ್ಯೇಕಗೊಂಡಿದ್ದ ಸೊಮಾಲಿಲ್ಯಾಂಡ್ ಅನ್ನು ಪ್ರತ್ಯೇಕ ದೇಶವೆಂದು ಇಸ್ರೇಲ್ ಮಾನ್ಯ ಮಾಡಿದೆ. ಹಾಗೆ ಅಧಿಕೃತವಾಗಿ ಒಪ್ಪಿಕೊಂಡ ವಿಶ್ವದ ಏಕೈಕ ದೇಶ ಇಸ್ರೇಲ್. ಸೊಮಾಲಿಲ್ಯಾಂಡ್ ಯಾಕೆ ಸೊಮಾಲಿಯಾದಿಂದ ಬೇರೆಯಾಯಿತು? ಅದರ ಅಸ್ತಿತ್ವದ ಪ್ರಾಮುಖ್ಯ ಏನು ಇತ್ಯಾದಿ ವಿವರ ಇಲ್ಲಿದೆ.

ಸೊಮಾಲಿಲ್ಯಾಂಡ್​ಗೆ ಮಾನ್ಯತೆ ಕೊಟ್ಟ ವಿಶ್ವದ ಏಕೈಕ ದೇಶ ಇಸ್ರೇಲ್; ಯಾವುದಿದು ಆಫ್ರಿಕನ್ ನಾಡು?
ಸೊಮಾಲಿಲ್ಯಾಂಡ್

Updated on: Dec 27, 2025 | 7:53 PM

ಟೆಲ್ ಅವಿವ್, ಡಿಸೆಂಬರ್ 27: ದಶಕಗಳ ಹಿಂದೆ ಸೊಮಾಲಿಯಾ ದೇಶದಿಂದ ಪ್ರತ್ಯೇಕಗೊಂಡಿದ್ದ ಸೊಮಾಲಿಲ್ಯಾಂಡ್ (Somaliland) ಅನ್ನು ಸ್ವತಂತ್ರ ದೇಶ ಎಂದು ಇಸ್ರೇಲ್ ಮಾನ್ಯ ಮಾಡಿದೆ. ಸೋಮಾಲಿಲ್ಯಾಂಡ್​ಗೆ ಅಧಿಕೃತ ದೇಶವೆಂಬ ಮಾನ್ಯತೆ ಕೊಟ್ಟ ಮೊದಲ ದೇಶವೂ ಇಸ್ರೇಲ್ ಆಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರ ಕಚೇರಿಯು ಈ ವಿಚಾರವನ್ನು ಪ್ರಕಟಿಸಿದ್ದು, ಸೋಮಾಲಿಲ್ಯಾಂಡ್ ಜೊತೆ ಇಸ್ರೇಲ್ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುತ್ತದೆ ಎಂದು ಘೋಷಿಸಿದೆ. ಆದರೆ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದ ಹಲವು ದೇಶಗಳು ಇದನ್ನು ಬಲವಾಗಿ ವಿರೋಧಿಸಿವೆ.

ಸೋಮಾಲಿಲ್ಯಾಂಡ್ ಅಧ್ಯಕ್ಷ ಅಬ್ದಿರಹಮಾನ್ ಮೊಹಮ್ಮದ್ ಅಬ್ದುಲ್ಲಾಹಿ ಅವರು ಇಸ್ರೇಲ್ ಬೆಂಬಲವನ್ನು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ್ದಾರೆ. ಅಬ್ದಿರಹಮಾನ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಇಸ್ರೇಲ್ ಪ್ರಧಾನಿಯವರು, ಸೊಮಾಲಿಲ್ಯಾಂಡ್ ಜನತೆಗೆ ಶುಭ ಹಾರೈಕೆ ಮಾಡಿದ್ದಾರೆ. ಆದರೆ, ಸೊಮಾಲಿಲ್ಯಾಂಡ್ ಅನ್ನು ಪ್ರತ್ಯೇಕ ದೇಶವೆಂದು ಮಾನ್ಯ ಮಾಡಿದ ಇಸ್ರೇಲ್ ಕ್ರಮವನ್ನು ಸೊಮಾಲಿಯಾ ಹಾಗೂ ಆಫ್ರಿಕನ್ ಯೂನಿಯನ್ ಬಲವಾಗಿ ವಿರೋಧಿಸಿವೆ. ಸೊಮಾಲಿಲ್ಯಾಂಡ್ ಸೊಮಾಲಿಯಾದ ಅವಿಭಾಜ್ಯ ಅಂಗ ಎಂದು ಆಫ್ರಿಕನ್ ಒಕ್ಕೂಟ ಹೇಳಿದೆ.

ಇದನ್ನೂ ಓದಿ: ಕಠಿಣ ಶಿಕ್ಷೆಯಾಗಲಿ; ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಅಲ್ಪಸಂಖ್ಯಾತರ ಹಿಂಸಾಚಾರಕ್ಕೆ ಭಾರತ ಖಂಡನೆ

ಯಾವುದಿದು ಸೊಮಾಲಿಲ್ಯಾಂಡ್?

ಸೊಮಾಲಿಲ್ಯಾಂಡ್ 1991ರಲ್ಲಿ ಸೊಮಾಲಿಯಾ ಬಿಕ್ಕಟ್ಟಿನ ವೇಳೆ ಪ್ರತ್ಯೇಕಗೊಂಡ ಪ್ರದೇಶ. ಇದು ಗಲ್ಫ್ ಪ್ರದೇಶದ ಕೆಳಗೆ ಇದೆ. ಗಲ್ಫ್ ಪ್ರದೇಶಕ್ಕೂ ಸೊಮಾಲಿಲ್ಯಾಂಡ್​ಗೂ ನಡುವೆ ಗಲ್ಫ್ ಆಫ್ ಏಡನ್ ಬರುತ್ತದೆ. ಇದು ಬಹಳ ಕಿರಿದಾದ ಸಮುದ್ರ ಮಾರ್ಗವಾಗಿದೆ. ನಿತ್ಯವೂ ನೂರಾರು ಹಡಗುಗಳು ಇಲ್ಲಿ ಹಾದು ಹೋಗುತ್ತವೆ. ಜಾಗತಿಕ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಲು ಈ ಮಾರ್ಗ ಸುರಕ್ಷಿತವಾಗಿರಬೇಕು. ಹಾಗಾಗಿ, ಈ ಸೋಮಾಲಿಲ್ಯಾಂಡ್ ವಿಚಾರ ಪ್ರಸಕ್ತ ಬಹಳ ಮುಖ್ಯ.

1991ರಲ್ಲಿ ಸೊಮಾಲಿಲ್ಯಾಂಡ್ ಸ್ವಯಂ ಆಗಿ ಪ್ರತ್ಯೇಕ ದೇಶವೆಂದು ಘೋಷಿಸಿಕೊಂಡಿತು. ಮೂರು ದಶಕಗಳ ಕಾಲ ಸ್ವತಂತ್ರವಾಗಿಯೇ ಅಸ್ತಿತ್ವದಲ್ಲಿದೆ. ಅದರದ್ದೇ ಸ್ವಂತ ಸರ್ಕಾರ, ಸಂವಿಧಾನ, ಕರೆನ್ಸಿ, ಪಾಸ್​ಪೋರ್ಟ್, ಭದ್ರತಾ ಪಡೆಗಳು ಹೀಗೆ ಎಲ್ಲಾ ವ್ಯವಸ್ಥೆ ಇದೆ. ಚುನಾವಣೆಗಳು ನಡೆಯುತ್ತವೆ. ಸೊಮಾಲಿಯಾದಲ್ಲಿ ಇರುವಂತೆ ಸೊಮಾಲಿಲ್ಯಾಂಡ್​ನಲ್ಲಿ ಸಿವಿಲ್ ವಾರ್ ಇತ್ಯಾದಿ ಬಿಕ್ಕಟ್ಟು ಇಲ್ಲದೆ ಶಾಂತಿಯುತವಾಗಿದೆ.

ಇದನ್ನೂ ಓದಿ: ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್​ಪಿ ನಾಯಕ ತಾರಿಖ್ ರಹಮಾನ್

ಆದರೆ, ಸೊಮಾಲಿಲ್ಯಾಂಡ್​ಗೆ ಪ್ರಮುಖ ಸಮಸ್ಯೆ ಇರುವುದು ಇದಕ್ಕೆ ಇಲ್ಲದ ಅಂತಾರಾಷ್ಟ್ರೀಯ ಮಾನ್ಯತೆ. ವಿಶ್ವಬ್ಯಾಂಕ್ ಇತ್ಯಾದಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಧನಸಹಾಯ ಸಿಕ್ಕುವುದಿಲ್ಲ. ಹೀಗಾಗಿ, ಸೋಮಾಲಿಲ್ಯಾಂಡ್​ನಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿಲ್ಲ. ಹಲವು ದೇಶಗಳು ಸೊಮಾಲಿಲ್ಯಾಂಡ್ ಜೊತೆ ಬೇರೆ ಬೇರೆ ರೂಪಗಳಲ್ಲಿ ಸಂಬಂಧ ಹೊಂದಿವೆಯಾದರೂ ಯಾವುವೂ ಕೂಡ ಅದನ್ನು ಸ್ವತಂತ್ರ ದೇಶವೆಂದು ಅಧಿಕೃತವಾಗಿ ಮಾನ್ಯ ಮಾಡಿಲ್ಲ. ಹಾಗೆ ಮಾಡಿದ ಮೊದಲ ದೇಶ ಇಸ್ರೇಲ್ ಆಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ