ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧದಲ್ಲಿ 40 ಜನ ಸಾವು; ಈ ಬಿಕ್ಕಟ್ಟು ಶುರುವಾಗಿದ್ದು ಹೇಗೆ?
Israel- Palestine War: ಇಸ್ರೇಲ್‌ನಲ್ಲಿ ಇಂದು ರಾಕೆಟ್ ದಾಳಿಯ ನಂತರ 40 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ವಾಯುದಾಳಿ ಮಾಡಿ 161 ಪ್ಯಾಲೆಸ್ತೀನಿಯನ್ನರನ್ನು ಕೊಂದಿದ್ದು, 1000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇಸ್ರೇಲ್‌ನಲ್ಲಿ ಯುದ್ಧ ಉಂಟಾಗಲು ಕಾರಣವೇನು? ಇಲ್ಲಿಯವರೆಗೂ ಏನೆಲ್ಲ ಆಯಿತು? ಎಂಬುದರ ಟೈಮ್ಲೈನ್ ಇಲ್ಲಿದೆ...
ಇಸ್ರೇಲ್‌ನಲ್ಲಿ ರಾಕೆಟ್ ದಾಳಿ
Image Credit source: cnbctv18.com
ಇಸ್ರೇಲ್‌ನಲ್ಲಿ ಯುದ್ಧ ಶುರುವಾಗಿದೆ. ಇಂದು ಬೆಳಗ್ಗೆ ಗಾಜಾದಿಂದ 5000 ರಾಕೆಟ್‌ಗಳನ್ನು ಉಡಾವಣೆ ಮಾಡಲಾಗಿದ್ದು, ಇದಾದ ಬಳಿಕ ಇಸ್ರೇಲ್ ಯುದ್ಧದ ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಚಳುವಳಿ ಹಮಾಸ್ ಶನಿವಾರ ಮುಂಜಾನೆ ಇಸ್ರೇಲ್ ಮೇಲೆ ತನ್ನ ಅತಿದೊಡ್ಡ ದಾಳಿಯನ್ನು ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ ಇಸ್ರೇಲ್ನಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರ ವಹಿಸಲು ಸೂಚಿಸಿದ್ದಾರೆ. ಇಸ್ರೇಲ್‌ನಲ್ಲಿ ಇಂದು ರಾಕೆಟ್ ದಾಳಿಯ ನಂತರ 40 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ವಾಯುದಾಳಿ ಮಾಡಿ 161 ಪ್ಯಾಲೆಸ್ತೀನಿಯನ್ನರನ್ನು ಕೊಂದಿದ್ದು, 1000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇಸ್ರೇಲ್‌ನಲ್ಲಿ ಯುದ್ಧ ಉಂಟಾಗಲು ಕಾರಣವೇನು? ಇಲ್ಲಿಯವರೆಗೂ ಏನೆಲ್ಲ ಆಯಿತು? ಎಂಬುದರ ಟೈಮ್ಲೈನ್ ಇಲ್ಲಿದೆ…
- ಇಸ್ರೇಲ್ ಅನ್ನು 1948ರ ಮೇ 14ರಂದು ರಚಿಸಲಾಯಿತು. ಇದು 2ನೇ ಮಹಾಯುದ್ಧ ನಡೆದ 3 ವರ್ಷಗಳ ನಂತರ ಪ್ಯಾಲೆಸ್ತೀನ್ನ ಭಾಗದಿಂದ ರೂಪುಗೊಂಡ ದೇಶವಾಗಿದೆ. ಇದಾದ ತಕ್ಷಣವೇ ಇಸ್ರೇಲ್ ಮೇಲೆ ನೆರೆಯ ಅರಬ್ ದೇಶಗಳು ದಾಳಿ ನಡೆಸುತ್ತವೆ. ಆದರೆ, ಇಸ್ರೇಲ್ ಅವರೆಲ್ಲರನ್ನೂ ಎದುರಿಸುತ್ತದೆ. ಈ ವೇಳೆ 7,60,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಇಸ್ರೇಲ್ನಿಂದ ಪಲಾಯನ ಮಾಡಬೇಕಾಗುತ್ತದೆ.
- 1956ರಲ್ಲಿ ಇಸ್ರೇಲ್ ಬ್ರಿಟನ್ ಮತ್ತು ಫ್ರಾನ್ಸ್ ಜೊತೆ ಈಜಿಪ್ಟ್ ಮೇಲೆ ಆಕ್ರಮಣ ಮಾಡಿತು. 1967ರಲ್ಲಿ ಇಸ್ರೇಲ್ 6 ದಿನಗಳ ಯುದ್ಧ ನಡೆಸಿ ಅರಬ್ ದೇಶಗಳ ವಿರುದ್ಧ ಜಯ ಸಾಧಿಸಿತು. ಈ ವೇಳೆ ಜೋರ್ಡಾನ್‌ನಿಂದ ಪೂರ್ವ ಜೆರುಸಲೆಂ, ಸಿರಿಯಾದಿಂದ ಗೋಲನ್ ಹೈಟ್ಸ್ ಮತ್ತು ಗಾಜಾ ಪಟ್ಟಿ ಮತ್ತು ಈಜಿಪ್ಟ್‌ನಿಂದ ಸಿನೈ ದ್ವೀಪವನ್ನು ಒಳಗೊಂಡಂತೆ ಪಶ್ಚಿಮ ದಂಡೆಯನ್ನು ವಶಪಡಿಸಿಕೊಂಡಿತು.
- 2005ರಲ್ಲಿ ಇಸ್ರೇಲ್ 38 ವರ್ಷಗಳ ಆಕ್ರಮಣದ ಬಳಿಕ ಗಾಜಾದಿಂದ ತನ್ನ ಎಲ್ಲ ಪಡೆಗಳನ್ನು ಹಿಂಪಡೆಯಿತು. ಪ್ಯಾಲೆಸ್ತೀನಿಯನ್ ಪ್ರಾಧಿಕಾರಕ್ಕೆ ಅದನ್ನು ಬಿಟ್ಟುಕೊಟ್ಟಿತು.
- 2006ರ ಜನವರಿ 25ರಂದು ಇಸ್ಲಾಮಿಸ್ಟ್ ಗುಂಪು ಹಮಾಸ್ ಪ್ಯಾಲೇಸ್ಟಿನಿಯನ್ ಶಾಸಕಾಂಗ ಚುನಾವಣೆಯಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದಿತು. ಹಮಾಸ್ ಉಗ್ರಗಾಮಿಗಳು ಗಾಜಾದಿಂದ ಗಡಿಯಾಚೆಗಿನ ದಾಳಿಯಲ್ಲಿ ಇಸ್ರೇಲಿ ಸೇನೆಯ ಗಿಲಾಡ್ ಶಾಲಿತ್‌ನನ್ನು ವಶಪಡಿಸಿಕೊಂಡರು. ಇದು ಇಸ್ರೇಲಿ ವೈಮಾನಿಕ ದಾಳಿಗಳು ಮತ್ತು ಆಕ್ರಮಣಕ್ಕೆ ಪ್ರೇರೇಪಣೆ ನೀಡಿತು. 5 ವರ್ಷಗಳ ನಂತರ ಖೈದಿಗಳ ವಿನಿಮಯದಲ್ಲಿ ಶಾಲಿತ್‌ನನ್ನು ಬಿಡುಗಡೆ ಮಾಡಲಾಗುತ್ತದೆ.
- 2007ರ ಜೂನ್ 14ರಂದು ಹಮಾಸ್ ಸಂಕ್ಷಿಪ್ತ ಅಂತರ್ಯುದ್ಧದಲ್ಲಿ ಗಾಜಾವನ್ನು ಸ್ವಾಧೀನಪಡಿಸಿಕೊಂಡಿತು.
- 2008ರ ಡಿಸೆಂಬರ್ 27ರಂದು ಇಸ್ರೇಲ್ ದಕ್ಷಿಣ ಇಸ್ರೇಲಿ ಪಟ್ಟಣವಾದ ಸ್ಡೆರೋಟ್‌ನಲ್ಲಿ ಪ್ಯಾಲೆಸ್ಟೀನಿಯನ್ನರು ರಾಕೆಟ್‌ಗಳನ್ನು ಹಾರಿಸಿದ ನಂತರ ಗಾಜಾದಲ್ಲಿ ಇಸ್ರೇಲ್ 22 ದಿನದ ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿತು. ಇದರಲ್ಲಿ ಸುಮಾರು 1,400 ಪ್ಯಾಲೆಸ್ಟೀನಿಯಾದವರು ಮತ್ತು 13 ಇಸ್ರೇಲಿಗಳು ಕೊಲ್ಲಲ್ಪಟ್ಟರು. ಬಳಿಕ ಕದನ ವಿರಾಮವನ್ನು ಒಪ್ಪಿಕೊಳ್ಳಲಾಯಿತು.
- 2012ರ ನವೆಂಬರ್ 14ರಂದು ಇಸ್ರೇಲ್ ಹಮಾಸ್‌ನ ಸೇನಾ ಮುಖ್ಯಸ್ಥ ಅಹ್ಮದ್ ಜಬಾರಿಯನ್ನು ಕೊಂದಿತು. 8 ದಿನಗಳ ಕಾಲ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ರಾಕೆಟ್ ಫೈರ್ ಮತ್ತು ಇಸ್ರೇಲಿ ವೈಮಾನಿಕ ದಾಳಿಗಳು ನಡೆದವು.
- 2014ರ ಜುಲೈ-ಆಗಸ್ಟ್ನಲ್ಲಿ ಹಮಾಸ್‌ನಿಂದ ಮೂವರು ಇಸ್ರೇಲಿ ಯುವಕರನ್ನು ಅಪಹರಣ ಮಾಡಿ, ಹತ್ಯೆ ಮಾಡಲಾಯಿತು. ಇದು 7 ವಾರಗಳ ಯುದ್ಧಕ್ಕೆ ದಾರಿ ಮಾಡಿಕೊಟ್ಟಿತು. ಈ ವೇಳೆ ಗಾಜಾದಲ್ಲಿ 2,100ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟರು ಮತ್ತು 73 ಇಸ್ರೇಲಿಗಳು ಹತ್ಯೆಗೀಡಾದರು.
- 2018ರ ಮಾರ್ಚ್ನಲ್ಲಿ ಇಸ್ರೇಲ್‌ನೊಂದಿಗೆ ಗಾಜಾದ ಬೇಲಿಯಿಂದ ಸುತ್ತುವರಿದ ಗಡಿಯಲ್ಲಿ ಪ್ಯಾಲೇಸ್ತೀನಿಯನ್ ಪ್ರತಿಭಟನೆಗಳು ಪ್ರಾರಂಭವಾದವು. ಪ್ರತಿಭಟನಾಕಾರರನ್ನು ಹಿಂದಕ್ಕೆ ಇಡಲು ಇಸ್ರೇಲಿ ಪಡೆಗಳು ಗುಂಡು ಹಾರಿಸಿತು. ಹಲವಾರು ತಿಂಗಳುಗಳ ಪ್ರತಿಭಟನೆಗಳಲ್ಲಿ 170ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದರು. ಇದು ಹಮಾಸ್ ಮತ್ತು ಇಸ್ರೇಲಿ ಪಡೆಗಳ ನಡುವೆ ದ್ವೇಷವನ್ನು ಹೆಚ್ಚಿಸಿತು.
- 2021ರ ಮೇಯಲ್ಲಿ ಮುಸ್ಲಿಮರ ಉಪವಾಸದ ತಿಂಗಳಾದ ರಂಜಾನ್‌ನಲ್ಲಿ ಇಸ್ಲಾಂನ ಮೂರನೇ ಪವಿತ್ರ ಸ್ಥಳವಾದ ಜೆರುಸಲೆಮ್‌ನ ಅಲ್ ಅಕ್ಸಾ ಕಾಂಪೌಂಡ್‌ನಲ್ಲಿ ಇಸ್ರೇಲಿ ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ನೂರಾರು ಪ್ಯಾಲೆಸ್ತೀನಿಯನ್ನರು ಗಾಯಗೊಂಡರು. ಇಸ್ರೇಲ್ ಆವರಣದಿಂದ ಭದ್ರತಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ ನಂತರ ಹಮಾಸ್ ಗಾಜಾದಿಂದ ಇಸ್ರೇಲ್‌ಗೆ ರಾಕೆಟ್‌ಗಳನ್ನು ಉಡಾವಣೆ ಮಾಡಿತು. ಈ ಹೋರಾಟವು 11 ದಿನಗಳವರೆಗೆ ನಡೆಯಿತು. ಗಾಜಾದಲ್ಲಿ ಕನಿಷ್ಠ 250 ಜನರು ಮತ್ತು ಇಸ್ರೇಲ್‌ನಲ್ಲಿ 13 ಜನರು ಸಾವನ್ನಪ್ಪಿದ್ದರು.
- 2022ರ ಆಗಸ್ಟ್ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯು ಹಿರಿಯ ಇಸ್ಲಾಮಿಕ್ ಜಿಹಾದ್ ಕಮಾಂಡರ್ ಅನ್ನು ಹೊಡೆದುರುಳಿಸಿದಾಗ ಪ್ರಾರಂಭವಾದ 3 ದಿನಗಳ ಹಿಂಸಾಚಾರದಲ್ಲಿ 15 ಮಕ್ಕಳು ಸೇರಿದಂತೆ ಕನಿಷ್ಠ 44 ಜನರು ಸಾವನ್ನಪ್ಪಿದರು.
- 2023ರ ಜನವರಿಯಲ್ಲಿ ಇಸ್ರೇಲಿ ಪಡೆಗಳು ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡಿ 7 ಪ್ಯಾಲೇಸ್ತೀನಿಯನ್ ಬಂದೂಕುಧಾರಿಗಳು ಮತ್ತು ಇಬ್ಬರು ನಾಗರಿಕರನ್ನು ಕೊಂದ ನಂತರ ಗಾಜಾದಲ್ಲಿ ಇಸ್ಲಾಮಿಕ್ ಜಿಹಾದ್ ಇಸ್ರೇಲ್ ಕಡೆಗೆ 2 ರಾಕೆಟ್‌ಗಳನ್ನು ಹಾರಿಸಿತು. ಆ ರಾಕೆಟ್‌ಗಳು ಗಡಿಯ ಸಮೀಪವಿರುವ ಇಸ್ರೇಲಿ ಸಮುದಾಯಗಳಲ್ಲಿ ಎಚ್ಚರಿಕೆಯನ್ನು ಹುಟ್ಟುಹಾಕಿದವು. ಆದರೆ ಯಾವುದೇ ಸಾವುನೋವುಗಳನ್ನು ಉಂಟುಮಾಡಲಿಲ್ಲ. ಇಸ್ರೇಲ್ ಗಾಜಾದ ಮೇಲೆ ವೈಮಾನಿಕ ದಾಳಿಯ ಮೂಲಕ ಪ್ರತ್ಯುತ್ತರ ನೀಡಿತು.
- 2023ರ ಅಕ್ಟೋಬರ್ನಲ್ಲಿ ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್‌ನ ಮೇಲೆ ಅತಿದೊಡ್ಡ ದಾಳಿಯನ್ನು ಪ್ರಾರಂಭಿಸಿತು. ಗಾಜಾದಿಂದ 5000 ರಾಕೆಟ್‌ಗಳನ್ನು ಉಡಾವಣೆ ಮಾಡಲಾಗಿದೆ. ಈ ದಾಳಿಯಲ್ಲಿ 40 ಜನರು ಮೃತಪಟ್ಟಿದ್ದಾರೆ. ಯುದ್ಧಕ್ಕೆ ಸನ್ನದ್ಧರಾಗಿರುವುದಾಗಿ ಇಸ್ರೇಲ್ ಘೋಷಿಸಿದೆ.
Published On - 6:18 pm, Sat, 7 October 23