ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಪ್ರತಿಕ್ರಿಯಿಸಲು ಭಾರತವು ಹೆದರಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದರು. ಉಕ್ರೇನ್ನ ಪ್ರಮುಖ ನಗರಗಳಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ರಷ್ಯಾ ದಾಳಿ ಆರಂಭಿಸಿ ಸುಮಾರು ಒಂದು ತಿಂಗಳಾಗುತ್ತಿದೆ. ‘ಕ್ವಾಡ್ ದೇಶಗಳ ಪೈಕಿ ಭಾರತ ಹೊರತುಪಡಿಸಿದರೆ ಜಪಾನ್ ಮತ್ತು ಆಸ್ಟ್ರೇಲಿಯಾಗಳು ಪುಟಿನ್ರ ಪುಂಡಾಟವನ್ನು ಕಟುವಾಗಿ ಖಂಡಿಸಿವೆ. ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಕಠಿಣ ಕ್ರಮಗಳನ್ನು ಜರುಗಿಸಬೇಕಿದೆ ಎಂದು ಬೈಡೆನ್ ಅಭಿಪ್ರಾಯಪಟ್ಟರು. ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳು ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ.
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅಮೆರಿಕ ಭಾರತವನ್ನು ಆಗ್ರಹಿಸಿತ್ತು. ಈ ಕುರಿತು ಭಾರತದ ಮೇಲೆ ಅಮೆರಿಕ ಸರ್ಕಾರ ಒತ್ತಡ ಹೇರಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅಮೆರಿಕ ಅಧ್ಯಕ್ಷರ ಕಚೇರಿಯ ವಕ್ತಾರರು, ‘ಈ ನಿಟ್ಟಿನಲ್ಲಿ ನಾವು ವಿವಿಧ ಹಂತಗಳಲ್ಲಿ ಭಾರತದ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದೇವೆ. ಅಧ್ಯಕ್ಷರು ನೇರವಾಗಿ ಈ ವಿಚಾರದಲ್ಲಿ ಸದ್ಯಕ್ಕೆ ಮಧ್ಯಪ್ರವೇಶಿಸುತ್ತಿಲ್ಲ. ಒಂದು ವೇಳೆ ಅಧ್ಯಕ್ಷರು ಮಧ್ಯಪ್ರವೇಶಿಸಿದರೆ ನಿಮಗೆ ವಿಷಯ ತಿಳಿಸುತ್ತೇವೆ’ ಎಂದು ಹೇಳಿದರು. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ರಷ್ಯಾ ವಿರುದ್ಧ ಹಲವು ನಿರ್ಬಂಧಗಳನ್ನು ಘೋಷಿಸಿದ್ದವು. ಆದರೆ ಭಾರತ ಮಾತ್ರ ಇಂಥ ಯಾವುದೇ ನಿರ್ಧಾರ ಘೋಷಿಸಿರಲಿಲ್ಲ.
ಜಪಾನ್ ಪ್ರಧಾನಿ ಕಿಶಿದಾ ಅವರೊಂದಿಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ‘ಹಿಂಸಾಚಾರ ತಕ್ಷಣ ನಿಲ್ಲಬೇಕು’ ಎಂದು ಹೇಳಿದ್ದರು. ವಿಶ್ವಸಂಸ್ಥೆಯಲ್ಲಿಯೂ ಇಂಥದ್ದೇ ಹೇಳಿಕೆಗಳನ್ನು ಭಾರತ ಸರ್ಕಾರ ನೀಡಿತ್ತು. ಆದರೆ ರಷ್ಯಾ ವಿರುದ್ಧ ಮತ ಚಲಾಯಿಸಬೇಕಾದ ಪರಿಸ್ಥಿತಿ ಎದುರಾದಾಗ ಭಾರತ ತಾಟಸ್ಥ್ಯ ನೀತಿ ಅನುಸರಿಸಿತು. ಜೋ ಬೈಡೆನ್ರ ಇತ್ತೀಚಿನ ಹೇಳಿಕೆಗಳಿಗೆ ಭಾರತ ಸರ್ಕಾರವೂ ಪ್ರತಿಕ್ರಿಯಿಸಿಲ್ಲ.
ರಷ್ಯಾ ವಿರುದ್ಧ ಭಾರತ ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿರುವ ಬೈಡೆನ್ರ ನಿಲುವು ಸಹ ವಿವಾದಗಳಿಂದ ಹೊರತಾಗಿಲ್ಲ. ಉಕ್ರೇನ್ನ ವಾಯುಗಡಿ ನಿರ್ಬಂಧಿಸಬೇಕು ಎನ್ನುವ ಉಕ್ರೇನ್ ಸರ್ಕಾರದ ಬೇಡಿಕೆಗೆ ಅಮೆರಿಕ ಅಥವಾ ನ್ಯಾಟೊ ಈವರೆಗೆ ಪ್ರತಿಕ್ರಿಯಿಸಿಲ್ಲ. ಯುದ್ಧಗ್ರಸ್ಥ ದೇಶದಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತೇವೆ ಎಂಬ ಅಮೆರಿಕ ಪ್ರಸ್ತಾವವನ್ನೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಳ್ಳಿ ಹಾಕಿದ್ದರು. ‘ನನಗೆ ಶಸ್ತ್ರಾಸ್ತ್ರಗಳು ಬೇಕು, ಪ್ರವಾಸವಲ್ಲ’ ಎಂದು ಕಟುವಾಗಿ ನುಡಿದಿದ್ದರು. ‘ರಷ್ಯಾಗೆ ನ್ಯಾಟೊ ಹೆದರಿದೆ’ ಎಂದು ಬಹಿರಂಗವಾಗಿ ಗಂಭೀರ ಆರೋಪ ಮಾಡಿದ್ದ ಝೆಲೆನ್ಸ್ಕಿ, ‘ನಮಗೆ ನ್ಯಾಟೊ ಸದಸ್ಯತ್ವ ಸಿಗುತ್ತದೆಯೋ, ಇಲ್ಲವೋ ಸ್ಪಷ್ಟಪಡಿಸಬೇಕು’ ಎಂದಿದ್ದರು.
ಇದನ್ನೂ ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು
Published On - 10:27 am, Tue, 22 March 22