ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಯುದ್ಧ ಪೀಡಿತ ಉಕ್ರೇನ್‌ಗೆ ಸೋಮವಾರ ಭೇಟಿ ನೀಡಿದ್ದರು. ಆದರೆ ಅವರು ಭೇಟಿ ನೀಡಿದ ಬಳಿಕವಷ್ಟೇ ಎಲ್ಲರಿಗೂ ತಿಳಿಯಿತು, ಬೈಡನ್ ಉಕ್ರೇನ್ ಭೇಟಿ ಎಷ್ಟು ಸೀಕ್ರೆಟ್ ಆಗಿ ನಡೆದಿತ್ತು ಗೊತ್ತಾ?. ಭೇಟಿ ವಿಚಾರ ಕೆಲವೇ ಕೆಲವು ಮಂದಿಗೆ ಮಾತ್ರ ತಿಳಿದಿತ್ತು. ಫೆಬ್ರವರಿ 24 ರಂದು, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಒಂದು ವರ್ಷ ತುಂಬುತ್ತದೆ. ಯುದ್ಧದ ಒಂದು ವರ್ಷ ಪೂರ್ಣಗೊಳ್ಳುವ ನಾಲ್ಕು ದಿನಗಳ ಮೊದಲು, ಯುಎಸ್ ಅಧ್ಯಕ್ಷ ಜೋ ಬೈಡನ್ ಇದ್ದಕ್ಕಿದ್ದಂತೆ ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ನೀಡಿದ್ದಾರೆ.
ಈ ರೀತಿಯಲ್ಲಿ ಉಕ್ರೇನ್‌ಗೆ ಬೈಡನ್ ಆಗಮನವು ಎಲ್ಲರಿಗೂ ಆಘಾತಕಾರಿಯಾಗಿದೆ. ಅಧ್ಯಕ್ಷರು ಈ ರೀತಿಯಲ್ಲಿ ಕೀವ್‌ಗೆ ತಲುಪುತ್ತಾರೆ ಎಂದು ಯಾರಿಗೂ ಯಾವುದೇ ಸುಳಿವು ಇರಲಿಲ್ಲ ಎಂದು ಅಮೆರಿಕನ್ ಮಾಧ್ಯಮ ಹೇಳುತ್ತದೆ.
ಕೀವ್‌ಗೆ ಬೈಡನ್ ಆಗಮನವು ಖಂಡಿತವಾಗಿಯೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೆರಳಿಸುವ ಕ್ರಮವಾಗಿದೆ. ಅನೇಕ ಜನರು ಈ ಕ್ರಮವನ್ನು ಬಹಳ ಸಂಕೀರ್ಣ ಬೆಳವಣಿಗೆ ಎಂದು ಹೇಳಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಪ್ರಸ್ತುತ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ. ಬೈಡನ್ ವಿದೇಶ ಪ್ರವಾಸಕ್ಕೆ ಹೊರಟಾಗಲೆಲ್ಲ ಕೋಟೆಯಂತೆ ಕಾಣುವ ಏರ್ ಫೋರ್ಸ್ ಒನ್ ನಲ್ಲಿ ಪ್ರಯಾಣಿಸುತ್ತಾರೆ.
ಮತ್ತಷ್ಟು ಓದಿ: Russia Ukraine War: ಉಕ್ರೇನ್ ಮೇಲಿನ ದಾಳಿಯಲ್ಲಿ ರಷ್ಯಾದ ಅರ್ಧದಷ್ಟು ಟ್ಯಾಂಕ್ಗಳು ನಾಶ: ಮರು ಯೋಜನೆಯೇ ದೊಡ್ಡ ಸವಾಲು
ಆದರೆ ಈ ಬಾರಿ ಅವರು 10 ಗಂಟೆಗಳ ಪ್ರಯಾಣದ ನಂತರ ಕೀವ್ ತಲುಪಿದರು ಮತ್ತು ಅದು ಕೂಡ ರೈಲಿನಲ್ಲಿ, ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಬೈಡನ್ ಮೊದಲು ಟ್ರಾನ್ಸ್-ಅಟ್ಲಾಂಟಿಕ್ ವಿಮಾನದ ಮೂಲಕ ಪೋಲೆಂಡ್ ತಲುಪಿದರು ಮತ್ತು ನಂತರ ರೈಲಿನಲ್ಲಿ ಉಕ್ರೇನ್‌ಗೆ ಗಡಿ ದಾಟಿದರು.
ಬೈಡನ್ ಯಾವುದೇ ಸೂಚನೆಯಿಲ್ಲದೆ ಭಾನುವಾರದ ಮುಂಜಾನೆ ಕತ್ತಲಿರುವಾಗಲೇ ವಾಷಿಂಗ್ಟನ್ನಿಂದ ಹೊರಟುಬಿಟ್ಟರು. ಪ್ರವಾಸವನ್ನು ರಹಸ್ಯವಾಗಿಡುವ ಭರವಸೆಯೊಂದಿಗೆ ಬೈಡನ್ ಅವರ ಅನಿರೀಕ್ಷಿತ ಭೇಟಿಯ ಬಗ್ಗೆ ಆಯ್ದ ಅಮೇರಿಕನ್ ಪತ್ರಕರ್ತರಿಗೆ ಮಾತ್ರ ತಿಳಿಸಲಾಯಿತು.
ಬೈಡನ್ ಅವರೊಂದಿಗೆ ಪೋಲೆಂಡ್ ಪ್ರವಾಸಕ್ಕೆ ತೆರಳಿದ್ದ ಪತ್ರಕರ್ತರ ಫೋನ್ಗಳನ್ನು ಇರಿಸಿಕೊಳ್ಳಲಾಗಿತ್ತು.
US ಅಧ್ಯಕ್ಷರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುವಿಲಿಯನ್, ಅವರ ಉಪ ಮುಖ್ಯಸ್ಥ ಜೇನ್ ಒ ಮ್ಯಾಲಿ ದಿಲ್ಲನ್ ಮತ್ತು ಓವಲ್ ಆಫೀಸ್ ಕಾರ್ಯಾಚರಣೆಗಳ ನಿರ್ದೇಶಕಿ ಅನ್ನಿ ಟೊಮಾಸಿನಿ ಇದ್ದರು.
ಬೈಡನ್ ಪ್ರವಾಸವನ್ನು ವೀಕ್ಷಿಸಿದ ಯಾರಿಗಾದರೂ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಜಾರ್ಜ್ ಬುಷ್ ಮತ್ತು ಡೊನಾಲ್ಡ್ ಟ್ರಂಪ್ ನೆನಪಾಗುತ್ತಾರೆ. ಅವರೆಲ್ಲರೂ ತಿಳಿಸದೇ ಇರಾನ್ ಮತ್ತು ಅಫ್ಘಾನಿಸ್ತಾನ ಪ್ರವಾಸಕ್ಕೆ ತೆರಳಿದ್ದರು. ಆದರೆ ಉಕ್ರೇನ್‌ಗೆ ಬೈಡನ್ ಅವರ ಭೇಟಿಯು ವಿಭಿನ್ನವಾಗಿತ್ತು.
ರಷ್ಯಾದ ಕ್ಷಿಪಣಿಗಳು ಯಾವುದೇ ಸಮಯದಲ್ಲಿ ದಾಳಿ ಮಾಡಬಹುದಾದ ದೇಶದ ರಾಜಧಾನಿಯಲ್ಲಿದ್ದರು. ಅಮೆರಿಕನ್ ಮಿಲಿಟರಿಯು ಉಕ್ರೇನಿಯನ್ ವಾಯುಪ್ರದೇಶದ ಮೇಲೆ ನಿಯಂತ್ರಣವನ್ನು ಹೊಂದಿಲ್ಲ, ಹಾಗೆಯೇ ಉಕ್ರೇನ್ಗೂ ಕೂಡ ಹಿಡಿತವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಎರಡೂ ದೇಶಗಳು ಈ ಪ್ರವಾಸವನ್ನು ಸುರಕ್ಷಿತವಾಗಿ ಪೂರ್ಣಗೊಳಿಸುವ ಭರವಸೆ ನೀಡಲು ಸಾಧ್ಯವಾಗಿರಲಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ