ಮಕ್ಕಳು ಸಹಜವಾಗಿಯೇ ತುಂಟರಾಗಿರುತ್ತಾರೆ. ಕೈಗೆ ಸಿಕ್ಕಿದ್ದನ್ನು ಎಸೆಯುವುದು, ಒಡೆಯುವುದು, ಮುರಿಯುವುದು ತೀರ ಸಾಮಾನ್ಯ. ಇಂಥದ್ದೇ ಒಂದು ಶಾಂಘೈ ಮ್ಯೂಸಿಯಂನಲ್ಲಿ ನಡೆದಿದೆ. ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ, ಅಮೂಲ್ಯವಾದ ವಸ್ತುವೊಂದನ್ನು ಇಬ್ಬರು ಮಕ್ಕಳು ಬೀಳಿಸಿ, ಒಡೆದಿದ್ದಾರೆ. ಅಂದಹಾಗೆ ಮಕ್ಕಳು ಒಡೆದು ಹಾಕಿದ್ದು ಯಾವುದೇ ಸಣ್ಣಪುಟ್ಟ ವಸ್ತುವನ್ನಲ್ಲ, ಬರೋಬ್ಬರಿ 64 ಸಾವಿರ ಯುಎಸ್ ಡಾಲರ್ ಮೌಲ್ಯದ ಡಿಸ್ನಿ ಕೋಟೆಯ ಗಾಜಿನ ಪ್ರತಿಕೃತಿಯನ್ನು. ಅಂದರೆ ಭಾರತದ ಕರೆನ್ಸಿ ಪ್ರಕಾರ ಇದರ ಬೆಲೆ ಬರೋಬ್ಬರಿ 47,53,139 ರೂಪಾಯಿ.
ಡಿಸ್ನಿ ಕೋಟೆ ಮಕ್ಕಳ ಆಕರ್ಷಣೀಯ ಕೇಂದ್ರ ಎನ್ನುವುದರಲ್ಲಿ ಅನುಮಾನವಿಲ್ಲ. ಸಿಂಡ್ರೆಲ್ಲಾ ಕಥೆಯನ್ನು ಇಷ್ಟಪಡುವ ಪ್ರತಿಯೊಬ್ಬರಿಗೂ ಡಿಸ್ನಿ ಕ್ಯಾಸೆಲ್ಲಾ ಬಗ್ಗೆ ಗೊತ್ತೇ ಇರುತ್ತದೆ. ಸಿಂಡ್ರೆಲ್ಲಾಳ ಕಾಲ್ಪನಿಕ ಮನೆಯಿದು. ವಾಲ್ಟ್ ಡಿಸ್ನಿ ಕಂಪನಿ ಇದನ್ನು ವಿನ್ಯಾಸ ಮಾಡಿದೆ. ಅದರ ಗಾಜಿನ ಪ್ರತಿಕೃತಿ ಇದೀಗ ಮುರಿಯಲ್ಪಟ್ಟಿದೆ. ಚೀನಾದ ವೀಬೋ ಎಂಬ ಟ್ವಿಟರ್ ಅಕೌಂಟ್ನಲ್ಲಿ ಈ ವಿಚಾರವನ್ನು ಬರೆಯಲಾಗಿದೆ.
ಮೇ ತಿಂಗಳಲ್ಲಿ ಇಬ್ಬರು ಪುಟ್ಟ ಮಕ್ಕಳು ತಮ್ಮ ಪಾಲಕರೊಂದಿಗೆ ಶಾಂಘೈ ಮ್ಯೂಸಿಯಂಗೆ ಆಗಮಿಸಿದ್ದರು. ಅವರು ಈ ಡಿಸ್ನಿ ಕೋಟೆಯ ಗಾಜಿನ ಪ್ರತಿಕೃತಿಯನ್ನು ಮುರಿದಿದ್ದಾರೆ. ಇದನ್ನು ದುರಸ್ತಿ ಮಾಡಲು ಅಗತ್ಯವಿರುವ ಖರ್ಚು ಭರಿಸುವುದಾಗಿ ಕುಟುಂಬ ತಿಳಿಸಿದೆ ಎಂದು ಮಾಧ್ಯಮಗಳೂ ವರದಿ ಮಾಡಿವೆ. ಇನ್ನು ಆ ಮಕ್ಕಳಿಗೂ ತಾವು ಮಾಡಿದ್ದು ಸರಿಯಲ್ಲ ಎಂಬುದು ಗೊತ್ತಾಯಿತು. ಕೂಡಲೇ ತಮ್ಮ ಪಾಲಕರ ಬಳಿ ಮತ್ತು ಮ್ಯೂಸಿಯಂ ಸಿಬ್ಬಂದಿಯ ಬಳಿ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಸುಮಾರು 60 ಕೆಜಿ ತೂಕದ ಈ ಡಿಸ್ನಿ ಕೋಟೆಯ ಗಾಜಿನ ಪ್ರತಿಕೃತಿ 2016ರಿಂದಲೂ ಮ್ಯೂಸಿಯಂನಲ್ಲಿತ್ತು. ಇದರಲ್ಲಿ 24 ಕ್ಯಾರೆಟ್ ಚಿನ್ನ ಕೂಡ ಇದೆ. ಇದನ್ನು ತಯಾರಿಸಲು ಬರೋಬ್ಬರಿ 500 ಗಂಟೆಗಳು ಬೇಕಾಗಿವೆ. ಸದ್ಯ ಮುರಿದಿರುವ ಡಿಸ್ನಿ ಕೋಟೆಯ ಗಾಜಿನ ಪ್ರತಿಕೃತಿಯನ್ನು ರಿಪೇರಿ ಮಾಡಿಲ್ಲ. ಹಾಗೇ ಪ್ರದರ್ಶನಕ್ಕೆ ಇಡಲಾಗಿದೆ.
ಇದನ್ನೂ ಓದಿ: ಹಿಂದು-ಮುಸ್ಲಿಂ ಮದುವೆಯಾದ್ರೆ ಮಕ್ಕಳು ಮುಸ್ಲಿಂ ಆಗ್ತಾರೆ; ಹಿಂದು ಆಗಲ್ಲ ಯಾಕೆ? ಕಂಗನಾ ಪ್ರಶ್ನೆ