Lambda Variant: 30ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಯ್ತು ಲ್ಯಾಂಬ್ಡಾ; ಡೆಲ್ಟಾಕ್ಕಿಂತಲೂ ಅಪಾಯಕಾರಿ ತಳಿ ಎಂದ ತಜ್ಞರು
ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಪೆರು ದೇಶದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಶೇ.82ರಷ್ಟು ಮಾದರಿಗಳು ಲ್ಯಾಂಬ್ಡಾ ತಳಿಯಿಂದ ಹರಡಿದ್ದಾಗಿವೆ ಎಂದು ಪ್ಯಾನ್ ಅಮೇರಿಕನ್ ಹೆಲ್ತ್ ಆರ್ಗನೈಸೇಶನ್ (PAHO) ಮಾಹಿತಿಯನ್ನು ಉಲ್ಲೇಖಿಸಿ ಯುರೋ ನ್ಯೂಸ್ ವರದಿ ಮಾಡಿದೆ.
ಭಾರತದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ತಕ್ಕಮಟ್ಟಿಗೆ ಹತೋಟಿಗೆ ಬಂದಿದೆ. ಹೀಗಾಗಿ ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಸಡಿಲಿಸಲಾಗುತ್ತಿದ್ದು ವ್ಯಾಪಾರ, ವಹಿವಾಟು, ಜನ ಸಂಚಾರ ಮತ್ತೆ ಆರಂಭವಾಗುತ್ತಿದೆ. ಆದರೆ, ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ಕಡಿಮೆ ಆಗಿಲ್ಲ ಎನ್ನುವ ಜತೆಗೆ ಡೆಲ್ಟಾ ರೂಪಾಂತರಿ ಹಾಗೂ ಸಂಭವನೀಯ ಮೂರನೇ ಅಲೆಯ ಅಪಾಯದ ಸಾಧ್ಯತೆಗಳನ್ನು ಅಲ್ಲಗಳೆಯಬೇಡಿ ಎಂದು ತಜ್ಞರು ಈಗಾಗಲೇ ಹಲವು ಸಲ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೇ, ಡೆಲ್ಟಾ ತಳಿಯ ಹೊರತಾಗಿ ಇನ್ನಷ್ಟು ರೂಪಾಂತರಿ ತಳಿಗಳು ಬಲಾಢ್ಯಗೊಳ್ಳಲಿವೆ ಎಂಬ ಎಚ್ಚರಿಕೆ ಈ ಹಿಂದೆಯೇ ಹೊರಬಿದ್ದಿತ್ತು. ಇದೀಗ ಆ ವಿಚಾರಕ್ಕೆ ಪುಷ್ಠಿ ನೀಡುವಂತಹ ಅಪಾಯಕಾರಿ ಬೆಳವಣಿಗೆ ಕಾಣಿಸಿಕೊಳ್ಳಲಾರಂಭಿಸಿದ್ದು ಡೆಲ್ಟಾ ತಳಿಗಿಂತಲೂ ಶಕ್ತಿಶಾಲಿ ಹಾಗೂ ಅಪಾಯಕಾರಿಯಾದ ಲ್ಯಾಂಬ್ಡಾ ತಳಿ ಜಗತ್ತಿನ ಸುಮಾರು 30 ದೇಶಗಳಲ್ಲಿ ಪತ್ತೆಯಾಗಿದೆ.
ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಪೆರು ದೇಶದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಶೇ.82ರಷ್ಟು ಮಾದರಿಗಳು ಲ್ಯಾಂಬ್ಡಾ ತಳಿಯಿಂದ ಹರಡಿದ್ದಾಗಿವೆ ಎಂದು ಪ್ಯಾನ್ ಅಮೇರಿಕನ್ ಹೆಲ್ತ್ ಆರ್ಗನೈಸೇಶನ್ (PAHO) ಮಾಹಿತಿಯನ್ನು ಉಲ್ಲೇಖಿಸಿ ಯುರೋ ನ್ಯೂಸ್ ವರದಿ ಮಾಡಿದೆ. ಅಂತೆಯೇ, ಈ ಬಗ್ಗೆ ಮಾಹಿತಿ ನೀಡಿರುವ ಬ್ರಿಟನ್ ದೇಶದ ಆರೋಗ್ಯ ಸಚಿವಾಲಯವು ಕಳೆದ ನಾಲ್ಕು ವಾರಗಳ ಅವಧಿಯಲ್ಲಿ ಲ್ಯಾಂಬ್ಡಾ ತಳಿ 30ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ಇದು ಡೆಲ್ಟಾ ಮಾದರಿಗಿಂತಲೂ ಬಲು ಹೆಚ್ಚು ಅಪಾಯಕಾರಿ ಎನ್ನುವುದನ್ನು ದೃಢವಾಗಿ ಹೇಳಿದೆ.
ಸೋಮವಾರ (ಜುಲೈ 5) ಈ ಬಗ್ಗೆ ಪ್ರಕಟಣೆ ನೀಡಿರುವ ಬ್ರಿಟನ್ ದೇಶದ ಆರೋಗ್ಯ ಸಚಿವಾಲಯ, ಲ್ಯಾಂಬ್ಡಾ ತಳಿಯ ಮೂಲ ಪೆರು ದೇಶ ಎನ್ನುವುದು ಗೊತ್ತಾಗಿದೆ. ಪೆರು ಜಗತ್ತಿನಲ್ಲೇ ಅತಿ ಹೆಚ್ಚು ಮರಣ ಪ್ರಮಾಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ತಿಳಿಸಿದೆ. ಅಲ್ಲದೇ ಸೋಮವಾರಕ್ಕೂ ಮೊದಲು ಬ್ರಿಟನ್ನಲ್ಲಿ ಒಟ್ಟು 5 ಲ್ಯಾಂಬ್ಡಾ ಪ್ರಕರಣಗಳು ಪತ್ತೆಯಾಗಿರುವುದು ಕೂಡಾ ಅದೇ ಸಂದರ್ಭದಲ್ಲಿ ವರದಿಯಾಗಿದೆ.
ಇದೀಗ ತಜ್ಞರು ಲ್ಯಾಂಬ್ಡಾ ತಳಿಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದು, ಇದು ಡೆಲ್ಟಾ ಮಾದರಿಗಿಂತಲೂ ಅಧಿಕ ಪ್ರಮಾಣದಲ್ಲಿ ಸೋಂಕು ಹರಡಿಸಬಹುದು. ಅದರಲ್ಲಿ ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಶಕ್ತಿಯೂ ಇದ್ದು, ಬೇರೆ ಮಾದರಿಗಳಿಗಿಂತ ವೇಗವಾಗಿ ಹರಡುತ್ತದೆಯಾದ್ದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಿವೆ ಎಂದು ಎಚ್ಚರಿಸಿದ್ದಾರೆ. ಆದರೆ, ಕೆಲ ತಜ್ಞರು ಮಾತ್ರ ಲ್ಯಾಂಬ್ಡಾ ತಳಿ ವೇಗವಾಗಿ ಹರಡುತ್ತದೆ ಎನ್ನುವುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಸದ್ಯ ಯುರೋಪ್ ಭಾಗದ ದೇಶಗಳು ಡೆಲ್ಟಾ ತಳಿಯ ವಿರುದ್ಧ ಸೆಣಸುತ್ತಿರುವ ಸಂದರ್ಭದಲ್ಲೇ ಲ್ಯಾಂಬ್ಡಾ ಕೂಡಾ ಪತ್ತೆಯಾಗಿರುವುದು ಪರಿಸ್ಥಿತಿ ಬಿಗಡಾಯಿಸುವುದಕ್ಕೆ ಕಾರಣವಾಗುತ್ತಿದೆ.
ಇದನ್ನೂ ಓದಿ: ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ
ಕೊರೊನಾ ಲಸಿಕೆ ಪಡೆಯದವರ ದೇಹದಲ್ಲೇ ವೈರಾಣು ರೂಪಾಂತರ ಸಾಧ್ಯತೆ: ತಜ್ಞರ ಎಚ್ಚರಿಕೆ