ಸಾವಿರಾರು ಅಮಾಯಕರ ಸಾವಿಗೆ ನ್ಯಾಯ ಸಿಕ್ಕಿದೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(Kamala Harris) ಹೇಳಿದ್ದಾರೆ. ಅಕ್ಟೋಬರ್ 7 ರಿಂದ ಪ್ರಾರಂಭವಾಗಿರುವ ಯುದ್ಧದಲ್ಲಿ ಹಮಾಸ್ ಸಾಕಷ್ಟು ಮಂದಿಯನ್ನು ಕೊಂದಿದೆ, ಹಲವರನ್ನು ಒತ್ತೆಯಾಳಾಗಿರಿಸಿಕೊಂಡು ಹತ್ಯೆ ಮಾಡಲಾಗಿದೆ, ಇದೀಗ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಯಿಂದ ಅವರೆಲ್ಲರ ಸಾವಿಗೆ ನ್ಯಾಯ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.
ಅವರ ಸಾವಿನಿಂದ ಅಮೆರಿಕ, ಇಸ್ರೇಲ್ ಮತ್ತು ಇಡೀ ಜಗತ್ತು ಖುಷಿಯಾಗಿದೆ. ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಇದು ಒಂದು ಅವಕಾಶವಾಗಿದೆ ಎಂದು ಹೇಳಿದ್ದಾರೆ. ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಗಾಜಾದಲ್ಲಿ ತಮ್ಮ ಕಾರ್ಯಾಚರಣೆಯೊಂದರಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ನನ್ನ ರಾಷ್ಟ್ರೀಯ ಭದ್ರತಾ ತಂಡಕ್ಕೆ ತಿಳಿಸಿದ್ದಾರೆ.
ಡಿನ್‌ಎ ಪರೀಕ್ಷೆ ಕೂಡ ಹಮಾಸ್ ನಾಯಕನ ಸಾವನ್ನು ದೃಢಪಡಿಸಿದೆ. ಇಸ್ರೇಲ್, ಅಮೆರಿಕ ಮತ್ತು ಇಡೀ ಜಗತ್ತಿಗೆ ಇದು ಒಳ್ಳೆಯ ದಿನ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಮಾಸ್ ನಾಯಕರಾಗಿ ಯಾಹ್ಯಾ ಸಿನ್ವಾರ್ ಅವರು ಸಾವಿರಾರು ಇಸ್ರೇಲಿಗಳು, ಪ್ಯಾಲೆಸ್ತೀನಿಯನ್ನರು, ಅಮೆರಿಕ ಮತ್ತು 30 ಕ್ಕೂ ಹೆಚ್ಚು ದೇಶಗಳ ನಾಗರಿಕರ ಸಾವಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ; ಇಸ್ರೇಲ್ ಘೋಷಣೆ
ಯಾಹ್ಯಾ ಹಮಾಸ್‌ನ ರಾಜಕೀಯ ವಿಭಾಗದ ನಾಯಕರಾಗಿದ್ದರು. ಇಸ್ರೇಲ್ ತನ್ನ ಮೋಸ್ಟ್ ವಾಂಟೆಡ್ ಜನರ ಪಟ್ಟಿಯಲ್ಲಿ ಆತನ ಹೆಸರನ್ನು ಸೇರಿಸಿತ್ತು. ಯಾಹ್ಯಾ ಸಿನ್ವಾರ್ ಅವರು ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದರು.
ಅಕ್ಟೋಬರ್ 17ರಂದು ಇಸ್ರೇಲ್ ದಾಳಿಯಲ್ಲಿ ಯಾಹ್ಯಾ ಸಿನ್ವಾರ್ ಸಾವನ್ನಪ್ಪಿದ ಸುದ್ದಿ ಬಂದಿತ್ತು. ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯಾ ಕೊಲ್ಲಲ್ಪಟ್ಟ ನಂತರ ಸಿನ್ವಾರ್ ಹಮಾಸ್‌ನ ನಾಯಕನಾಗಿದ್ದ. ಹಮಾಸ್ ಉಗ್ರರು ಅಡಗಿರುವ ಗಾಜಾಪಟ್ಟಿಯನ್ನು ಬಾಂಬ್ಗಳ ಸುರಿಮಳೆಯಿಂದ ಧ್ವಂಸಗೊಳಿಸುತ್ತಿರುವ ಇಸ್ರೇಲ್, ಮತ್ತೊಂದು ದೊಡ್ಡ ಯಶಸ್ಸು ಸಾಧಿಸಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭೀಕರ ದಾಳಿಯ ಹಿಂದಿನ ಮಾಸ್ಟರ್ಮೈಂಡ್ಗಳಲ್ಲಿ ಒಬ್ಬರಾದ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿರುವುದಾಗಿ ಇಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ. ಲೆಬನಾನ್ನ ಹಿಜ್ಬುಲ್ಲಾ ಬಂಡುಕೋರರ ಒಬ್ಬೊಬ್ಬ ನಾಯಕನನ್ನೂ ಹತ್ಯೆ ಮಾಡುತ್ತಿರುವ ನಡುವೆಯೇ ಹಮಾಸ್ ನಾಯಕರನ್ನೂ ಇಸ್ರೇಲ್ ಸದೆಬಡಿಯುತ್ತಿದೆ. ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಉಗ್ರರ ಕೈಯಲ್ಲಿ ಒತ್ತೆಯಾಳಾಗಿರುವ ಕುಟುಂಬಗಳಿಗೆ ಮಾಹಿತಿ ನೀಡಿ ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಜಾದ ಮೇಲೆ ಬಾಂಬ್, ಕ್ಷಿಪಣಿ ದಾಳಿ ನಡೆಸಿದ್ದು ಮೂವರು ಹಮಾಸ್ ಉಗ್ರರನ್ನು ಹೊಡೆದುರುಳಿಸಲಾಗಿದೆ. ಅವರಲ್ಲಿ ಯಾಹ್ಯಾ ಸಿನ್ವಾರ್ ಕೂಡ ಸತ್ತಿದ್ದಾನೆ ಎಂದು ಹೇಳಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಐಡಿಎಫ್, ಗಾಜಾದಲ್ಲಿ ಸೇನಾ ಪಡೆಗಳ ಕಾರ್ಯಾಚರಣೆಯಲ್ಲಿ ಯಾಹ್ಯಾ ಸಿನ್ವಾರ್ ಸೇರಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ