ಮಾಲೆ, ಜನವರಿ 7: ಲಕ್ಷದ್ವೀಪಕ್ಕೆ ಭೇಟಿ ನೀಡಿ ಫೋಟೋಶೂಟ್ನಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ ಹಾಗೂ ಭಾರತೀಯರ ಬಗ್ಗೆ ಅವಹೇಳನಕಾರಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮಾಲ್ಡೀವ್ಸ್ನ ಮೂವರು ಸಚಿವರನ್ನು ಅಲ್ಲಿನ ಸರ್ಕಾರ ಭಾನುವಾರ (ಜ. 7) ಅಮಾನತುಗೊಳಿಸಿದೆ. ವಜಾಗೊಂಡ ಸಚಿವರು ಮಾರಿಯಂ ಶಿಯುನಾ, ಮಾಲ್ಶಾ ಮತ್ತು ಹಸನ್ ಜಿಹಾನ್ ಎನ್ನಲಾಗಿದೆ.
ಇದಕ್ಕೂ ಮುನ್ನ, ಪ್ರಧಾನಿ ಮೋದಿ ಬಗ್ಗೆ ಮಾಲ್ಡೀವ್ಸ್ ಸಚಿವರಿಂದ ಅವಹೇಳನಕಾರಿ ಹೇಳಿಕೆ ಬಂದಿದ್ದಕ್ಕೆ ಭಾರತ ತಗಾದೆ ವ್ಯಕ್ತಪಡಿಸಿದೆ. ಅಧಿಕೃತವಾಗಿ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಮಾಧ್ಯಮ ವರದಿಗಳ ಪ್ರಕಾರ ರಾಜತಾಂತ್ರಿಕ ಮಟ್ಟದಲ್ಲಿ ಭಾರತ ಸರ್ಕಾರ ಈ ಬಗ್ಗೆ ತನ್ನ ಧ್ವನಿ ಎತ್ತಿರುವುದು ತಿಳಿದುಬಂದಿದೆ.
ಮಾಲ್ಡೀವ್ಸ್ನ ಯುವ ಸಬಲೀಕರಣ, ಮಾಹಿತಿ ಮತ್ತು ಕಲೆ ಖಾತೆಯ ಉಪ ಸಚಿವೆ ಆಗಿದ್ದ ಮಾರಿಯಂ ಶಿಯುನಾ ಅವರು ನರೇಂದ್ರ ಮೋದಿ ಅವರನ್ನು ಕ್ಲೌನ್ (ವಿದೂಷಕ) ಹಾಗು ಇಸ್ರೇಲ್ನ ಕೈಗೊಂಬೆ ಎಂದು ಲೇವಡಿ ಮಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ವಿವಾದ ಎದ್ದ ಬಳಿಕ ಅವರು ಆ ಪೋಸ್ಟ್ ಅಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸಚಿವರ ಅವಹೇಳನಕಾರಿ ಹೇಳಿಕೆ, ಈ ವಿಚಾರದಿಂದ ಅಂತರ ಕಾಯ್ದುಕೊಂಡ ಮಾಲ್ಡೀವ್ಸ್ ಸರ್ಕಾರ
ಮಾರಿಯಂ ಮಾತ್ರವಲ್ಲ, ಇತರಿಬ್ಬರು ಸಚಿವರಾದ ಮಾಲ್ಷಾ ಮತ್ತು ಹಸನ್ ಜಿಹಾನ್ ಕೂಡ ಪ್ರಧಾನಿ ಮೋದಿ ಹಾಗೂ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅಲ್ಲಿನ ಕೆಲ ಸಂಸದರೂ ಕೂಡ ಈ ವಿಚಾರದಲ್ಲಿ ಹಿಂದುಳಿದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರ ಬಗ್ಗೆ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಮಾತುಗಳನ್ನು ಆಡಿದ ಬಳಿಕ ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಆಗಿದೆ. ಸಾವಿರಾರು ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿದ್ದಾರೆ. ಮಾಲ್ಡೀವ್ಸ್ಗೆ ಅದರ ಪ್ರವಾಸೋದ್ಯಮ ಪ್ರಮುಖ ಆದಾಯ ಮೂಲವಾಗಿದೆ. ಚೀನೀಯರ ಬಳಿಕ ಭಾರತೀಯರೇ ಮಾಲ್ಡೀವ್ಸ್ ಪ್ರವಾಸಿಗರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಭಾರತೀಯರ ಪ್ರವಾಸಿಗರು ಬರುವುದು ನಿಂತದರೆ ಮಾಲ್ಡೀವ್ಸ್ ಆದಾಯಕ್ಕೆ ಒಂದಷ್ಟು ನಷ್ಟ ಬರಬಹುದು.
ಮಾಲ್ಡೀವ್ಸ್ನ ಈಗಿನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅಧಿಕಾರಕ್ಕೆ ಬಂದ ಬಳಿಕ ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿದೆ. ಮುಯಿಜು ವೈಯಕ್ತಿಕವಾಗಿ ಭಾರತ ವಿರೋಧಿ ಹಾಗೂ ಚೀನೀ ಪರ ಅಭಿಪ್ರಾಯ ಇರುವ ನಾಯಕ. ಅವರ ಸರ್ಕಾರದ ನೀತಿಗಳೂ ಅದೇ ರೀತಿ ಇವೆ. ಮಾಲ್ಡೀವ್ಸ್ನಲ್ಲಿ ನೆಲೆ ಇದ್ದ ಭಾರತೀಯ ಸೇನೆಗಳನ್ನು ವಾಪಸ್ ಕಳಿಸುವ ಅಜೆಂಡಾ ಇಟ್ಟುಕೊಂಡೇ ಚುನಾವಣೆ ಎದುರಿಸಿ ಈಗ ಗೆದ್ದು ಅಧಿಕಾರಕ್ಕೆ ಬಂದಿದೆ.
ಮಾಲ್ಡೀವ್ಸ್ ಅಧ್ಯಕ್ಷರು ಬಹಿರಂಗವಾಗಿಯೇ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದಿದೆ. ಅಷ್ಟೇ ಬಹಿರಂಗವಾಗಿ ಚೀನಾಗೆ ಬೆಂಬಲ ನೀಡುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Sun, 7 January 24