ಇದು ವಿಚಿತ್ರವಾದರೂ ನಿಜ. ಕ್ರಿಮಿನಲ್ ಗಳು ಹೀಗೂ ಇರ್ತಾರಾ ಅಂತ ನಿಮಗನಿಸಿದರೆ ಆಶ್ಚರ್ಯವಿಲ್ಲ. ಅಮೇರಿಕದ ಫ್ಲೋರಿಡಾನಲ್ಲಿ (Florida) ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ (slit throat) ಕೊಲೆ ಮಾಡಿದ್ದಾನೆ ಮತ್ತು ಆಕೆಯ ಕತ್ತಿನಿಂದ ರಕ್ತ ಹರಿದು ಬದುಕಿನ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದಾಗ ಅವಳ ಅತ್ಯಂತ ಫೇವರಿಟ್ ಹಾಡನ್ನು ಪ್ಲೇ ಮಾಡಿ ಅವಳ ಕೈ ಹಿಡಿದು ಪಕ್ಕದಲ್ಲಿ ಕೂತಿದ್ದನಂತೆ!
ದಿ ನ್ಯೂಸ್ ವೀಕ್ ವರದಿಯ ಪ್ರಕಾರ ಅಲ್ಟಾಮೊಂಟೆ ಸ್ಪ್ರಿಂಗ್ಸ್ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮಂಗಳವಾರ ಸ್ಥಳೀಯ ಅಪಾರ್ಟ್ಮೆಂಟ್ ಒಂದರಿಂದ ಕರೆ ಬಂದಿದ್ದು ಕರೆ ಮಾಡಿದವರು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದಿರುವನೆಂದು ಮಾಹಿತಿ ನೀಡಿದ್ದಾರೆ. ವ್ಯಕ್ತಿಯನ್ನು 21-ವರ್ಷ ವಯಸ್ಸಿನ ಶಿಚೆನ್ ಯಾಂಗ್ ಅಂತ ಗುರುತಿಸಲಾಗಿದೆ.
ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ, ಕೊಲೆಗಾರ ತನ್ನ ಫ್ಲ್ಯಾಟ್ ನಲ್ಲಿ ಸಾಕ್ಷ್ಯಗಳನ್ನು ಅಳಿಸಿಬಿಡುವ ಪ್ರಯತ್ನ ಮಾಡುತ್ತಿದ್ದಾನೆ ಅಂತಲೂ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಶಿಚೆನ್ ಯಾಂಗ್ ವಾಸವಾಗಿದ್ದ ಬಲ್ಲಾರ್ಡ್ ಓಣಿಯಲ್ಲಿರುವ ಮನೆಗೆ ಕೂಡಲೇ ಧಾವಿಸಿದ ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಪತ್ರಿಕೆಯ ವರದಿ ಪ್ರಕಾರ ಚಾರ್ಟರ್ ಪಾಯಿಂಟೆ ಅಪಾರ್ಟ್ಮೆಂಟ್ಸ್ ನಲ್ಲಿರುವ ಗೋಲ್ಡೆಲ್ಮ್ ನಿವಾಸಕ್ಕೆ ಬಂದ ಪೊಲೀಸರು ಮನೆ ಬಾಡಿಗೆ ನೀಡಿದ್ದ ಸಂಸ್ಥೆಯ ಕಚೇರಿಯಿಂದ ಬೀಗದ ಕೈಯನ್ನು ಪಡೆದು ಯಾಂಗ್ ಮನೆಯನ್ನು ಪ್ರವೇಶಿಸಿದ್ದಾರೆ. ಅವನಿಂದ ಕೊಲೆಯಾದ ಪತ್ನಿ ನ್ಹು ಕ್ವಿನ್ ಫಾಮ್ ದೇಹ ಬಾತ್ ರೂಮಲ್ಲಿ ರಕ್ತದ ಮಡುವಿನಲ್ಲಿ ಸಿಕ್ಕಿದೆ. ಅವಳ ಗಂಟಲು ಸೀಳಲಾಗಿತ್ತು.
ಪೋಲಿಸರು ವಿಚಾರಣೆ ಆರಂಭಿಸಿದಾಗ ಯಾಂಗ್ ತಾನು ವರ್ಣಿಸಲಾಗದ ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ. ಪತ್ನಿಯ ಮೇಲೆ ಹಲ್ಲೆ ನಡೆಸಿ ಗಂಟಲು ಸೀಳಿದ ಬಳಿಕ ಅವಳು ತೆವಳುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಎಳೆದುಕೊಂಡು ಹೋಗಿ ಬಾತ್ಟಬ್ ನಲ್ಲಿ ಮುಳುಗಿಸಿದೆ ಅಂತ ಅವನು ಹೇಳಿದ್ದಾನೆ.
ಅವಳನ್ನು ಕೊಲ್ಲುವ ಮುಂಚೆ ಇದು ಸರಿಯಲ್ಲ, ತಪ್ಪು ಅನ್ನೋ ಯೋಚನೆ ನಿನಗೆ ಬರಲಿಲ್ಲವೇ ಅಂತ ಪೊಲೀಸರು ಕೇಳಿದಾಗ, ನನಗೆ ಯಾಕೆ ಅಷ್ಟೊಂದು ಕೋಪ ಬಂದಿತ್ತು ಅನ್ನೋದು ಇಲ್ಲಿ ಪ್ರಶ್ನೆಯಲ್ಲ, ನಾನು ಯಾವುದಾದರೂ ಕೆಲಸ ಆರಂಭಿಸಿದರೆ ಅದನ್ನು ಮುಗಿಸುವವರೆಗೆ ಬಿಡೋದಿಲ್ಲ ಅಂತ ಹೇಳಿದನಂತೆ.
ಅವಳು ಸಾಯುವಾಗ ಅವಳ ಫೇವರಿಟ್ ಹಾಡು ಕೇಳಿಸಿದೆ ಮತ್ತು ಆಗ ಅವಳ ಕೈಯನ್ನು ಹಿಡಿದುಕೊಂಡಿದ್ದೆ ಅಂತಲೂ ಯಾಂಗ್ ಪೊಲೀಸರಿಗೆ ಹೇಳಿದ್ದಾನೆ.
ಅಂದಹಾಗೆ, ಪೊಲೀಸರಿಗೆ ಪೋನ್ ಮಾಡಿದ ವ್ಯಕ್ತಿಯ ಬಳಿಯೇ ಕೊಲಲೆಗಡುಕ ಯಾಂಗ್ ಕೆಲಸ ಮಾಡುತ್ತಿದ್ದ. ತಾನು ಅವನಿಗೆ ಫೋನ್ ಮಾಡಿ ಕೆಲಸಕ್ಕೆ ಬಾ ಅಂತ ಹೇಳಿದರೂ ಬರದೆ ಹೋದಾಗ ನನಗೆ ಸಂಶಯ ಹುಟ್ಟಿತ್ತು ಅಂತ ಮಾಲೀಕ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್