ಮಾಲಿಯಲ್ಲಿ ಒಂದೇ ದಿನ ಎರಡು ಕಡೆ ಉಗ್ರ ದಾಳಿ; ಯುಎನ್​ ಕಾರ್ಯಕರ್ತ ಸೇರಿ 32 ಜನರ ಭೀಕರ ಹತ್ಯೆ

| Updated By: Lakshmi Hegde

Updated on: Dec 04, 2021 | 3:46 PM

ಶುಕ್ರವಾರ ಮಾಲಿಯ ಉತ್ತರ ಭಾಗದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಮಿಷನ್​ಗೆ ಸೇರಿದ ಬೆಂಗಾವಲು ವಾಹನದ ಮೇಲೆಯೂ ಉಗ್ರರು ದಾಳಿ ನಡೆಸಿದ್ದು, ಈ ಅಟ್ಯಾಕ್​​ನಲ್ಲಿ ನಾಗರಿಕ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ.

ಮಾಲಿಯಲ್ಲಿ ಒಂದೇ ದಿನ ಎರಡು ಕಡೆ ಉಗ್ರ ದಾಳಿ; ಯುಎನ್​ ಕಾರ್ಯಕರ್ತ ಸೇರಿ 32 ಜನರ ಭೀಕರ ಹತ್ಯೆ
ಸಾಂಕೇತಿಕ ಚಿತ್ರ
Follow us on

ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ ಮಾಲಿ ದೇಶದಲ್ಲಿ ಭಯೋತ್ಪಾದಕ ದಾಳಿಗೆ 31 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ನಡೆದದ್ದು ಮಾಲಿ ದೇಶದ ಕೇಂದ್ರ ಭಾಗದಲ್ಲಿ. ಸ್ಥಳೀಯ ಮಾರುಕಟ್ಟೆಗೆ ಜನರನ್ನು ಸಾಗಿಸುತ್ತಿದ್ದ ಬಸ್​ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ 31 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದೆ..ಅಷ್ಟೇ ಅಲ್ಲ, ಇದೇ ದಿನ ಮಾಲಿ ದೇಶದ ಉತ್ತರ ಭಾಗದಲ್ಲಿ ವಿಶ್ವಸಂಸ್ಥೆಗೆ ಸೇರಿದ ಬೆಂಗಾವಲು ವಾಹನದ ಮೇಲೆಯೂ ಉಗ್ರರು ದಾಳಿ ಮಾಡಿದ್ದಾರೆ. ಇದರಲ್ಲಿ ಯುಎನ್​ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.  

ಈ ಬಸ್​ ಸಾಮಾನ್ಯವಾಗಿ ವಾರದಲ್ಲಿ ಎರಡು ದಿನ ಸೊಂಘೋ ಎಂಬ ಹಳ್ಳಿಯಿಂದ ಆರು ಮೈಲುಗಳಷ್ಟು ದೂರದಲ್ಲಿರುವ ಬಂಡಿಯಾಗರಾ ಎಂಬಲ್ಲಿಗೆ ಸಂಚಾರ ಮಾಡುತ್ತದೆ. ಈ ಬಸ್​ ಮೂಲಕ ಸೋಂಘೋ ಮತ್ತು ಸುತ್ತಲಿನ ಜನರು ಮಾರುಕಟ್ಟೆಗೆ ಹೋಗುತ್ತಾರೆ. ಆದರೆ ಶುಕ್ರವಾರ ಬಸ್​ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬಂಕಾಸ್​ ಎಂಬ ಪಟ್ಟಣದ ಮೇಯರ್ ಮೌಲೇ ಗಿಂಡೋ ತಿಳಿಸಿದ್ದಾರೆ. ಸಶಸ್ತ್ರ ಸಹಿತರಾಗಿ ಬಂದ ಜನರು ಬಸ್​​ ಮೇಲೆ ಒಂದೇ ಸಮನೆ ಗುಂಡಿನ ದಾಳಿ ನಡೆಸಿದ್ದಾರೆ, ಜನರಿಗೆ ಗುರಿಯಿಟ್ಟು ಫೈರಿಂಗ್ ಮಾಡಿದ್ದಾರೆ. ಈ ದುರ್ಘಟನೆಯಲ್ಲಿ 31 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಒಂದಷ್ಟು ಮಂದಿ ಕಾಣೆಯಾಗಿದ್ದಾರೆ ಎಂದು ಗಿಂಡೋ ಹೇಳಿದ್ದಾರೆ. ಇನ್ನು ಬಸ್​ ಮೇಲೆ ನಡೆದ ಭಯೋತ್ಪಾದಕ ದಾಳಿಯ ಕ್ರೂರತೆಯನ್ನು ಬಿಂಬಿಸುವ ಚಿತ್ರಗಳೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಹಾಗೇ, ಶುಕ್ರವಾರ ಮಾಲಿಯ ಉತ್ತರ ಭಾಗದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಮಿಷನ್​ಗೆ ಸೇರಿದ ಬೆಂಗಾವಲು ವಾಹನದ ಮೇಲೆಯೂ ಉಗ್ರರು ದಾಳಿ ನಡೆಸಿದ್ದು, ಈ ಅಟ್ಯಾಕ್​​ನಲ್ಲಿ ನಾಗರಿಕ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬೆಂಗಾವಲು ಪಡೆ ಉತ್ತರದ ನಗರವಾದ ಕಿಡಾಲ್‌ನಿಂದ ಗಾವೊಗೆ ಪ್ರಯಾಣಿಸುತ್ತಿತ್ತು. ಬೌರೆಮ್ ಪಟ್ಟಣದ ಈಶಾನ್ಯಕ್ಕೆ 62 ಮೈಲುಗಳಷ್ಟು ದೂರದಲ್ಲಿ ಗುಂಡಿನ ದಾಳಿ ಆಯಿತು ಎಂದೂ ಮಿಷನ್​ ತಿಳಿಸಿದೆ. ಅಂದಹಾಗೆ, ಮಾಲಿಯ ಈ ಭಾಗಗಳಲ್ಲಿ ಅಲ್​-ಖೈದಾ ಮತ್ತು ಐಸಿಸ್​ ಉಗ್ರಸಂಘಟನೆಗಳ ಉಗ್ರರು ಆಗಾಗ ದಾಳಿ ನಡೆಸುತ್ತಾರೆ. ಸದ್ಯಕ್ಕೆ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇಲ್ಲಿ ಯಾವಾಗಲೂ ಹಿಂಸಾಚಾರ, ಧಂಗೆಗಳು ನಡೆಯುತ್ತಲೇ ಇರುತ್ತವೆ.

ಇದನ್ನೂ ಓದಿ: Jio Cashback Offer: ಬೆಲೆ ಏರಿಕೆ ಬೆನ್ನಲ್ಲೇ ಆಫರ್​ಗಳ ಸುರಿಮಳೆ: ಏರ್ಟೆಲ್ ಬಳಿಕ ಜಿಯೋದಿಂದ ಬಂಪರ್ ಆಫರ್ ಘೋಷಣೆ