ಸರ್ಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತ, ಮೆರವಣಿಗೆ ಹೊರಟಿದ್ದವರ ಮೇಲೆ ಮಿಲಿಟರಿ ವಾಹನ (ಸೇನಾ ವಾಹನ) ಹರಿದ ಘಟನೆ ಮ್ಯಾನ್ಮಾರ್ನಲ್ಲಿ ನಡೆದಿದೆ. ಮ್ಯಾನ್ಮಾರ್ನ ಅತಿದೊಡ್ಡ ನಗರವಾದ ಯಾಂಗೋನ್ನಲ್ಲಿ ಈ ದುರಂತ ನಡೆದಿದ್ದು, ಏನಿಲ್ಲವೆಂದರೂ ಮೂರು ಜನರು ಮೃತಪಟ್ಟಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಪ್ರತಿಭಟನೆಯನ್ನು ಸಂಘಟನೆ ಮಾಡಿದವರೂ ಅದನ್ನು ದೃಢಪಡಿಸಿದ್ದಾರೆ.
ಈ ಹಿಂದೆ 2015 ಸೇನಾ ಬೆಂಬಲಿತ ಪಕ್ಷವನ್ನು ಸೋಲಿಸಿ, ಪ್ರಚಂಡ ಗೆಲುವಿನೊಂದಿಗೆ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಮ್ಯಾನ್ಮಾರ್ ಆಡಳಿತ ಚುಕ್ಕಾಣಿ ಹಿಡಿದಿತ್ತು. ಆದರೆ 2021ರ ಫೆಬ್ರವರಿಯಲ್ಲಿ ಮತ್ತೆ ಅಲ್ಲಿ ಸೇನಾ ದಂಗೆ ಶುರುವಾಗಿ, ಆಡಳಿತ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಮತ್ತು ಪ್ರಧಾನಿ ವಿನ್ ಮೈಂಟ್ ಮಿಲಿಟರಿ ಬಂಧನದಲ್ಲಿ ಇಟ್ಟಿತ್ತು. ಹಾಗೆ ಆಂಗ್ ಸಾನ್ ಸೂಕಿ ಅವರು ಸಾರ್ವಜನಿಕ ಅಶಾಂತಿಗೆ ಕಾರಣರಾಗಿದ್ದಾರೆ ಎಂಬ ಆರೋಪದಡಿ ಕೋರ್ಟ್ನಲ್ಲಿ ವಿಚಾರಣೆ ನಡೆದು, ಇಂದು ತೀರ್ಪು ಕೂಡ ಹೊರಬಿದ್ದಿದ್ದು, ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಅಂದಹಾಗೆ ಸೂಕಿ ವಿರುದ್ಧ ಸಾರ್ವಜನಿಕ ಶಾಂತಿ ಕದಡಿದ ಆರೋಪ, ಕೊವಿಡ್ 19 ಶಿಷ್ಟಾಚಾರ ಉಲ್ಲಂಘನೆ ಸೇರಿ ಒಟ್ಟು 12 ಪ್ರಕರಣಗಳನ್ನು ಹೊರೆಸಲಾಗಿದೆ.
ಇನ್ನೊಂದೆಡೆ ಮ್ಯಾನ್ಮಾರ್ನಲ್ಲಿ ಸೇನಾ ದಂಗೆ ನಡೆದು ಐದಾರು ತಿಂಗಳುಗಳೇ ಕಳೆದಿದ್ದರೂ ಸಾರ್ವಜನಿಕರು ದೇಶಾದ್ಯಂತ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸೇನಾ ಆಡಳಿತದ ಸರ್ಕಾರದ ಧೋರಣೆಯನ್ನು ವಿರೋಧಿಸಿ ಶಾಂತಿಯುತವಾಗಿಯೇ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗೇ, ಇಂದು ಸೂಕಿ ವಿರುದ್ಧ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ನಿನ್ನೆಯೂ ಕೂಡ ಯಾಂಗೋನ್ ಸೇರಿ ದೇಶದ ಹಲವು ಭಾಗಗಳಲ್ಲಿ ಶಾಂತಿಯುತ ಮೆರವಣಿಗೆ ನಡೆದಿತ್ತು. ಆದರೆ ಯಾಂಗೋನ್ನಲ್ಲಿ ಪ್ರತಿಭಟನಾನಿರತರ ಮೇಲೆ ಸೇನಾ ವಾಹನ ಹರಿದಿದ್ದಾಗಿ ವರದಿಯಾಗಿದೆ.
ಪ್ರತಿಭಟನಾನಿರತರ ಮೇಲೆ ವಾಹನ ಹರಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅದರಲ್ಲಿ ಮೆರವಣಿಗೆ ನಡೆಸುತ್ತಿದ್ದ ಜನರೆಡೆಗೆ ಸೇನಾ ಟ್ರಕ್ ರಭಸದಿಂದ ನುಗ್ಗುವುದನ್ನು, ಜನರು ಓಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹಾಗೇ, ವಾಹನ ಈ ಕಡೆಗೇ ನುಗ್ಗುತ್ತಿದೆ..ಯಾರಾದರೂ ಸಹಾಯ ಮಾಡಿ, ಇದು ಮಕ್ಕಳನ್ನೂ ಬಿಡುವುದಿಲ್ಲ, ಓಹ್, ಸಾವು, ಓಡಿ..ಓಡಿ ಎಂಬಿತ್ಯಾದಿ ಕೂಗಾಟ, ಕಿರುಚಾಟಗಳೂ ವಿಡಿಯೋದಲ್ಲಿ ಕೇಳುತ್ತವೆ ಎಂದು ಮ್ಯಾನ್ಮಾರ್ ಮಾಧ್ಯಮಗಳು ವರದಿ ಮಾಡಿವೆ. ಅದಾದ ನಂತರ ಐವರು ಶಸಸ್ತ್ರ ಸಹಿತರಾದ ಯೋಧರು ವಾಹನದಿಂದ ಕೆಳಗೆ ಇಳಿದು, ಪ್ರತಿಭಟನಾ ನಿರತರ ಬೆನ್ನಟ್ಟಿದ್ದಾರೆ, ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹೀಗೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರಲ್ಲಿ 11 ಮಂದಿಯನ್ನು ಈಗಾಗಲೇ ಸೇನಾಡಳಿತ ಬಂಧಿಸಿದೆ. ಹೀಗೆ ಬಂಧಿತರಾದವರಲ್ಲಿ ಮೂವರು ಗಾಯಾಳುಗಳು. ಮ್ಯಾನ್ಮಾರ್ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ವಾಹನಗಳು ಹರಿದಿದ್ದು ಇದೇ ಮೊದಲಲ್ಲ. ಸೇನೆ ಅಧಿಕಾರ ವಹಿಸಿಕೊಂಡಾಗಿನಿಂದಲೂ ಆಗಾಗ ಹೀಗೆ ಕಾರುಗಳನ್ನು ಅವರ ಮೇಲೆ ಹರಿಸುತ್ತಲೇ ಇದೆ. ಮದ್ದುಗುಂಡುಗಳ ದಾಳಿಯೂ ಆಗುತ್ತಿದೆ. ಸೇನಾಡಳಿತ ಈವರೆಗೆ ಏನಿಲ್ಲವೆಂದರೂ 1300 ನಾಗರಿಕರನ್ನು ಹತ್ಯೆ ಮಾಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ಗಳಿಗೆ ನುಗ್ಗಿ ಶೂ, ಚಪ್ಪಲಿ, ಬಟ್ಟೆಗಳ ಕಳ್ಳತನ
Published On - 1:18 pm, Mon, 6 December 21