ಎರಡು ಬೇರೆ ಬೇರೆ ಕೊರೊನಾ ಲಸಿಕೆಗಳನ್ನು ಪಡೆಯುವುದು ಹೆಚ್ಚು ಪರಿಣಾಮಕಾರಿ; ಸ್ಪ್ಯಾನಿಶ್ ಅಧ್ಯಯನದ ಪ್ರಾಥಮಿಕ ವರದಿ

|

Updated on: May 19, 2021 | 2:38 PM

ಈ ವಿಧಾನವನ್ನು ಅನುಸರಿಸಿದಾಗ ಒಂದೇ ಲಸಿಕೆಯನ್ನು ಎರಡು ಬಾರಿ ಪಡೆದವರಿಗಿಂತಲೂ ಮೊದಲು ಆಸ್ಟ್ರಾಜೆನೆಕಾ ನಂತರ ಫೈಜರ್ ಲಸಿಕೆ ಸ್ವೀಕರಿಸಿದವರ ದೇಹದಲ್ಲಿ ರೋಗ ನಿರೋಧಕ ಶಕ್ತಿ 30 ರಿಂದ 40 ಪಟ್ಟು ಹೆಚ್ಚಾಗಿರುವುದು ಗೋಚರಿಸಿದೆ.

ಎರಡು ಬೇರೆ ಬೇರೆ ಕೊರೊನಾ ಲಸಿಕೆಗಳನ್ನು ಪಡೆಯುವುದು ಹೆಚ್ಚು ಪರಿಣಾಮಕಾರಿ; ಸ್ಪ್ಯಾನಿಶ್ ಅಧ್ಯಯನದ ಪ್ರಾಥಮಿಕ ವರದಿ
ಆಸ್ಟ್ರಾಜೆನೆಕಾ - ಫೈಜರ್​ (ಪ್ರಾತಿನಿಧಿಕ ಚಿತ್ರ)
Follow us on

ಜಗತ್ತಿನ ಎಲ್ಲಾ ರಾಷ್ಟ್ರಗಳು ಕೊರೊನಾ ಸೋಂಕಿನಿಂದ ಮುಕ್ತಗೊಳ್ಳಲು ತರಹೇವಾರಿ ಪ್ರಯೋಗಗಳಲ್ಲಿ ನಿರತವಾಗಿವೆ. ಭಾರತದಲ್ಲೂ ಎರಡನೇ ಅಲೆ ವ್ಯಾಪಿಸಿದ ನಂತರ ಕೊರೊನಾ ಲಸಿಕೆಯನ್ನು ಚುರುಕುಗೊಳಿಸಬೇಕು ಆ ಮೂಲಕ 3ನೇ ಅಲೆ ಬಾರದಂತೆ ತಡೆಗೋಡೆ ನಿರ್ಮಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಪಣತೊಟ್ಟಿದೆ. ಸದ್ಯದ ಮಟ್ಟಿಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆಯನ್ನೇ ಬಹುಮುಖ್ಯ ಅಸ್ತ್ರವನ್ನಾಗಿ ಬಳಸುವಂತೆ ವಿವಿಧ ದೇಶಗಳ ತಜ್ಞರು ಸಲಹೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಲುವಾಗಿ ಲಸಿಕೆಗಳ ಮೇಲೆಯೇ ಹೆಚ್ಚಿನ ಗಮನ ವಹಿಸಲಾಗುಯತ್ತಿದ್ದು, ವಿವಿಧ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ ಕೆಲ ತಜ್ಞರು ಒಬ್ಬ ವ್ಯಕ್ತಿಗೆ ಎರಡು ವಿವಿಧ ಲಸಿಕೆಗಳನ್ನು ನೀಡುವುದರಿಂದ ಯಾವ ಪರಿಣಾಮವಾಗಬಹುದು ಎಂಬ ಅಧ್ಯಯನ ಕೈಗೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಮಹತ್ತರ ಫಲಿತಾಂಶವೊಂದು ಲಭ್ಯವಾಗಿದ್ದು, ಸ್ಪ್ಯಾನಿಶ್ ಅಧ್ಯಯನಕಾರರ ಪ್ರಕಾರ ಮೊದಲ ಡೋಸ್​ನಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಪಡೆದವರಿಗೆ ಎರಡನೇ ಬಾರಿಗೆ ಫೈಜರ್ ಲಸಿಕೆ ನೀಡುವುದು ಅತ್ಯಂತ ಪರಿಣಾಮಕಾರಿ ಎನ್ನಲಾಗಿದೆ.

ಇದುವರೆಗೆ ಎರಡು ಡೋಸ್​ಗಳೂ ಒಂದೇ ಸಂಸ್ಥೆಯ ಲಸಿಕೆಯದ್ದಾಗಿರಬೇಕು ಎಂದು ತಜ್ಞರು ಒತ್ತಿ ಹೇಳುತ್ತಿದ್ದರು. ಲಸಿಕೆ ವಿತರಣೆಯ ಆರಂಭಿಕ ಹಂತದಲ್ಲಿ ಅದುವೇ ಸುರಕ್ಷಿತ ವಿಧಾನವಾದ ಕಾರಣ ಎಲ್ಲೆಡೆ ಕಟ್ಟುನಿಟ್ಟಾಗಿ ಆ ಕ್ರಮವನ್ನೇ ಪಾಲಿಸಲಾಗುತ್ತಿದೆ. ಆದರೆ, ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ತಜ್ಞರು ಎರಡು ಬೇರೆ ಬೇರೆ ಡೋಸ್ ನೀಡಿದರೆ ಏನಾಗಬಹುದು ಎಂಬ ಪ್ರಯೋಗ ನಡೆಸಿದ್ದು, ಫಲಿತಾಂಶ ಸಕಾರಾತ್ಮಕವಾಗಿ ಕಂಡುಬಂದಿರುವುದು ಹೊಸ ಭರವಸೆ ಮೂಡಿಸಿದೆ.

ತಜ್ಞರು ಹೇಳುವಂತೆ ಮೊದಲ ಡೋಸ್ ಆಸ್ಟ್ರಾಜೆನೆಕಾ ಲಸಿಕೆ ಪಡೆದವರಿಗೆ ಎರಡನೇ ಡೋಸ್​ನಲ್ಲಿ ಫೈಜರ್ ಲಸಿಕೆ ನೀಡಿದಾಗ ಅದು ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದು ಅಧ್ಯಯನದ ಪ್ರಾಥಮಿಕ ಹಂತದಲ್ಲಿ ಕಂಡುಬಂದಿದೆ. ಈ ವಿಧಾನವನ್ನು ಅನುಸರಿಸಿದಾಗ ಒಂದೇ ಲಸಿಕೆಯನ್ನು ಎರಡು ಬಾರಿ ಪಡೆದವರಿಗಿಂತಲೂ ಮೊದಲು ಆಸ್ಟ್ರಾಜೆನೆಕಾ ನಂತರ ಫೈಜರ್ ಲಸಿಕೆ ಸ್ವೀಕರಿಸಿದವರ ದೇಹದಲ್ಲಿ ರೋಗ ನಿರೋಧಕ ಶಕ್ತಿ 30 ರಿಂದ 40 ಪಟ್ಟು ಹೆಚ್ಚಾಗಿರುವುದು ಗೋಚರಿಸಿದೆ.

ಈ ಅಧ್ಯಯನದಲ್ಲಿ 18ರಿಂದ 59ವರ್ಷ ವಯೋಮಾನದ ಸುಮಾರು 670 ಜನ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದು, ಆ ಪೈಕಿ 450 ಜನ ಎರಡು ಡೋಸ್ ಲಸಿಕೆ ಸ್ವೀಕರಿಸಿದ್ದಾರೆ. ಅದರಲ್ಲಿ ಕೇವಲ ಶೇ.1.7ರಷ್ಟು ಮಂದಿಗೆ ಅಡ್ಡಪರಿಣಾಮ ಉಂಟಾಯಿತಾದರೂ ಅದು ತಲೆನೋವು, ಸ್ನಾಯು ಸೆಳೆತ, ಸಾಧಾರಣ ಅಸ್ವಸ್ಥತೆಗೆ ಸೀಮಿತವಾಗಿತ್ತೇ ಹೊರತು ಅದಕ್ಕಿಂತ ಹೆಚ್ಚಿನ ಸಮಸ್ಯೆ ಆಗಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಇದೇ ಅಧ್ಯಯನ ಬ್ರಿಟನ್​ನಲ್ಲೂ ನಡೆದಿದ್ದು ಅಲ್ಲಿ ಮೊದಲು ಆಸ್ಟ್ರಾಜೆನೆಕಾ ನಂತರ ಫೈಜರ್ ಹಾಗೂ ಮೊದಲು ಫೈಜರ್ ನಂತರ ಆಸ್ಟ್ರಾಜೆನೆಕಾ ಲಸಿಕೆ ಪಡೆದವರಲ್ಲಿ ತಲೆನೋವು, ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಂಡಿದ್ದು ಒಂದೇ ಲಸಿಕೆಯನ್ನು ಎರಡು ಡೋಸ್ ಪಡೆಯುವವರಿಗಿಂತ ತುಸು ಹೆಚ್ಚು ಅಡ್ಡಪರಿಣಾಮ ಗೋಚರಿಸಿದೆ. ಆದರೂ ಅದಕ್ಕೆ ಸಂಬಂಧಿಸಿದ ವಿಸ್ತೃತ ವರದಿ ಮಾಸಾಂತ್ಯದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ಒಂದು ವೇಳೆ ಈ ಅಧ್ಯಯನ ಎಲ್ಲಾ ಹಂತದಲ್ಲೂ ಪರಿಣಾಮಕಾರಿ ಎಂದು ಸಾಬೀತಾದಲ್ಲಿ ಭಾರತ ಸೇರಿದಂತೆ ಲಸಿಕೆ ಕೊರತೆ ಎದುರಿಸುತ್ತಿರುವ ಅನೇಕ ದೇಶಗಳ ಪಾಲಿಗೆ ಇದು ವರವಾಗಲಿದೆ. ಆದರೆ, ಆಸ್ಟ್ರಾಜೆನೆಕಾ, ಫೈಜರ್ ಮಿಶ್ರಣ ಯಶಸ್ವಿಯಾದ ಮಾತ್ರಕ್ಕೆ ಎಲ್ಲಾ ಲಸಿಕೆಗಳಲ್ಲೂ ಇದು ನಿಜವಾಗುತ್ತದೆ ಎಂದು ಹೇಳಲಾಗದ ಕಾರಣ ಸೂಕ್ತ ಅಧ್ಯಯನ ನಡೆಯುವ ತನಕ ಕಾದು ನೋಡಬೇಕಿದೆ.

(Mixing of 2 different corona vaccines Astrazeneca and Pfizer is more effective than giving the same twice says spanish study)

ಇದನ್ನೂ ಓದಿ:
ಎರಡು ಬೇರೆ ಬೇರೆ ಕೊರೊನಾ ಲಸಿಕೆ ತೆಗೆದುಕೊಂಡರೆ ಏನಾಗುತ್ತೆ? ಅಧ್ಯಯನ ಹೇಳಿದ್ದೇನು? 

ಕೊವಿಶೀಲ್ಡ್​ ಲಸಿಕೆ ಮೊದಲ ಡೋಸ್​ಗೂ ಎರಡನೇ ಡೋಸ್​ಗೂ ನಡುವೆ 12-16 ವಾರಗಳ ಅವಧಿ; ಪದೇಪದೆ ಯಾಕೆ ಬದಲಾವಣೆ?